ಶುಕ್ರವಾರ, ಸೆಪ್ಟೆಂಬರ್ 25, 2020
27 °C
‘ಮಣಗುತ್ತಿ; ಹೊರಗಡೆಯವರ ಮಧ್ಯೆಸ್ಥಿಕೆ ಅವಶ್ಯಕತೆ ಇಲ್ಲ’

ಶಿವಸೇನಾ ಮುಖಂಡ ಸಂಜಯ ರಾವುತ್‌ ಹೇಳಿಕೆಗೆ ತಿರುಗೇಟು ನೀಡಿದ ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ವಿಷಯವು ಸ್ಥಳೀಯ ಸಮಸ್ಯೆಯಾಗಿದ್ದು, ಸ್ಥಳೀಯರೇ ಬಗೆಹರಿಸಿಕೊಳ್ಳುತ್ತಾರೆ. ಮುಂಬೈನವರು, ದೆಹಲಿಯವರು, ಬೆಂಗಳೂರಿನವರ ಮಧ್ಯೆಸ್ಥಿಕೆಯ ಅಗತ್ಯವಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಶಿವಸೇನಾ ಮುಖಂಡ ಸಂಜಯ ರಾವುತ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಕೂರಿಸಲು ಯಾರಿಗೂ ವಿರೋಧವಿಲ್ಲ. ಜಾಗದ ಸಮಸ್ಯೆಯಿಂದಾಗಿ ಉಳಿದುಕೊಂಡಿದೆ ಅಷ್ಟೆ. ಅದನ್ನು ಸ್ಥಳೀಯರು ಬಗೆಹರಿಸಿಕೊಳ್ಳುತ್ತಾರೆ. ಆದರೆ, ಈ ವಿಷಯದಲ್ಲಿ ಮಹಾರಾಷ್ಟ್ರದ ಮಾಧ್ಯಮಗಳು ಪ್ರಚೋದನೆ ನೀಡುತ್ತಿವೆ’ ಎಂದು ಆರೋಪಿಸಿದರು.

‘ಕೆಲವರು ಉದ್ದೇಶಪೂರ್ವಕವಾಗಿ ದೊಡ್ಡ ವಿಷಯವಾಗಿ ಬಿಂಬಿಸುತ್ತಿದ್ದಾರೆ. ಇಂತಹವರೇ ಕರಾಳ ದಿನ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಕಲ್ಲು ಎಸೆಯುತ್ತಾರೆ. ಇದರಿಂದ ಏನೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ನಾವು ಕೂಡ ಶಿವಾಜಿ ಮಹಾರಾಜರಿಗೆ ಗೌರವ ನೀಡುತ್ತೇವೆ. ಶಿವಾಜಿ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸುತ್ತೇವೆ’ ಎಂದು ಹೇಳಿದರು.

ಪ್ರಧಾನಿಗೆ ಕಾಳಜಿ ಇಲ್ಲ: ‘ಅತಿವೃಷ್ಠಿ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅನುದಾನ ಕೊಟ್ಟಿಲ್ಲ. ಅವರಿಗೆ ನಮ್ಮ ರಾಜ್ಯದ ಮೇಲೆ ಪ್ರೀತಿ, ಕಾಳಜಿ ಇಲ್ಲ’ ಎಂದು ವ್ಯಂಗ್ಯವಾಡಿದರು.

 ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಲವು ಬಾರಿ ಕೇಳಿಕೊಂಡಿದ್ದರೂ ಅನುದಾನ ಸಿಕ್ಕಿಲ್ಲ. ಯಾವ ರಾಜ್ಯ ಕೇಳಿಲ್ಲವೋ, ಎಲ್ಲಿ ಪ್ರವಾಹ ಅಷ್ಟಾಗಿ ಗಂಭೀರವಾಗಿರಲಿಲ್ಲವೋ ಅಂತಹ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಅತಿ ಹೆಚ್ಚು ಹಾನಿಗೊಳಗಾದ ನಮ್ಮ ರಾಜ್ಯಕ್ಕೆ ಅತ್ಯಂತ ಕಡಿಮೆ ಅನುದಾನ ನೀಡಿದ್ದರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು