ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿ ಸಂತ್ರಸ್ತೆಯ ಸತತ ವಿಚಾರಣೆ, ಆರೋಪಿಗೆ ವಿಶ್ರಾಂತಿ: ಕಾಂಗ್ರೆಸ್‌ ವಾಗ್ದಾಳಿ

Last Updated 5 ಏಪ್ರಿಲ್ 2021, 3:55 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರು ಸತತವಾಗಿ ಸಿ.ಡಿ ಸಂತ್ರಸ್ತೆಯ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆರೋಪಿಗೆ ಮಾತ್ರ ವಿಶ್ರಾಂತಿ ಪಡೆಯಲು ಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ಕುರಿತು ಸೋಮವಾರ ಬೆಳಿಗ್ಗೆ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, 'ರಮೇಶ್ ಜಾರಕಿಹೊಳಿಯ ಅತ್ಯಾಚಾರ ಪ್ರಕರಣದಿಂದ ಬಿಜೆಪಿ ಆಡಳಿತದ ನಿಜಬಣ್ಣ ತಿಳಿಯುತ್ತದೆ. ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ ನೀಡುತ್ತಿದೆ' ಎಂದು ಹರಿಹಾಯ್ದಿದೆ.

'ಸಿ.ಡಿ ಪ್ರಕರಣದಿಂದ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಆರೋಪಿ ತಲೆಮರೆಸಿಕೊಳ್ಳುವ ಬಗ್ಗೆ ಪೊಲೀಸರೂ ತಲೆ ಕೆಡಿಸಿಕೊಂಡಿಲ್ಲ. ಆರೋಪಿಯ ಮೊಬೈಲ್‌ ಅನ್ನು ಹಲವು ದಿನಗಳವರೆಗೆ ಪೊಲೀಸರು ವಶಪಡಿಸಿಕೊಂಡಿಲ್ಲ. ಸಾಕ್ಷ್ಯ ನಾಶಕ್ಕೆ ಸಾಕಷ್ಟು ಸಮಯ ಬೇಕಿತ್ತೋ ಏನೋ' ಎಂದು ಕಾಂಗ್ರೆಸ್‌ ಟೀಕಿಸಿದೆ.

'ಮಾಜಿ ಮಂತ್ರಿಯನ್ನು ವಿಚಾರಣೆಗೆ ಕರೆಸಿ ಹಿಂಬಾಗಿಲ ಮೂಲಕ ಪೊಲೀಸರು ಕಳಿಸಿಕೊಡುತ್ತಾರೆ. ಸಂತ್ರಸ್ತೆಗೆ ವಿಶ್ರಾಂತಿಯೂ ನೀಡದಂತೆ ಸತತ ವಿಚಾರಣೆ ನಡೆಸುತ್ತಾರೆ. ಆರೋಪಿಯನ್ನು ಕರೆದುಕೊಂಡು ಹೋಗಿ ಮಹಜರು ಮಾಡುವ ಬದಲಿಗೆ ಸಂತ್ರಸ್ತೆಯನ್ನು ಕಾಡಿಸಿ ಮಹಜರು ನಡೆಸಲಾಗುತ್ತಿದೆ' ಎಂದು ಕಾಂಗ್ರೆಸ್‌ ಆರೋಪಿಸಿದೆ.

'ಆರೋಪಿಯ ಕುಟುಂಬ, ಆರೋಪಿ ವಾಸಿಸುತ್ತಿದ್ದ ಸ್ಥಳ, ಬಳಸುತ್ತಿದ್ದ ಮೊಬೈಲ್ ಮುಂತಾದವುಗಳನ್ನು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ, ದೂರು ನೀಡಿದ ಸಂತ್ರಸ್ತೆಯನ್ನೇ ಆರೋಪಿ ಎನ್ನುವಂತೆ ನಡೆಸಿಕೊಳ್ಳಲಾಗುತ್ತಿದೆ' ಎಂದು ಕೆಪಿಸಿಸಿ ಹೇಳಿದೆ.

ಸಂತ್ರಸ್ತೆಯ ದೂರಿನಲ್ಲಿ ಆರೋಪಿ ಹೆಸರು ನೇರವಾಗಿ ಉಲ್ಲೇಖವಿದೆ, ಆದರೂ ಬಂಧನವಿಲ್ಲ, ಸಮರ್ಪಕ ವಿಚಾರಣೆಯೂ ಇಲ್ಲ ಎಂದು ಕಾಂಗ್ರೆಸ್‌ ಟ್ವೀಟಿಸಿದೆ.

'ಆರೋಪಿಯನ್ನು ಬಂಧಿಸದೇ ಚುನಾವಣಾ ಪ್ರಚಾರಕ್ಕೆ ಸ್ವತಃ ಮುಖ್ಯಮಂತ್ರಿ ಕರೆಯುತ್ತಾರೆ. ತನಿಖೆ ನಡೆಸದೆ ಅವರದು ತಪ್ಪಿಲ್ಲ ಎಂದು ಕ್ಲೀನ್ ಚಿಟ್ ನೀಡುತ್ತಾರೆ. ನಾವೆಲ್ಲ ಆರೋಪಿ ಬೆಂಬಲಕ್ಕಿದ್ದೇವೆ ಎಂದು ಹಲವು ಸಚಿವರು ಹೇಳುತ್ತಾರೆ. ಇದೆಲ್ಲವೂ ಆರೋಪಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎನ್ನುವುದಕ್ಕೆ ನಿದರ್ಶನ' ಎಂದು ಕಾಂಗ್ರೆಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT