ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಮುರುಘಾ ಶ್ರೀ ಸೇರಿ ಮೂವರ ವಿರುದ್ಧ ದೋಷಾರೋಪ ಪಟ್ಟಿ

Last Updated 7 ನವೆಂಬರ್ 2022, 19:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಮೂವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದರು.

‘ಪ್ರಕರಣದ ತನಿಖೆಯನ್ನು ಭಾಗಶಃ ಪೂರ್ಣಗೊಳಿಸಿ ಅ.27ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನ್ಯಾಯಾಧೀಶರು ಇದನ್ನು ಇನ್ನೂ ಸ್ವೀಕರಿಸುವುದು ಬಾಕಿ ಇದೆ. ಅಂತಿಮ ದೋಷಾರೋಪ ಪಟ್ಟಿಗೆ ಪ್ರಕರಣದ ತನಿಖೆ ಮುಂದುವರಿದಿದ್ದು, ಶೀಘ್ರವೇ ಸಲ್ಲಿಕೆ ಮಾಡಲಾಗುವುದು’ ಎಂದು ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಪ್ರಮುಖ ಆರೋಪಿ ಶಿವಮೂರ್ತಿ ಮುರುಘಾ ಶರಣರು, ಹಾಸ್ಟೆಲ್‌ ವಾರ್ಡನ್‌ ಹಾಗೂ ಮಠದ ವ್ಯವಸ್ಥಾಪಕ ಪರಮಶಿವಯ್ಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 17 ವರ್ಷದ ಬಾಲಕ ಹಾಗೂ ಗಂಗಾಧರಯ್ಯ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯಗಳು ಲಭ್ಯವಾಗಿಲ್ಲ’ ಎಂದರು.

ಪೋಕ್ಸೊ ಪ್ರಕರಣದ ದೋಷಾರೋಪಪಟ್ಟಿ ಸಲ್ಲಿಕೆಗೆ 60 ದಿನಗಳ ಗಡುವು ಇದೆ. ನಿಗದಿತ ಕಾಲಮಿತಿಯಲ್ಲಿ 694 ಪುಟಗಳ ತನಿಖಾ ವರದಿಯನ್ನು ಡಿವೈಎಸ್‌ಪಿ ಅನಿಲ್‌ಕುಮಾರ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಒಬ್ಬ ವಿದ್ಯಾರ್ಥಿನಿ ಬರುವುದರಿಂದ ಎರಡು ಪ್ರತ್ಯೇಕ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ.

ಎಫ್‌ಎಸ್‌ಎಲ್ ವರದಿ ಬಾಕಿ: ಪ್ರಕರಣದ ತನಿಖೆಯಲ್ಲಿ ಪೊಲೀಸರು ಹಲವು ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಆರೋಪಿಯ ಕೊಠಡಿಯಲ್ಲಿ ದೊರೆತ ವಸ್ತು, ಬಟ್ಟೆ, ಸಂತ್ರಸ್ತ ವಿದ್ಯಾರ್ಥಿನಿಯರ ಬಟ್ಟೆ ಸೇರಿ ಇತರ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಪುರುಷತ್ವ ಪರೀಕ್ಷೆಯ ಸಂದರ್ಭದಲ್ಲಿ ಸಂಗ್ರಹಿಸಿದ ರಕ್ತ, ಕೂದಲು ಹಾಗೂ ಉಗುರಿನ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

‘ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಗಳಲ್ಲಿ ಕೆಲವು ವರದಿ ಕೈ ಸೇರಿವೆ. ಇನ್ನೂ ಕೆಲವು ವರದಿಗಳಿಗೆ ಕಾಯಲಾಗುತ್ತಿದೆ’ ಎಂದು ಪರಶುರಾಮ ಅವರು ತಿಳಿಸಿದರು.

ಮಾಹಿತಿ ಕೋರಿದ ಪೊಲೀಸರು
ಮುರುಘಾ ಮಠದಲ್ಲಿ ಲೈಂಗಿಕ ಶೋಷಣೆಗೆ ಗುರಿಯಾದವರು ಧೈರ್ಯವಾಗಿ ಮಾಹಿತಿ ನೀಡಬಹುದು. ಮಾಹಿತಿಯನ್ನು ಗೋಪ್ಯವಾಗಿಟ್ಟು ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮನವಿ ಮಾಡಿದರು. ‘ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವದಂತಿ ಹರಿದಾಡುತ್ತಿದೆ. ದೌರ್ಜನ್ಯದಿಂದ ನಲುಗಿದವರು ಸ್ವಯಂ ಪ್ರೇರಿತವಾಗಿ ಪೊಲೀಸರಿಗೆ ಮಾಹಿತಿ ನೀಡಬಹುದು. ‘ಒಡನಾಡಿ’ ಸೇವಾ ಸಂಸ್ಥೆಯ ಮುಖ್ಯಸ್ಥರ ಮಾಹಿತಿ ಆಧರಿಸಿ ಇಬ್ಬರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಬಸವರಾಜನ್‌ ಹೇಳಿಕೆ ದಾಖಲು
ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಅವರ ಹೇಳಿಕೆಯನ್ನು ಸಿಆರ್‌ಪಿಸಿ 164 ಅಡಿ
ಸೋಮವಾರ ನ್ಯಾಯಾಧೀಶರ ಎದುರು ದಾಖಲಿಸಿಕೊಳ್ಳಲಾಯಿತು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಬಸವರಾಜನ್‌ ಹಾಗೂ ಪತ್ನಿ ಸೌಭಾಗ್ಯ ಸೋಮವಾರ ಹಾಜರಾದರು. ನ್ಯಾಯಾಧೀಶೆ ಅನಿತಾಕುಮಾರಿ ಎದುರು ಬಸವರಾಜನ್‌ ಹೇಳಿಕೆ ದಾಖಲಿಸಿದರು. ನ್ಯಾಯಾಲಯದ ಸಮಯ ಮೀರಿದ್ದರಿಂದ ಸೌಭಾಗ್ಯ ಅವರ ಹೇಳಿಕೆ ಪಡೆಯುವ ಪ್ರಕ್ರಿಯೆ ಮಂಗಳವಾರ ನಡೆಯುವ ಸಾಧ್ಯತೆ ಇದೆ.

ಫೋಟೊ ಕಳವು: ಬಂಧನ
ಮುರುಘಾ ಮಠದ ರಾಜಾಂಗಣದಲ್ಲಿ ಅಳವಡಿಸಿದ್ದ ಶಿವಮೂರ್ತಿ ಮುರುಘಾ ಶರಣರ 47 ಫೋಟೊಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನಮೂರ್ತಿ ಹಾಗೂ ಎಸ್‌ಜೆಎಂ ಪಾಲಿಟೆಕ್ನಿಕ್‌ ಕಾಲೇಜು ಉಪನ್ಯಾಸಕ ಶಿವಾನಂದಸ್ವಾಮಿ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೋಹನಮೂರ್ತಿಯನ್ನು ಎರಡು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಶಿವಾನಂದಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT