ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಮೆಟ್ರೊ, ರಸ್ತೆಗೆ

ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ಧರಣಿ l ಉತ್ತರ ವಾಪಸ್‌ ಪಡೆದ ಶ್ರೀರಾಮುಲು
Last Updated 9 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು (ಎಸ್‌ಸಿಎಸ್‌ಪಿ– ಟಿಎಸ್‌ಪಿ) ಮೆಟ್ರೊ ಕಾಮಗಾರಿ, ಮೇಲ್ಸೇತುವೆ, ಜಿಲ್ಲಾ ರಸ್ತೆ ನಿರ್ಮಾಣಕ್ಕೆ ಬಳಸುತ್ತಿರುವ ವಿಚಾರವು ವಿಧಾನಸಭೆಯಲ್ಲಿ ಬುಧವಾರ ಕೋಲಾಹಲಕ್ಕೆ ಕಾರಣವಾಯಿತು.

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಉತ್ತರವನ್ನು ಖಂಡಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಧರಣಿ ನಡೆಸಿದರು. ಸಚಿವರ ಉತ್ತರಕ್ಕೆ ಆಡಳಿತ ಪಕ್ಷದ ಸದಸ್ಯರೂ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸಚಿವರು ಉತ್ತರವನ್ನು ವಾಪಸ್‌ ಪಡೆದರು.

ಶೂನ್ಯ ವೇಳೆಯಲ್ಲಿ ಬಿಜೆಪಿಯ ಪಿ. ರಾಜೀವ್‌, ‘ಬಳಕೆಯಾಗಿಲ್ಲ ಎಂಬ ಕಾರಣ ನೀಡಿ ದಲಿತರಿಗೆ ಮೀಸಲಿಟ್ಟ ಯೋಜನೆಯ ಹಣವನ್ನು ಮೆಟ್ರೊ ಕಾಮಗಾರಿ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ರಸ್ತೆಗಳಿಗೆ ಬಳಸಲಾಗುತ್ತಿದೆ’ ಎಂದು ಗಮನ ಸೆಳೆದರು. ‘ವಿಶೇಷ ಯೋಜನೆಯ ಹಣ ದುರುಪಯೋಗ ಆಗುತ್ತಿದೆ‘ ಎಂದು ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ದೂರಿದರು. ’ಇದು ಕಾಯ್ದೆಯ ಉಲ್ಲಂಘನೆ‘ ಎಂದು ಬಿಎಸ್‌ಪಿಯ ಎನ್‌.ಮಹೇಶ್‌ ಹೇಳಿದರು.

ಬಿ.ಶ್ರೀರಾಮುಲು, ‘ಆರ್ಥಿಕ ಇಲಾಖೆಯ ಜತೆಗೆ ಈ ಬಗ್ಗೆ ಚರ್ಚಿಸಲಾಗುವುದು. ಡೀಮ್ಡ್‌ ವೆಚ್ಚ ಮೊತ್ತವನ್ನು ಶೇ 5 ಅಥವಾ ಶೇ 10ಕ್ಕೆ ನಿಗದಿಪಡಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸುತ್ತೇನೆ’ ಎಂದರು. ಸಚಿವರ ಈ ಉತ್ತರದಿಂದ ಸದಸ್ಯರು ಕೋಪಗೊಂಡರು. ’ಈ ಉತ್ತರವನ್ನು ವಾಪಸ್‌ ಪಡೆಯಬೇಕು‘ ಎಂದು ಬಿಜೆಪಿಯ ಅರವಿಂದ ಲಿಂಬಾವಳಿ ಆಗ್ರಹಿಸಿದರು.

ಸಚಿವರ ಉತ್ತರ ಖಂಡಿಸಿದ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, ಎನ್‌.ವೈ.ಗೋಪಾಲಕೃಷ್ಣ, ಹರ್ಷ ವರ್ಧನ ಮತ್ತಿತರರು ಧರಣಿ ನಡೆಸಲು ಮುಂದಾದರು. ಅವರನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಮಾಧಾನಪಡಿಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು. ‘ಇವತ್ತು ಅಥವಾ ನಾಳೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುತ್ತೇನೆ’ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು. ಅದಕ್ಕೆ ಸದಸ್ಯರು ಒಪ್ಪಲಿಲ್ಲ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಡೀಮ್ಡ್‌ ಎಂಬುದು ದಾರಿ ತಪ್ಪಿಸುವ ಪದ. ಅದನ್ನು ತೆಗೆದು ಹಾಕಿ ಎಂದು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ದೆ. ಅಧಿಕಾರಿಗಳು ತೆಗೆದು ಹಾಕಿರಲಿಲ್ಲ. ಈಗ ಈ ರೀತಿ ದುರುಪಯೋಗ ಆಗುತ್ತಿದೆ’ ಎಂದರು.

’ನಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟರಿಗೆ ಪ್ರತಿವರ್ಷ ₹30 ಸಾವಿರ ಕೋಟಿ ಮೀಸಲಿಟ್ಟಿದ್ದೆವು. ಬಿಜೆಪಿ ಸರ್ಕಾರ ₹26 ಸಾವಿರ ಮೀಸಲಿಟ್ಟಿದೆ. ಈ ರೀತಿ ಅನ್ಯ ಉದ್ದೇಶಕ್ಕೆ ಬಳಸಿದರೆ ಪರಿಶಿಷ್ಟರಿಗೆ ₹15 ಸಾವಿರ ಕೋಟಿಯಷ್ಟೇ ಉಳಿಯಲಿದೆ. ದಲಿತರಿಗೆ ಮೀಸಲಿಟ್ಟ ಒಂದು ರೂಪಾಯಿ ಸಹ ಅನ್ಯ ಉದ್ದೇಶಕ್ಕೆ ಬಳಕೆ ಆಗಬಾರದು‘ ಎಂದರು.

ಸಚಿವರು ಕೂಡಲೇ ಉತ್ತರ ವಾಪಸ್‌ ಪಡೆಯಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಕಲಾಪವನ್ನು 10 ನಿಮಿಷ ಕಾಲ ಸಭಾಧ್ಯಕ್ಷರು ಮುಂದೂಡಿದರು. ಕಲಾ‍ಪ ಮತ್ತೆ ಆರಂಭವಾದಾಗ ಶ್ರೀರಾಮುಲು ಉತ್ತರವನ್ನು ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT