ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಸ್ಕರ ರಾವ್ ರಾಜೀನಾಮೆ: ರಾಜಕೀಯ ಪ್ರವೇಶ?

Last Updated 16 ಸೆಪ್ಟೆಂಬರ್ 2021, 19:10 IST
ಅಕ್ಷರ ಗಾತ್ರ

ಬೆಂಗಳೂರು: ರೈಲ್ವೆ ಪೊಲೀಸ್ ಎಡಿಜಿಪಿ ಆಗಿರುವ ಬಿ.ಭಾಸ್ಕರ ರಾವ್ ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ರಾವ್ ಅವರು ರಾಜಕೀಯ ಪ್ರವೇಶಿ ಸುವ ಸಾಧ್ಯತೆ ಇರುವುದಾಗಿ ಆಪ್ತರು ಹೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಗುರುವಾರ ಭೇಟಿಯಾದ ಭಾಸ್ಕರ ರಾವ್, ರಾಜೀನಾಮೆ ಪತ್ರ ಸಲ್ಲಿಸಿದರು.

‘ವೈಯಕ್ತಿಕ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಮನವಿಯನ್ನು ಅಂಗೀಕರಿಸಲು ಕ್ರಮ ಕೈಗೊಳ್ಳಿ’ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ.

ಆಪ್ತರ ಬಳಿ ಅಳಲು ತೋಡಿಕೊಂಡಿ ರುವ ಭಾಸ್ಕರ್ ರಾವ್, ‘ರಾಜ್ಯದಲ್ಲೇ ಓದಿ ಬೆಳೆದ ನನಗೆ ಸೂಕ್ತ ಹುದ್ದೆ ನೀಡುವಲ್ಲಿ ಕಡೆಗಣಿಸಲಾಯಿತು. ದೂರವಾಣಿ ಕರೆ ಕದ್ದಾಲಿಕೆ ಪ್ರಕರಣದಲ್ಲಿ ದೂರು ನೀಡಿದರೂ ಆರೋಪಿಗಳನ್ನು ರಕ್ಷಿಸಲು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತು. ಇದೆಲ್ಲವೂ ನನಗೆ ನೋವು ಉಂಟು ಮಾಡಿದೆ. ಹೀಗಾಗಿ, ರಾಜೀನಾಮೆ ನೀಡುತ್ತಿದ್ದೇನೆ’ ಎಂದಿರುವುದಾಗಿ ಗೊತ್ತಾಗಿದೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ವೇಳೆ ಲಾಕ್‌ಡೌನ್‌ ಪಾಸ್ ದುರ್ಬಳಕೆ ಆಗಿರುವುದಾಗಿ ಭಾಸ್ಕರ ರಾವ್ ವಿರುದ್ಧ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ‌ ಆರೋಪಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಭಾಸ್ಕರ ರಾವ್ ವರ್ಗಾವಣೆಯಾಗಿತ್ತು. ಆ ಸ್ಥಾನಕ್ಕೆ ಕಮಲ್ ಪಂತ್ ಬಂದರು.

ಕೆಲ ತಿಂಗಳ ಹಿಂದಷ್ಟೇ ಎಡಿಜಿಪಿ ಸಂಜಯ್ ಸಹಾಯ್ ಸಹ ರಾಜೀನಾಮೆ ನೀಡಿ, ಸ್ವಯಂನಿವೃತ್ತಿ ಪಡೆದಿದ್ದರು. ರಾವ್ ಈಗ ಅದೇ ಹಾದಿ ಹಿಡಿದಿದ್ದಾರೆ.

ರಾಜಕೀಯ ಪ್ರವೇಶಕ್ಕೆ ಸಿದ್ಧತೆ

ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ ರಾಜಕೀಯ ಪ್ರವೇಶಿಸಲು ಭಾಸ್ಕರ ರಾವ್ ಯೋಚಿಸಿದ್ದಾರೆಂದು ಗೊತ್ತಾಗಿದೆ.

‘ಕಾಂಗ್ರೆಸ್ ಅಥವಾ ಆಮ್‌ ಆದ್ಮಿ ಪಾರ್ಟಿಗೆ (ಎಎಪಿ) ಭಾಸ್ಕರ ರಾವ್ ಸೇರಬಹುದು. ಬಸವನಗುಡಿ ಅಥವಾ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ’ ಎಂಬುದಾಗಿ ಆಪ್ತರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT