ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್‌. ರಂಗಪ್ಪಗೆ ‘ಸುಪ್ರೀಂ’ ನೋಟಿಸ್‌

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅವ್ಯವಹಾರ ಪ್ರಕರಣ:
Last Updated 18 ಜುಲೈ 2021, 17:30 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಮಾಜಿ ಕುಲಪತಿ ಕೆ.ಎಸ್‌. ರಂಗಪ್ಪ ಅವರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಎಫ್‌ಐಆರ್‌ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ವಿಶ್ವವಿದ್ಯಾಲಯದ ಕುಲಸಚಿವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ರಂಗಪ್ಪ ಅವರಿಗೆ ನ್ಯಾಯಾಲಯ ನೋಟಿಸ್‌ ನೀಡಿದೆ.

2020ರ ಸೆಪ್ಟೆಂಬರ್‌ 15ರಂದು ಹೈಕೋರ್ಟ್‌ ಈ ಪ್ರಕರಣದ ಬಗ್ಗೆ ಆದೇಶ ನೀಡಿತ್ತು. ಎಫ್‌ಐಆರ್‌ನಲ್ಲಿ ಮಾಡಿದ್ದ ಆರೋಪಗಳ ಬಗ್ಗೆ ಪೊಲೀಸರು ‘ಬಿ’ ರಿಪೋರ್ಟ್‌ ಸಲ್ಲಿಸಿದ್ದಾರೆ ಎನ್ನುವುದನ್ನು ನ್ಯಾಯಾಲಯ ಪರಿಗಣಿಸಿತ್ತು.

ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿರುವ ಕರ್ನಾಟಕದ ರಾಜ್ಯಪಾಲರು ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರಗಳ ಬಗ್ಗೆ ವಿಶೇಷ ಪರಿಶೀಲನೆಗೆ ನಿರ್ದೇಶನ ನೀಡಿದ್ದರು ಮತ್ತು ನಿಯಮಗಳ ಉಲ್ಲಂಘನೆಗಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೂಚಿಸಿದ್ದರು ಎಂದು ಕೆಎಸ್‌ಒಯು ಪರ ಹಾಜರಾದ ಹಿರಿಯ ವಕೀಲ ಬಸವ ಪ್ರಭು ಪಾಟೀಲ್ ಅವರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

2016ರ ಆಗಸ್ಟ್‌ 19ರಂದು ಮೊದಲ ದೂರು ದಾಖಲಾಗಿತ್ತು. ಆದರೆ, ಈ ದೂರು ಎಲ್ಲ ಆರೋಪಗಳನ್ನು ಒಳಗೊಂಡಿರಲಿಲ್ಲ. ನಂತರ, 2019ರ ನವೆಂಬರ್‌ 20ರಂದು ಎರಡನೇ ದೂರು ದಾಖಲಿಸಲಾಗಿತ್ತು. ಈ ದೂರಿನಲ್ಲಿ ಎಲ್ಲ ಆರೋಪಗಳನ್ನು ಸೇರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ, ಎಫ್‌ಐಆರ್‌ ಅನ್ನು ರದ್ದುಪಡಿಸಿರುವ ಹೈಕೋರ್ಟ್‌ ಆದೇಶ ಸಮರ್ಥನೀಯವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಹೃಷಿಕೇಶ್‌ ರಾಯ್‌ ಅವರನ್ನೊಳಗೊಂಡ ಪೀಠವು ರಂಗಪ್ಪ ಅವರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್‌ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT