ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನೋತ್ಸವ ಸಂದರ್ಭದಲ್ಲಿ ಸಂಘ ಇನ್ನಷ್ಟು ವಿಸ್ತಾರ: ದತ್ತಾತ್ರೇಯ ಹೊಸಬಾಳೆ

ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ
Last Updated 30 ಅಕ್ಟೋಬರ್ 2021, 12:00 IST
ಅಕ್ಷರ ಗಾತ್ರ

ಧಾರವಾಡ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ 2025ಕ್ಕೆ ನೂರು ವರ್ಷಗಳು ಪೂರೈಸುತ್ತಿದ್ದು, ಆ ಹೊತ್ತಿಗೆ ದೇಶದ ಪ್ರತಿ ಮಂಡಳಕ್ಕೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಬೈಠಕ್‌ನ ಕೊನೆಯ ದಿನವಾದ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕಾಶ್ಮೀರ, ಪೂರ್ವ ರಾಜ್ಯಗಳು ಸೇರಿದಂತೆ ಕೆಲವೆಡೆ ಸಂಘದ ಕಾರ್ಯಚಟುವಟಿಕೆ ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ದೇಶದಲ್ಲಿರುವ 6483 ಮಂಡಳಗಳಲ್ಲಿ ಈವರೆಗೂ 5683 ಮಂಡಳವನ್ನು ಆರ್‌ಎಸ್‌ಎಸ್ ತಲುಪಿದೆ. ನಾಗಾಲ್ಯಾಂಡ್, ಲಕ್ಷದ್ವೀಪ, ಜಮ್ಮ ಮತ್ತು ಕಾಶ್ಮೀರದಲ್ಲಿ ಶಾಖೆಗಳನ್ನು ತೆರೆಯಲು ಈವರೆಗೂ ಹಲವು ತೊಡಕುಗಳು ಇದ್ದವು. ಈಗ ಹಂತಹಂತವಾಗಿ ಸಂಘವು ಅಲ್ಲಿಯೂ ತನ್ನ ಕಾರ್ಯವನ್ನು ವಿಸ್ತರಿಸಲಿದೆ’ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹೊಸಬಾಳೆ, ‘ಪರಿಸರ ಸಂರಕ್ಷಣೆ ನಿತ್ಯದ ಕ್ರಿಯೆ ಆಗಬೇಕು. ಆದರೆ ದೀಪಾವಳಿಯಲ್ಲಿ ಪಟಾಕಿ ಸಿಡಿಸಬಾರದು ಎಂಬುದು ಹಬ್ಬದ ಹೊಸ್ತಿಲಲ್ಲಿ ನಿಂತಿರುವಾಗ ಹೇಳುವುದು ಸರಿಯಲ್ಲ. ಇದರಿಂದ ಈಗಾಗಲೇ ವ್ಯಾಪಾರಕ್ಕೆ ಸಜ್ಜುಗೊಂಡವರಿಗೆ ತೀವ್ರ ನಷ್ಟ ಉಂಟಾಗಲಿದೆ. ಹೀಗಾಗಿ ಇದನ್ನು ಮೊದಲೇ ನಿರ್ಧರಿಸಿ ಅದಕ್ಕೆ ತಕ್ಕಂತೆ ಪರ್ಯಾಯ ಯೋಜನೆ ರೂಪಿಸುವುದು ಅಗತ್ಯ’ ಎಂದರು.

ಜನಸಂಖ್ಯೆ ನಿಯಂತ್ರಣ ಹಾಗೂ ಮತಾಂತರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿ ದೇಶವೂ ಒಂದು ಏಕರೂಪ ನೀತಿಯನ್ನು ಹೊಂದುವುದು ಅನಿವಾರ್ಯ.ವೈಯಕ್ತಿಕವಾಗಿ ಧರ್ಮ ಬದಲಾಯಿಸಲು ಸಂವಿಧಾನದಲ್ಲಿ ಅವಕಾಶ ಇದ್ದೇ ಇದೆ. ಆದರೆ ಬಲವಂತದ ಮತಾಂತರ ನಿಲ್ಲಬೇಕು. ಒಂದೊಮ್ಮೆ ಈಗಾಗಲೇ ಯಾರಾದರೂ ಮತಾಂತರಗೊಂಡಿದ್ದರೆ ಅವರು ಘೋಷಿಸಿಕೊಳ್ಳಬೇಕು’ ಎಂದರು.

ಬೆಲೆ ಏರಿಕೆ ಕುರಿತು ಮಾತನಾಡಿ, ‘ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪೆಟ್ರೋಲಿಯಂ ಬದಲು ಪರ್ಯಾಯ ಇಂಧನಗಳನ್ನು ಇನ್ನಷ್ಟು ವೃದ್ಧಿಸುವ ಕಾರ್ಯ ವೇಗವಾಗಿ ಆಗಬೇಕಿದೆ’ ಎಂದರು.

‘ಕೋವಿಡ್‌ನಿಂದ ಶಾಖೆಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಆರಂಭವಾಗಿದೆ. ದೇಶದಾದ್ಯಂತ ಒಟ್ಟು 54,383 ಶಾಖೆಗಳು ನಡೆಯುತ್ತಿವೆ. ಇವುಗಳಲ್ಲಿ ಪ್ರತಿನಿತ್ಯ 34ಸಾವಿರ ಶಾಖೆ, ಪ್ರತಿ ವಾರ 12,708ಶಾಖೆ ಹಾಗೂ 7900 ತಿಂಗಳ ಶಾಖೆಗಳು ನಡೆಯುತ್ತಿವೆ. ಕೋವಿಡ್‌ ಸಂಭವನೀಯ ಮೂರನೇ ಅಲೆ ಎದುರಾದಲ್ಲಿ, ಹಳ್ಳಿಗಳಲ್ಲಿ ಜನಸೇವೆಗೆ 4ಲಕ್ಷ ಕಾರ್ಯಕರ್ತರನ್ನು ತರಬೇತಿ ಮೂಲಕ ಸಜ್ಜುಗೊಳಿಸಲಾಗಿದೆ’ ಎಂದರು.

‘910 ಜಿಲ್ಲೆಗಳಲ್ಲಿ 900 ಜಿಲ್ಲೆಗಳಲ್ಲಿ ನಮ್ಮ ಕಾರ್ಯವ್ಯಾಪ್ತಿ ವಿಸ್ತರಣೆಗೊಂಡಿದೆ. 560 ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ 5 ಶಾಖೆಗಳಿವೆ. 84 ಜಿಲ್ಲೆಗಳಲ್ಲಿ ಶೇ 100ರಷ್ಟು ಶಾಖೆಗಳನ್ನು ಹೊಂದಲಾಗಿದೆ. ಮುಂದಿನ 3 ವರ್ಷಗಳಲ್ಲಿ ಪ್ರತಿ ಮಂಡಳವರೆಗೂ ತಲುಪುವ ಕುರಿತು ಗುರಿ ಹೊಂದಲಾಗಿದೆ. ಈ ಕಾರ್ಯಕ್ಕಾಗಿ 2 ವರ್ಷಗಳಲ್ಲಿ ಸಂಘದ ಕಾರ್ಯನಿರ್ವಹಿಸುವ ಕಾರ್ಯಕರ್ತರನ್ನು ಇನ್ನಷ್ಟು ಗಟ್ಟಗೊಳಿಸುವ ಯೋಜನೆ ಈ ಬೈಠಕ್‌ನಲ್ಲಿ ರೂಪಿಸಲಾಗಿದೆ’ ಎಂದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಪ್ಪುನೀರಿನ ಶಿಕ್ಷೆ ಪಡೆದ ವೀರ ಯೋಧರನ್ನು, ರಾಣಿ ಅಬ್ಬಕ್ಕ ಅವರಂತ ಬಹಳಷ್ಟು ಮಹಿಳಾ ಸ್ವಾತಂತ್ರ್ಯ ಸೇನಾನಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯೋಧರನ್ನು ಪರಿಚಯಿಸುವ ಮತ್ತು ಇತಿಹಾಸದ ಪುಟದಲ್ಲಿ ದಾಖಲಿಸುವ ಪ್ರಕ್ರಿಯೆ ಸಂಘದ ಮೂಲಕ ನಡೆಸಲಾಗುವುದು.ಸಿಖ್ ಧರ್ಮದ 9ನೇ ಗುರು ತೇಜ್‌ ಬಹದ್ದೂರ್ ಅವರನ್ನು ಸ್ಮರಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು. ಇದರ ಮೂಲ ವರ್ತಮಾನದ ಯುವ ಸಮೂಹವು ಭಾರತವನ್ನು ಎಲ್ಲಾ ಆಯಾಮಗಳಿಂದ ಶ್ರೇಷ್ಠ ರಾಷ್ಟ್ರವನ್ನಾಗಿ ನಿರ್ಮಿಸಲು ಸಂಕಲ್ಪ ತೆಗೆದುಕೊಳ್ಳುವ ಕಾರ್ಯಕ್ರಮ ಇದಾಗಲಿದೆ’ ಎಂದರು.

‘ಬಾಂಗ್ಲಾದೇಶದ ಹಿಂದೂಗಳ ಮೇಲಿನ ಹಲ್ಲೆ ನಿಯಂತ್ರಿಸುವುದು, ಅಸ್ಪಶೃತೆ, ಸ್ವದೇಶಿ ಜಾಗೃತಿ, ಉದ್ಯೋಗ ಸೃಷ್ಟಿ, ಸ್ಥಳೀಯ ಉದ್ಯೋಗಕ್ಕೆ ಒತ್ತು, ಹೊಸ ಶಿಕ್ಷಣ ಸೇರಿದಂತೆ ಅನೇಕ ವಿಚಾರಗಳ ಕುರಿತು ಮುಂಬರುವ ದಿನಗಳಲ್ಲಿ ಇನ್ನಷ್ಟು ಬೆಳಕು ಚೆಲ್ಲಲು ಆರ್‌ಎಸ್‌ಎಸ್ ಯೋಜಿಸಿದೆ’

ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಪುನೀತ್ ರಾಜಕುಮಾರ್‌ ನಿಧನಕ್ಕೆ ಅವರು ಶೋಖ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT