ಎಸ್‌ಸಿಎಸ್‌ಟಿ ದೌರ್ಜನ್ಯ ತಡೆಗೆ ತಾತ್ಸಾರ: ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಎಸ್‌ಸಿಎಸ್‌ಟಿ (ಪರಿಶಿಷ್ಟ ಜಾತಿ ಮತ್ತು ಪಂಗಡಗಳ) ದೌರ್ಜನ್ಯ ತಡೆ ಕಾಯ್ದೆ 1998 ಮತ್ತು 1995ರ ನಿಯಮಗಳ ಅನುಷ್ಠಾನ ಸಂಬಂಧ ವಿವರವಾದ ಆದೇಶವನ್ನು ಹೈಕೋರ್ಟ್ ಹೊರಡಿಸಿದೆ.
ರಾಜ್ಯ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ಪರಿಶೀಲಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ‘ಮುಂದಿನ ವಿಚಾರಣೆ ದಿನಾಂಕದೊಳಗೆ(ಅ.15) ಪೂರಕ ಅಫಿಡವಿಟ್ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿತು.
ರಾಜ್ಯ ಸರ್ಕಾರ ಸಲ್ಲಿಸಿರುವ ಅಂಕಿ ಅಂಶಗಳ ಪ್ರಕಾರ, 2015ರಿಂದ 2019ರ ಅವಧಿಯಲ್ಲಿ 35,091 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿದ್ದು, ಈ ಪೈಕಿ 6,461 ಪ್ರಕರಣಗಳಿಗೆ ಸಂಬಂಧಿಸಿದ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಪೈಕಿ 3,198 ಪ್ರಕರಣಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಗಳು ದೋಷಮುಕ್ತಗೊಳಿಸಿದ್ದು, 134 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.
‘60 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಬೇಕು ಮತ್ತು ತನಿಖೆ ವಿಳಂಬ ಆಗಿರುವುದಕ್ಕೆ ತನಿಖಾಧಿಕಾರಿ ವಿವರಣೆ ಸಲ್ಲಿಸಬೇಕು. ಆದರೆ, ಅದು ಪಾಲನೆಯಾಗುತ್ತಿಲ್ಲ. ವಿಚಾರಣೆ ವಿಳಂಬ ಆಗುತ್ತಿರುವುದನ್ನು ತಪ್ಪಿಸಲು ವಿಶೇಷ ನ್ಯಾಯಾಲಯಗಳನ್ನು ತೆರೆಯುವ ಅವಶ್ಯಕತೆ ಇದೆ’ ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
‘ತನಿಖೆ ವಿಳಂಬ ಆಗಿರುವುದಕ್ಕೆ ಕಾರಣಗಳನ್ನು ತನಿಖಾಧಿಕಾರಿಗಳು ನೀಡಿದ್ದಾರೆಯೇ’ ಎಂದು ಪ್ರಶ್ನಿಸಿದ ಪೀಠ, ‘ಈ ಸಂಬಂಧ ವಿವರಣೆ ಸಲ್ಲಿಸಬೇಕು’ ಎಂದು ತಿಳಿಸಿತು.
ವಿಶೇಷ ನ್ಯಾಯಾಲಯ: ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿಯಾಗಿ ಒಂಬತ್ತು ವಿಶೇಷ ನ್ಯಾಯಾಲಯಗಳನ್ನು ಆರಂಭಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ರಿಜಿಸ್ಟ್ರಾರ್ ಜನರಲ್(ಹೈಕೋರ್ಟ್) ಅವರಿಗೆ ಪೀಠ ನಿರ್ದೇಶನ ನೀಡಿತು.
ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ತೀರಾ ಕಡಿಮೆ ಇರುವುದು ಸಂಕೀರ್ಣ ವಿಷಯವಾಗಿದೆ. ಈ ಕಾಯ್ದೆ ಅನುಷ್ಠಾನದ ಬಗ್ಗೆ ತನಿಖಾಧಿಕಾರಿಗಳಿಗೆ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಆಗಾಗ ತರಬೇತಿಗಳನ್ನು ನೀಡಬೇಕು. ತರಬೇತಿ ಕಾರ್ಯಕ್ರಮ ನಡೆಸಿಕೊಡುವಂತೆ ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ ಮನವಿ ಸಲ್ಲಿಸುವಂತೆ ಸರ್ಕಾರಕ್ಕೆ ಪೀಠ ಸೂಚನೆ ನೀಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.