ಭಾನುವಾರ, ಸೆಪ್ಟೆಂಬರ್ 19, 2021
31 °C

‘ಝೀರೋ ಟ್ರಾಫಿಕ್‌’ನಲ್ಲಿ ದೌಡಾಯಿಸಿದ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೆಹಲಿಯಿಂದ ವಿಮಾನದಲ್ಲಿ ಬರುವುದು ವಿಳಂಬವಾಗಿದ್ದರಿಂದ ಶಶಿಕಲಾ ಜೊಲ್ಲೆ ಅವರು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೂ ‘ಝೀರೋ ಟ್ರಾಫಿಕ್‌’ (ತಡೆರಹಿತ ಸಂಚಾರ) ಸೌಲಭ್ಯದಲ್ಲಿ ದೌಡಾಯಿಸಿ ಬಂದು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬುಧವಾರ ಮಧ್ಯಾಹ್ನ 2.15ರಿಂದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಿಗದಿಯಾಗಿದ್ದು. ದೆಹಲಿಯಲ್ಲಿದ್ದ ಶಶಿಕಲಾ ಜೊಲ್ಲೆ, ಸಂಪುಟದಲ್ಲಿ ಸ್ಥಾನ ಖಾತರಿಯಾದ ಬಳಿಕ ವಿಮಾನದಲ್ಲಿ ಬೆಂಗಳೂರಿನತ್ತ ಹೊರಟಿದ್ದರು. ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಬೇಕಿದ್ದ ವಿಮಾನ ಅರ್ಧ ಗಂಟೆಗೂ ಹೆಚ್ಚು ತಡವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ತಾವು ಬರುವುದು ವಿಳಂಬವಾಗುತ್ತಿರುವ ಕುರಿತು ಶಶಿಕಲಾ ಜೊಲ್ಲೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣವೇ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಮುಖ್ಯಮಂತ್ರಿ, ಜೊಲ್ಲೆ ಅವರ ಸಂಚಾರಕ್ಕೆ ‘ಝೀರೋ ಟ್ರಾಫಿಕ್‌’ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರು.

ದೆಹಲಿಯಿಂದ ಹೊರಟ ವಿಮಾನ ಬಂದಿಳಿಯುವಷ್ಟರಲ್ಲಿ ಪೊಲೀಸರು ಬೆಂಗಾವಲು ವಾಹನಗಳೊಂದಿಗೆ ಸಿದ್ದವಾಗಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದ ಶಶಿಕಲಾ ಅವರನ್ನು ತಡೆರಹಿತ ಸಂಚಾರ ವ್ಯವಸ್ಥೆಯಡಿ ಕೆಲವೇ ನಿಮಿಷಗಳಲ್ಲಿ ರಾಜಭವನಕ್ಕೆ ಕರೆತರಲಾಯಿತು. ವಾಹನ ಇಳಿದು ಓಡೋಡಿ ರಾಜಭವನದ ಗಾಜಿನಮನೆಗೆ ಹೋದ ಶಾಸಕಿ, ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು