ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಸರ್ಚ್ ಎಂಜಿನ್, ಗಣಪೆ ಕಾಯಿಯಿಂದ ಕ್ಯಾನ್ಸರ್ ಔಷಧ: ಪಿಇಎಸ್ ವಿವಿ

ವಿವಿಧ ಯೋಜನೆಗಳಿಗೆ ₹ 1.56 ಕೋಟಿ ಧನಸಹಾಯ ನೀಡಿದ ವಿಶ್ವವಿದ್ಯಾಲಯ
Last Updated 17 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಗೂಗಲ್ ಮಾದರಿಯಲ್ಲಿಯೇ ಕನ್ನಡದ ಸರ್ಚ್‌ ಎಂಜಿನ್ ಅಭಿವೃದ್ಧಿ, ಗಣಪೆ ಕಾಯಿಯಿಂದ ಕ್ಯಾನ್ಸರ್ ನಿರೋಧಕ ಔಷಧದ ಸಂಶೋಧನೆಯನ್ನು ಪಿಇಎಸ್ ವಿಶ್ವವಿದ್ಯಾಲಯವು ಕೈಗೆತ್ತಿಕೊಂಡಿದೆ.

ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಎಸ್.ಶ್ರೀಧರ್, ‘ವಿಶ್ವವಿದ್ಯಾಲಯವು ಪಠ್ಯ ಶಿಕ್ಷಣದ ಜತೆಗೆ ಸಂಶೋಧನೆಗಳಿಗೆ ಕೂಡ ಉತ್ತೇಜನ ನೀಡುತ್ತಿದೆ. ವಿವಿಧ ಯೋಜನೆಗಳಿಗೆ ಕಳೆದ ವರ್ಷ ಒಟ್ಟು ₹ 1.56 ಕೋಟಿ ಧನಸಹಾಯ ನೀಡಲಾಗಿದೆ. ಬೇರೆ ಬೇರೆ ವಿಭಾಗಗಳ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಕನ್ನಡ ಭಾಷೆಯ ಸರ್ಚ್‌ ಎಂಜಿನ್ ಅಭಿವೃದ್ಧಿಗೆ ₹ 10 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಇದನ್ನ ಗೂಗಲ್ ಮಾದರಿಯಲ್ಲಿಯೇ ವಿನ್ಯಾಸ ಮಾಡಲಾಗುತ್ತದೆ. ಇದು ಕನ್ನಡದ ಪದಗಳನ್ನು ಅರ್ಥ ಮಾಡಿಕೊಂಡು, ಸುಲಭವಾಗಿ ಹುಡುಕಲಿದೆ’ ಎಂದು ತಿಳಿಸಿದರು.

‘ಕಾಡುಗಳಲ್ಲಿ ಸಿಗುವ ಗಣಪೆಕಾಯಿಯು ಹಲವು ಔಷಧ ಗುಣಗಳನ್ನು ಹೊಂದಿದೆ ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಈ ಕಾಯಿಗಳನ್ನು ಬಳಸಿಕೊಂಡು ಜೈವಿಕ ತಂತ್ರಜ್ಞಾನದ ವಿಭಾಗವು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದು, ಕ್ಯಾನ್ಸರ್‌ ನಿರೋಧಕ ಗುಣಗಳು ಅವುಗಳಲ್ಲಿವೆ ಎನ್ನುವುದು ಖಚಿತಪಟ್ಟಿದೆ. ಹಾಗಾಗಿ, ಅವುಗಳಿಂದ ಕ್ಯಾನ್ಸರ್ ಕಾಯಿಲೆಗೆ ಔಷಧವನ್ನು ಸಂಶೋಧಿಸಲಾಗುತ್ತಿದೆ. ಈ ಪ್ರಾಜೆಕ್ಟ್‌ಗೆ ವಿಶ್ವವಿದ್ಯಾಲಯವು ₹ 13 ಲಕ್ಷ ಧನ ಸಹಾಯ ಮಾಡಿದೆ. ಗಾಳಿಯಲ್ಲಿನ ಮಲಿನಕಾರಕ ಕಣಗಳನ್ನು ಪತ್ತೆ ಮಾಡುವ ಸಾಧನದ ಅಭಿವೃದ್ಧಿಗೆ ₹ 33.56 ಲಕ್ಷ ನೆರವು ನೀಡಲಾಗಿದೆ. ಇದು ಪ್ರಾಜೆಕ್ಟ್ ಒಂದಕ್ಕೆ ನೀಡಿದ ಹೆಚ್ಚಿನ ಧನಸಹಾಯವಾಗಿದೆ. ಎಲ್ಲ ಪ್ರಾಜೆಕ್ಟ್‌ಗಳು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ’ ಎಂದು ವಿವರಿಸಿದರು.

6 ಮಂದಿಗೆ ₹ 55 ಲಕ್ಷ ಪ್ಯಾಕೇಜ್: ‘ಕೋವಿಡ್‌ ಕಾಯಿಲೆಯು ಕ್ಯಾಂಪಸ್ ಸಂದರ್ಶನಕ್ಕೆ ಅಡ್ಡಿಯಾಗಲಿಲ್ಲ. ಆನ್‌ಲೈನ್‌ ಮೂಲಕ ಈ ಬಾರಿ ಕ್ಯಾಂಪಸ್ ಸಂದರ್ಶನ ನಡೆದ ಕಾರಣ ಹೆಚ್ಚಿನ ಕಂಪನಿಗಳು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಪ್ಯಾಕೇಜ್ ನೀಡಿವೆ. 6 ವಿದ್ಯಾರ್ಥಿಗಳಿಗೆ ಅಮೆರಿಕ ಮೂಲದ ಕಂಪನಿಯೊಂದು ತಲಾ ₹ 55 ಲಕ್ಷದ ಪ್ಯಾಕೇಜ್ ನೀಡಿದೆ. ಈ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ 8ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಈವರೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಇದು ಅತೀ ದೊಡ್ಡ ಪ್ಯಾಕೇಜ್ ಆಗಿದೆ. ಕಳೆದ ಬಾರಿ ಮೈಕ್ರೋಸಾಫ್ಟ್ ಕಂಪನಿಯು ಅಭ್ಯರ್ಥಿಯೊಬ್ಬರಿಗೆ ₹ 43.07 ಲಕ್ಷದ ಪ್ಯಾಕೇಜ್ ನೀಡಿತ್ತು’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಸೂರ್ಯಪ್ರಸಾದ್ ಜೆ. ತಿಳಿಸಿದರು.

‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಇದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರವಾಗಲಿದೆ. ಈ ಬಾರಿ 5,456 ವಿದ್ಯಾರ್ಥಿಗಳಿಗೆ ಒಟ್ಟು ₹ 5.38 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಕೋವಿಡ್‌ ಕಾರಣ ಬೋಧನಾ ಶುಲ್ಕವನ್ನು ಶೇ 10ರಷ್ಟು ಕಡಿತ ಮಾಡಲಾಗದೆ’ ಎಂದರು.

ವಿದ್ಯಾರ್ಥಿಗಳಿಗೆ ಆರೋಗ್ಯ ಕಾರ್ಡ್‌ಗೆ ಪ್ರಸ್ತಾವನೆ
‘ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಎಲ್ಲ ಸೌಲಭ್ಯಗಳು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ದೊರೆಯಬೇಕು. ಹಾಗಾಗಿ, ರಾಜ್ಯದಲ್ಲಿನ 48 ಸಾವಿರ ಸರ್ಕಾರಿ ಶಾಲೆಗಳ ಮಕ್ಕಳಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಆರೋಗ್ಯ ಕಾರ್ಡ್‌ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಿ, ಮುಂಬರುವ ಬಜೆಟ್‌ನಲ್ಲಿ ಘೋಷಿಸುವಂತೆ ಒತ್ತಾಯಿಸಲಾಗಿದೆ. ಅದೇ ರೀತಿ, ಶಾಲೆಗಳಲ್ಲಿ ಯೋಗ ಮತ್ತು ಧ್ಯಾನದ ಕಲಿಕೆ ಸೇರಿದಂತೆ ಸರ್ಕಾರಕ್ಕೆ ಹಣಕಾಸಿನ ಹೊರೆ ಇಲ್ಲದ ಕೆಲವು ಶಿಫಾರಸುಗಳನ್ನು ಮಾಡಿದ್ದೇನೆ’ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ತಿಳಿಸಿದರು.

‘ಈಗಾಗಲೇ ಜನಪ್ರತಿನಿಧಿಗಳ ಜತೆಗೆ ಕೆಲ ಶಿಕ್ಷಣ ಸಂಸ್ಥೆಗಳು ಕೂಡ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು, ಅಭಿವೃದ್ಧಿಗೊಳಿಸುತ್ತಿವೆ. ಇದೇ ರೀತಿ, ಎಲ್ಲ ಎಂಜಿನಿಯರಿಂಗ್ ಕಾಲೇಜುಗಳೂ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು ಎಂದು ಶಿಫಾರಸು ಮಾಡಲಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿಗಳು ಓದಿದ ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದ್ದು, ₹ 3.2 ಕೋಟಿ ವೆಚ್ಚವಾಗಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT