ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಎಎನ್‌ಇಸಿ ಎರಡನೇ ಪ್ರಕರಣ ಪತ್ತೆ

ಕೊರೊನಾ ಬಂದು ಗುಣಮುಖರಾದ ಮಕ್ಕಳಲ್ಲಿ ಕಂಡುಬರುವ ರೋಗ * ದೆಹಲಿಯಲ್ಲಿ ಕಾಣಿಸಿಕೊಂಡಿತ್ತು ಮೊದಲ ಪ್ರಕರಣ
Last Updated 24 ಜೂನ್ 2021, 5:27 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕು ಬಂದು ಹೋಗಿರುವ ಮಕ್ಕಳ ಪೈಕಿ ಕೆಲವೇ ಕೆಲವರಲ್ಲಿ ‘ಮಿಸ್‌–ಸಿ’ (ಎಂಐಎಸ್‌–ಸಿ) ಕಾಣಿಸಿಕೊಂಡಿದೆ. ಅದನ್ನೂ ಮೀರಿದ ರೋಗ ‘ಎಎನ್‌ಇಸಿ’, ದೇಶದಲ್ಲೇ ಎರಡನೇ ಪ್ರಕರಣ ದಾವಣಗೆರೆಯಲ್ಲಿ ಪತ್ತೆಯಾಗಿದೆ. ಇದು ಮಿದುಳಿಗೇ ತೊಂದರೆ ನೀಡುವಂತಹ ರೋಗವಾಗಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ 13 ವರ್ಷದ ಬಾಲಕನಲ್ಲಿ ಈ ರೋಗ ಕಾಣಿಸಿಕೊಂಡಿದೆ. 8 ದಿನಗಳ ಹಿಂದೆ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಗೆ ಈ ಮಗುವನ್ನು ದಾಖಲಿಸಲಾಗಿತ್ತು. ಮಗುವನ್ನು ಪರೀಕ್ಷೆ ಮಾಡಿದಾಗ ಮಿದುಳು ನಿಷ್ಕ್ರಿಯ ಹಂತದಲ್ಲಿತ್ತು. ವೆಂಟಲೇಟರ್‌ನಲ್ಲಿ ಮೂರು ದಿನ ಚಿಕಿತ್ಸೆ ಕೊಡಲಾಯಿತು. ಸ್ವಲ್ಪ ಚೇತರಿಕೆ ಕಂಡಿದ್ದು, ಐಸಿಯುನಲ್ಲಿ ಇಡಲಾಗಿದೆ. ಆಮ್ಲಜನಕ ನೀಡುವುದನ್ನು ಕೂಡ ನಿಲ್ಲಿಸಲಾಗಿದೆ ಎಂದು ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಆಗಿರುವಮಕ್ಕಳ ತಜ್ಞ ಡಾ.ಎನ್‌.ಕೆ. ಕಾಳಪ್ಪನವರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮಕ್ಕಳಿಗೆ ಕೊರೊನಾ ಬಂದು ಹೋಗಿರುತ್ತದೆ. ಇದಾಗಿ ಎರಡು–ಮೂರು ವಾರಗಳ ಬಳಿಕ ಇದ್ದಕ್ಕಿದ್ದಂತೆ ಮಗುವಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಅಂಥ ಮಕ್ಕಳನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಶ್ವಾಸಕೋಶದಲ್ಲಿ ನೀರು ತುಂಬಿರುತ್ತದೆ. ಮೂತ್ರಪಿಂಡ, ಲಿವರ್‌ ಸಹಿತ ದೇಹದ ಅಂಗಾಗಗಳೆಲ್ಲ ವೈಫಲ್ಯ ಆಗಿರುತ್ತದೆ. ಇದನ್ನು ಮಲ್ಟಿ ಆರ್ಗನ್‌ ಇನ್‌ಫ್ಲಮೇಟರಿ ಸಿಂಡ್ರೋಮ್ ಇನ್‌ ಚಿಲ್ಡ್ರನ್‌ (ಮಿಸ್‌–ಸಿ) ಎಂದು ಕರೆಯಲಾಗುತ್ತದೆ. ಆ ಮಕ್ಕಳನ್ನು ಪರೀಕ್ಷಿಸಿದಾಗ ದೇಹದಲ್ಲಿ ಕೋವಿಡ್‌ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂದರೆ ಕೊರೊನಾ ಬಂದಿರುವುದು ಮನೆಯವರಿಗೆ ಗೊತ್ತಾಗದೇ ಇದ್ದರೂ ಮಗುವಿಗೆ ಬಂದು ಹೋಗಿರುವುದು ಇದು ಖಚಿತಗೊಳಿಸುತ್ತದೆ. ಇಂಥ ಆರು ಪ್ರಕರಣಗಳು ನಮ್ಮಲ್ಲಿ ಪತ್ತೆಯಾಗಿವೆ. ಈ ಎಲ್ಲ ಆರು ಮಕ್ಕಳು ಈಗ ಚೇತರಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದೇ ರೀತಿ ಹೂವಿನಹಡಗಲಿಯ ಮಗುವಿನ ಸ್ಥಿತಿ ಇತ್ತು. ಪರೀಕ್ಷೆ ಮಾಡಿಸಿದಾಗ ಉಳಿದ ಮಕ್ಕಳಿಗಿಂತ ಭಿನ್ನವಾಗಿ ಮಿದುಳಿಗೆ ದಾಳಿಯಾಗಿತ್ತು. ಈ ಪ್ರಕರಣವನ್ನು ಅಧ್ಯಯನ ಮಾಡಿದಾಗ ಅಕ್ಯೂಟ್‌ ನೆಕ್ರೊಟೈಸಿಂಗ್‌ ಮೆನಿಂಗೋ ಎನ್‌ಕೆಫೆಲೋಪಥಿ ಇನ್‌ ಚಿಲ್ಡ್ರನ್‌ (ಎನೆಕ್‌) ಎಂಬುದು ಗೊತ್ತಾಯಿತು. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಮೊದಲ ಪ್ರಕರಣ ಪತ್ತೆಯಾಗಿತ್ತು ಎಂದು ವಿವರಿಸಿದರು.

ಮಗುವಿನ ಬಗ್ಗೆ ಯಾವ ಭರವಸೆಯೂ ಉಳಿದಿರಲಿಲ್ಲ. ಈಗ ಚಿಕಿತ್ಸೆಗೆ ಸ್ಪಂದಿಸುವುದು ನೋಡಿದಾಗ ಹುಷಾರಾಗುವುದರಲ್ಲಿ ಅನುಮಾನ ಇಲ್ಲ. 5 ಗ್ರಾಂಗೆ ₹ 14 ಸಾವಿರ ದರ ಇರುವ ಇಮ್ಯುನೊಗ್ಲೊಬುಲಿನ್‌ ಇಂಜೆಕ್ಷನ್‌ ಅನ್ನು ನೀಡಲಾಗುತ್ತಿದೆ. ಮಗುವಿನ ದೇಹದ ತೂಕಕ್ಕೆ ಅನುಗುಣವಾಗಿ ಒಂದು ಕೆ.ಜಿ.ಗೆ 2 ಗ್ರಾಂನಂತೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT