ಭಾನುವಾರ, ಸೆಪ್ಟೆಂಬರ್ 26, 2021
21 °C
ಸಾರ್ವಜನಿಕ ಗಣೇಶೋತ್ಸವ: ಆರ್‌.ಅಶೋಕ ಸ್ಪಷ್ಟನೆ

ಐದು ದಿನಗಳಿಗಿಂತ ಹೆಚ್ಚು ಕಾಲ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲ: ಆರ್‌. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಐದು ದಿನಗಳಿಗಿಂತ ಹೆಚ್ಚು ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ಈ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಚಿವ ಆರ್.ಅಶೋಕ ಸ್ಪಷ್ಟಪಡಿಸಿದರು.

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಐದು ದಿನಗಳಿಗೆ ಸೀಮಿತಗೊಳಿಸಿದ್ದಕ್ಕೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಾವ ಸಂಘಟನೆಯೂ ನಮ್ಮ ಬಳಿ ಈ ರೀತಿ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ನಿರ್ಬಂಧ ಉಲ್ಲಂಘಿಸಿದರೆ ಪೊಲೀಸ್‌ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ನಿಶ್ಚಿತ. ಜೀವ ಹಾಗೂ ಜೀವನಗಳೆರಡೂ ಪ್ರಾಮುಖ್ಯ. ಹಾಗಾಗಿ ನಿರ್ಬಂಧಗಳನ್ನು ಎಲ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಪಾಲಿಸಬೇಕು. ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪೂಜಿಸಬೇಕು’ ಎಂದು ಕೋರಿದರು. 

‘ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜೆಗೊಂಡ ಮೂರ್ತಿಗಳ ವಿಸರ್ಜನೆಗೆ ಕೆರೆಗಳಲ್ಲಿ ಕಲ್ಯಾಣಿಗಳನ್ನು ನಿರ್ಮಿಸಲಿದ್ದೇವೆ. ಬೆಳಿಗ್ಗೆಯಿಂದ ರಾತ್ರಿ 9ರವರೆಗೆ ವಿಗ್ರಹ ವಿಸರ್ಜನೆಗೆ ಅವಕಾಶ ಕಲ್ಪಿಸಲಿದ್ದೇವೆ.  ಸಮಿತಿಯವರು ಮೂರ್ತಿಗಳನ್ನು ಕಲ್ಯಾಣಿ ಬಳಿಯ ಟೇಬಲ್‌ನಲ್ಲಿ ಇಟ್ಟು ಪೂಜೆ ಮುಗಿಸಿ ಹೊರಡಬೇಕು. ವಿಗ್ರಹ ವಿಸರ್ಜನೆಗಾಗಿ ಈಜುಗಾರರನ್ನು ನೇಮಿಸಲಾಗುತ್ತದೆ’ ಎಂದರು.

‘ಗಣೇಶ ಚತುರ್ಥಿ ಕಳೆದ ಐದು ದಿನಗಳ ಬಳಿಕ ಕಲ್ಯಾಣಿಗಳಲ್ಲಿ ವಿಗ್ರಹ ವಿಸರ್ಜನೆಗೆ ಅವಕಾಶವಿಲ್ಲ. ಎಸಿಪಿ ದರ್ಜೆಯ ಪೊಲೀಸ್‌ ಅಧಿಕಾರಿ ಹಾಗೂ ಪಾಲಿಕೆಯ ಎಇಇ ವಿಗ್ರಹ ವಿಸರ್ಜನೆ ಕಾರ್ಯದ ವೇಳೆ ಕೋವಿಡ್‌ ನಿಯಂತ್ರಣ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲಿದ್ದಾರೆ’ ಎಂದರು.

‘ಗಣೇಶ ವಿಗ್ರಹ ಪ್ರತಿಷ್ಠಾಪಿಸಿದ ಕಡೆ ಕೋವಿಡ್‌ ಲಸಿಕೆ ಅಭಿಯಾನವನ್ನೂ ನಡೆಸಲಿದ್ದೇವೆ. ಸಮಿತಿಯವರಿಗೆ ಲಸಿಕೆ ಹಾಕಿಸುತ್ತೇವೆ. ಸೋಂಕು ನಿವಾರಕ ಸಿಂಪಡಣೆಗೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.

‘ಮನೆಯಲ್ಲಿ ಪೂಜಿಸುವ ಗಣೇಶ ವಿಗ್ರಹಗಳ ವಿಸರ್ಜನೆಗೆ ಸಂಚಾರ ತೊಟ್ಟಿಯ ವ್ಯವಸ್ಥೆ ಕಲ್ಪಿಸಲಿದ್ದೇವೆ. ವಾಹನದವರು ಧ್ವನಿವರ್ಧಕದಲ್ಲಿ ಘೋಷಣೆ ಮಾಡಲಿದ್ದಾರೆ. ಜನರು ಅಲ್ಲಿಗೆ ತೆರಳಿ ವಿಗ್ರಹ ವಿಸರ್ಜನೆ ಮಾಡಬೇಕು. ಮನೆಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡುವ ಶೇ 80 ಜನ ಗಣೇಶೋತ್ಸವದ ದಿನವೇ ವಿಗ್ರಹ ವಿಸರ್ಜನೆ ಮಾಡಿದರೆ ಬಹಳ ಒಳ್ಳೆಯದು’ ಎಂದರು.

‘ಮನೆಯಲ್ಲಿ ಗಣೇಶ ಮೂರ್ತಿಯನ್ನು ವರ್ಷಪೂರ್ತಿ ಪೂಜಿಸಬಹುದು. ಆದರೆ, ಅದನ್ನು ಮನೆಯಲ್ಲೇ ವಿಸರ್ಜನೆ ಮಾಡಬೇಕು’ ಎಂದರು.

‘ವಾರ್ಡ್‌ಗೊಂದೇ ಗಣೇಶ– ಅಧಿಕಾರಿಗಳ ವಿವೇಚನೆಗೆ’

‘ಕೋವಿಡ್‌ ಇರುವುದರಿಂದ ಆದಷ್ಟು ಕಡಿಮೆ ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಿಸಬೇಕು ಎಂಬುದು ನಮ್ಮ ಆಶಯ. ವಾರ್ಡ್‌ನಲ್ಲಿ ಒಂದೇ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ನಿರ್ಬಂಧ ವಿಧಿಸುವ ಚಿಂತನೆ ಇದೆ. ಬಹುತೇಕ ಕಡೆ ಒಂದಕ್ಕಿಂತ ಹೆಚ್ಚು ಗಣಪತಿ ಇಡಲು ಬೇಡಿಕೆ ಬಂದಿಲ್ಲ. ಇಂತಹ ಬೇಡಿಕೆ ಬಂದರೆ ಸ್ಥಳೀಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಹಾಗೂ ಪಾಲಿಕೆ ಎಇಇ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಅಶೋಕ ತಿಳಿಸಿದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಆನ್‌ಲೈನ್‌ ವ್ಯವಸ್ಥೆ

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಗಣೇಶೋತ್ಸವವನ್ನು ಆನ್‌ಲೈನ್‌ ಮೂಲಕ ವೀಕ್ಷಿಸಲು ವ್ಯವಸ್ಥೆ ಕಲ್ಪಿಸುವುದಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹೇಳಿವೆ. ಇದಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲಿ ಪೂಜೆ ವೇಳೆ 20ಕ್ಕಿಂತ ಹೆಚ್ಚು ಜನ ಗುಂಪುಗೂಡುವುದಿಲ್ಲ’ ಎಂದು ಸಚಿವರು ತಿಳಿಸಿದರು. 

ಕೋವಿಡ್ ಹರಡಿದರೆ ಹೊಣೆ ಯಾರು?

ಸಾರ್ವಜನಿಕ ಗಣೇಶೋತ್ಸವದಿಂದ ಕೋವಿಡ್‌ ಹರಿಡಿದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಓಣಂ ಹಾಗೂ ಮುಸ್ಲಿಮರ ಹಬ್ಬಗಳ ಸಾರ್ವಜನಿಕ ಆಚರಣೆಗೆ ಅನುಮತಿ ನೀಡಿದ್ದರಿಂದ ಕೇರಳದಲ್ಲಿ ಸಮಸ್ಯೆ ಎದುರಾಗಿದೆ. ನಮ್ಮಲ್ಲಿ ಕಳೆದ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಮೂರು ಪಟ್ಟು ಹೆಚ್ಚು ಕೋವಿಡ್‌ ಇತ್ತು. ಜನ ನಿಯಮ ಪಾಲನೆ ಮಾಡಿದ್ದರಿಂದ ಸಮಸ್ಯೆ ಆಗಿಲ್ಲ. ಈ ಬಾರಿಯೂ ಕೋವಿಡ್‌ ವಿಘ್ನ ಬಾರದಿರಲಿ ಎಂಬುದೇ ನಮ್ಮ ಆಶಯ. ಸಕಾರಾತ್ಮಕವಾಗಿ ಯೊಚಿಸೋಣ. ಋಣಾತ್ಮಕ ಚಿಂತನೆ ಬೇಡ’ ಎಂದರು.

‘ಸಾರ್ವಜನಿಕ ಗಣೇಶೋತ್ಸವಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲೇ ಮುಖ್ಯಮಂತ್ರಿಯವರು ತೀರ್ಮಾನ ಕೈಗೊಂಡಿದ್ದಾರೆ. ಈ ಸಲವೂ ಸೋಂಕು ಪತ್ತೆ ದರ ಶೇ 2ಕ್ಕಿಂತ ಹೆಚ್ಚು ಇರುವಲ್ಲಿ ಇದಕ್ಕೆ ಅವಕಾಶ ಕೊಡುತ್ತಿಲ್ಲ’ ಎಂದರು.

 ಸಾರ್ವಜನಿಕ ಗಣೇಶೋತ್ಸವ: ನಿರ್ಬಂಧಗಳು

* ‌ವಿಗ್ರಹಗಳ ಮೆರವಣಿಗೆಗೆ ಅವಕಾಶ ಇಲ್ಲ

* ವಿಗ್ರಹ ಸಾಗಿಸುವ ವಾಹನದಲ್ಲಿ 20ಕ್ಕಿಂತ ಕಡಿಮೆ ಜನ ಇರಬೇಕು.

* ಪೂಜಾ ವೇದಿಕೆಗಳಲ್ಲಿ ಏಕಕಾಲಕ್ಕೆ ಗರಿಷ್ಠ 20 ಮಂದಿ ಸೇರಲು ಮಾತ್ರ ಅವಕಾಶ

* ಬೆಳಿಗೆ 7ರಿಂದ ರಾತ್ರಿ 8ರ ಒಳಗೆ ಎಲ್ಲ ಪೂಜಾ ವಿಧಿಗಳನ್ನು ಪೂರ್ಣಗೊಳಿಸಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು