ಗುರುವಾರ , ಸೆಪ್ಟೆಂಬರ್ 23, 2021
27 °C

ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೋಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ಅನುಶ್ರೀ, ‘ಕಿಶೋರ್‌ ಅಮಾನ್‌ ಶೆಟ್ಟಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆರೋಪಿಗಳು ಸಾವಿರ ಹೇಳುತ್ತಾರೆ. ಹೇಳಿಕೆಯಲ್ಲಿ ಏನು ಬೇಕಾದರೂ ಹೇಳಬಹುದು. ಪೊಲೀಸರು ಯಾವುದು ಸತ್ಯ, ಸುಳ್ಳು ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ’ ಎಂದಿದ್ದಾರೆ.

‘ಅನುಶ್ರೀ ಡ್ರಗ್ಸ್ ಸೇವನೆ ಜೊತೆಗೆ ಅದರ ಸಾಗಾಟ ಮಾಡುತ್ತಿದ್ದರು’ ಎಂದು ಪ್ರಕರಣದ ಎರಡನೇ ಆರೋಪಿ ಕಿಶೋರ್ ಪೊಲೀಸರಿಗೆ ಹೇಳಿಕೆ ನೀಡಿದ್ದನ್ನು ಆಧರಿಸಿ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಪ್ರಸ್ತಾಪಿಸಲಾಗಿತ್ತು. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅನುಶ್ರೀ, ‘ಕಳೆದ ಬಾರಿ ವಿಚಾರಣೆಗೆ ಕರೆದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟಿದ್ದೇನೆ. ನನಗೆ ಯಾರ ಸಹಾಯವೂ ಬೇಕಿಲ್ಲ. ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದೆ. ಯಾವ ಪ್ರಭಾವಶಾಲಿಗಳಿಗೂ ನಾನು ಕರೆ ಮಾಡಿಲ್ಲ. ಯಾರ ಸಹಾಯವನ್ನೂ ತೆಗೆದುಕೊಂಡಿಲ್ಲ’ ಎಂದಿದ್ದಾರೆ.

‘ನಾನು ಭಯಪಟ್ಟುಕೊಂಡು ಓಡಿಹೋಗಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಲಸದ ನಿಮಿತ್ತ ಬೆಂಗಳೂರಿನಿಂದ ಮುಂಬೈಗೆ ನಾನು ಸೋಮವಾರವೇ ಹೋಗಿದ್ದೆ. ನಾನು ಎಲ್ಲಿಯೂ ಹಾರಿಹೋಗಿಲ್ಲ. ಇದು ನನ್ನ ನೆಲ. ಯಾವ ಆರೋಪಗಳು ಬಂದರೂ ನಾನು ಎದುರಿಸುತ್ತೇನೆ. ಮತ್ತೆ ವಿಚಾರಣೆಗೆ ಕರೆದರೆ ಖಂಡಿತಾ ಹಾಜರಾಗುತ್ತೇನೆ. ಈ ಬೆಳವಣಿಗೆಯ ಬಗ್ಗೆ ನನಗೆ ಬೇಜಾರಿದೆ. ಯಾವುದೂ ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸುವುದಿಲ್ಲ. ನಾನು ಬಹಳ ಸರಳ ವ್ಯಕ್ತಿ. ನಾನು ಯಾವ ಪಾರ್ಟಿ, ಪಬ್‌ಗಳಿಗೆ ಹೋಗುವುದಿಲ್ಲ. ಯಾಕೆ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ನಾನು ಸತ್ಯವಾಗಿದ್ದೇನೆ’ ಎಂದು ಹೇಳಿದ್ದಾರೆ.

 ಆಸ್ತಿಗೆ ಸಂಬಂಧಿಸಿದಂತೆ ಬಿಗ್‌ ಪ್ರಶಾಂತ್‌ ಸಂಬರಗಿ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅನುಶ್ರೀ, ‘ಹೌದು ನನ್ನ ಮನೆ ಓರಾಯನ್‌ ಮಾಲ್‌ ಎದುರಿಗೇ ಇದೆ. ಆದರೆ ಅದು ಬಾಡಿಗೆ ಮನೆ. ಇಡೀ ಕಟ್ಟಡವೇನೂ ನನ್ನದಲ್ಲ. ಈ ಕುರಿತು ಮನೆ ಮಾಲೀಕರನ್ನೇ ಕೇಳಬಹುದು. ಮಂಗಳೂರಿನ ಕದ್ರಿಯಲ್ಲಿ ಒಂದು ಮನೆ ಇದೆ. ಅದರ ಸಾಲ ಇನ್ನೂ ಬಾಕಿ ಇದೆ’ ಎಂದಿದ್ದಾರೆ.

ಇದನ್ನೂ ಓದಿ... ಡ್ರಗ್ಸ್‌ ‘ಶುಗರ್‌ ಡ್ಯಾಡಿ’, ಮಾಸ್ಟರ್‌ ಮೈಂಡ್‌ ಶೀಘ್ರ ಬಹಿರಂಗ: ಸಂಬರಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು