ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಬಪ್ಪ ಬ್ಯಾರಿಗೆ ಜೀವ ತುಂಬಿದ ಶೇಣಿ ಗೋಪಾಲಕೃಷ್ಣ ಭಟ್ಟರು

Last Updated 25 ಮಾರ್ಚ್ 2022, 19:24 IST
ಅಕ್ಷರ ಗಾತ್ರ

ಮಂಗಳೂರು: ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ‘ಬಪ್ಪ ಬ್ಯಾರಿ’ ಎಂಬ ಮುಸ್ಲಿಂ ವರ್ತಕ ಮರು ನಿರ್ಮಾಣ ಮಾಡಿದ್ದರು ಎಂಬ ಪ್ರತೀತಿ ಇದೆ. ಆ ಕಾರಣಕ್ಕೆ ಅವರ ಕುಟುಂಬಸ್ಥರಿಗೆ ಮೊದಲ ಪ್ರಸಾದ ನೀಡುವ ಸಂಪ್ರದಾಯ ಈಗಲೂ ಈ ದೇವಸ್ಥಾನದಲ್ಲಿದೆ.

‘ಬಪ್ಪ ಬ್ಯಾರಿ’ಯ ಹೆಸರನ್ನು ನಾಡಿನ ಮೂಲೆಮೂಲೆಗಳಿಗೂ ಪರಿಚಯಿಸಿದ್ದು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗ. ಹಿರಿಯ ಯಕ್ಷಗಾನ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ಟರು, ಬಪ್ಪ ಬ್ಯಾರಿಯ ಪಾತ್ರಕ್ಕೆ ಜೀವ ತುಂಬಿದವರು. ಅವರ ಕಾಲಾನಂತರ ಅನೇಕ ಕಲಾವಿದರು ಬಪ್ಪ ಬ್ಯಾರಿಯ ಪಾತ್ರ ಮಾಡಿದ್ದರೂ, ಶೇಣಿಯವರ ‘ಬಪ್ಪ ಬ್ಯಾರಿ’ಯ ಛಾಯೆಯಿಂದ ಹೊರಬರಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಪ್ರೇಕ್ಷಕರು.

ಈ ಯಕ್ಷಗಾನ ಪ್ರಸಂಗದಲ್ಲಿ ಬಪ್ಪ ಬ್ಯಾರಿ ಮತ್ತು ಭಾಗವತರ ಮಧ್ಯೆ ನಡೆಯುವ ಸಂವಾದದ ಒಂದು ತುಣುಕು ಹೀಗಿದೆ (ಪ್ರಸ೦ಗ - ಬಪ್ಪನಾಡು ಕ್ಷೇತ್ರ ಮಹಾತ್ಮೆ. ಭಾಗವತರು - ಅಗರಿ ಶ್ರೀನಿವಾಸ ಭಾಗವತರು).

ಯಕ್ಷಗಾನ ಪ್ರಸಂಗ ತುಳು ಭಾಷೆಯಲ್ಲಿದೆ. ಬಪ್ಪ ಬ್ಯಾರಿಯ ಮಾತುಗಳು ಆರಂಭವಾಗುವುದು ಮಲೆಯಾಳ ಭಾಷೆಯಲ್ಲಿ (ಬಪ್ಪ ಮೂಲತಃ ಕೇರಳದವರು).

ಬಪ್ಪ ಬ್ಯಾರಿ: ನಾನು ಬಪ್ಪ ಬ್ಯಾರಿ, ಕೇರಳ ನಾಡಿನ ಪೊನ್ನಾನಿ ನನ್ನ ಹುಟ್ಟೂರು. ಸಣ್ಣವನಿದ್ದಾಗ ಸಮುದ್ರದಲ್ಲಿ ಮ೦ಜಿ (ದೋಣಿ) ಮಗುಚಿ ಎಲ್ಲರೂ ನೀರು ಪಾಲಾದರೂ ನಾನು ಬದುಕಿ ಮೂಲ್ಕಿ ತೀರಕ್ಕೆ ಬ೦ದು ಸೇರಿದೆ. ಹೇಗೆ...?

ಭಾಗವತರು: ಈಜಿ

ಬಪ್ಪ ಬ್ಯಾರಿ: ನಿಮ್ಮದು ತಮಾಷೆ. ಸಮುದ್ರ
ವೆ೦ದರೆ ನಿಮ್ಮ ತೋಟದ ಕೆರೆಯೋ ಸ್ವಾಮಿ ಈಜಿ ಪಾರಾಗಲು? ನಾನು ಬದುಕಿದ್ದು ಅಲ್ಲಾಹನ ಕುದ್ರತ್‌ನಿ೦ದ, ಯಾವುದರಿಂದ?

ಭಾಗವತರು: ಕುದುರೆಯಿ೦ದ

ಬಪ್ಪ ಬ್ಯಾರಿ: ಕುದುರೆಯಲ್ಲ ಸ್ವಾಮಿ, ಕುದ್ರತ್‌ನಿ೦ದ– ಅಲ್ಲಾನ ದಯೆಯಿ೦ದ. ನಾನು ಸಮುದ್ರದಿ೦ದ ಪಾರಾದೆನೇನೊ ಅಹುದು, ಆದರೆ ಉಡಲು ಬಟ್ಟೆ, ಹೊಟ್ಟೆಗಿಷ್ಟು ಗ೦ಜಿ, ತಲೆ ಮೇಲೆ ಒ೦ದು ಮಾಡು (ಸೂರು) ಬೇಡವೇ? ಊರ ಬಲ್ಲಾಳರನ್ನು ಕೇಳಿದೆ. ಒ೦ದಿಷ್ಟು ಜಾಗ ಕೊಟ್ಟರೆ ಒ೦ದು ಅ೦ಗಡಿ ನಡೆಸಿ ಬದುಕಿಕೊ೦ಡೇನು. ನಾವು ಬ್ಯಾರಿಗಳು ವ್ಯಾಪಾರ ಮಾಡಿ ಬದುಕುವವರು. ದೇವರ ದಯೆಯಿ೦ದ ಈಗ ಈ ಸ್ಥಿತಿಗೆ ಬ೦ದಿದ್ದೇನೆ’

ಭಾಗವತರು: ಹೋ ಬಪ್ಪ ಸಾಹುಕಾರರು

ಬಪ್ಪ ಬ್ಯಾರಿ: ಯಾರು ಸಾಹುಕಾರರು ಸ್ವಾಮಿ ಈ ಜಗತ್ತಿನಲ್ಲಿ, ಮೇಲಿನವನೊಬ್ಬನೇ. ನಾವು ಸಾಯುವಾಗ ದೊಡ್ಡ ಬ೦ಗಲೆ, ಆಸ್ತಿ ಮಾಡಿದುದನ್ನು ಯಾರೂ ಮಾತಾಡುವುದಿಲ್ಲ. ಮನುಷ್ಯ ಹೇಗೆ ಬದುಕಿದ? ನಾಲ್ಕು ಜನರಿಗೆ ಬೇಕಾದವನಾಗಿದ್ದನೋ ಎ೦ದು ಕೇಳುತ್ತಾರೆ. ನೀವು ನೋಡಿರಬಹುದು ನಾವು ಮಾತನಾಡುವಾಗ ‘ನಾನು, ನನ್ನದು’ ಎ೦ದು ಹೇಳುವ ಪದ್ಧತಿಯಿಲ್ಲ. ‘ನಾವು, ನಮ್ಮದು’ ಎ೦ದೇ ಹೇಳುತ್ತೇವೆ. ನಾವು ಎ೦ದರೆ...

ಭಾಗವತರು: ನೀವು ಮತ್ತು ಹೆ೦ಡತಿ– ಮಕ್ಕಳು

ಬಪ್ಪ ಬ್ಯಾರಿ: ನಿಮ್ಮದು ತಮಾಷೆ ನೋಡಿ, ‘ಅಲ್ಲಾಹನ ದಯೆಯಿ೦ದ’ ಅ೦ತ ಹೇಳುತ್ತಿದ್ದೆ. ನಾವು ಅಲ್ಲಾ ಅಲ್ಲಾ ಅ೦ತ, ನೀವು ರಾಮ ರಾಮ ಅ೦ತ ಹೇಳುತ್ತೀರಿ. ಎಲ್ಲಾ ಒ೦ದೇ, ಕೆಲವು ಕಿಡಿಗೇಡಿಗಳು, ನೀವು ರಾಮ ಎನ್ನುವಾಗ ಇವರು ದೇವರು ಅಲ್ಲ ಅ೦ತ ಹೇಳುತ್ತಿದ್ದಾರೆ ಎನ್ನುವರು. ‘ಲಾ ಇಲಾಹಿ ಇಲ್ಲಲ್ಲಾಹ’ ಎ೦ದರೆ ಏನು ಸ್ವಾಮಿ? ದೇವರನ್ನು ಬಿಟ್ಟರೆ ಬೇರೆ ಗತಿಯಿಲ್ಲಾ ಅ೦ದಲ್ಲವೇ? ಮತ್ತೆ ಈ ಜಾತಿಯೆಲ್ಲಾ ಯಾಕೆ? ಅದು ನಮಗೆ ಒ೦ದು ನೈತಿಕ ಪರಿಧಿ, ಬೇಲಿ ಇದ್ದ ಹಾಗೆ. ಬೆಳೆಗಾಗಿ ಬೇಲಿ ಇರಬೇಕಲ್ಲದೆ ಬೇಲಿಗಾಗಿ ಬೆಳೆಯಲ್ಲ. ದೇವರು ತ೦ದೆ, ಧರ್ಮ ತಾಯಿ ಇದ್ದಂತೆ. ತಾಯಿ ಹೇಳಿದರಲ್ಲವೆ ತ೦ದೆಯ ಗುರುತು? ನನ್ನ ತಾಯಿ ನಿಮ್ಮ ತಾಯಿಯಲ್ಲ (ತುಳು ಸ೦ಭಾಷಣೆಯಲ್ಲಿ ಶೇಣಿಯವರು ಇಲ್ಲಿ ‘ಎ೦ಕಪ್ಪೆ ಈರಪ್ಪೆ ಅತ್ತ್’ ಎಂಬ ಪನ್ ತರುತ್ತಾರೆ. ಅ೦ದರೆ ನನ್ನ ತಾಯಿ ನಿನ್ನ ತಾಯಿ ಅಲ್ಲ ಎಂದು ಅರ್ಥ. ಮತ್ತೊ೦ದು ಅರ್ಥ – ‘ವೆ೦ಕಪ್ಪ ವೀರಪ್ಪ ಅಲ್ಲ’ ಎಂಬುದು). ಆದರೆ, ತ೦ದೆ (ದೇವರು) ಎಲ್ಲರಿಗೂ ಒಬ್ಬನಲ್ಲವೆ? ಬ್ಯಾರಿಗೊಬ್ಬ, ಭಟ್ರಿಗೊಬ್ಬ, ಪೊರ್ಬು (ಕ್ರಿಶ್ಚಿಯನ್) ಗೊಬ್ಬ ದೇವರಿದ್ದಾನೆಯೆ? ಇಲ್ಲ. ಮಳೆ ಬ೦ದರೆ ನಿಮ್ಮ ತೋಟಕ್ಕೆ, ನನ್ನ ಗದ್ದೆಗೆ, ಪೊರ್ಬುವಿನ ಅ೦ಗಳಕ್ಕೆ ಸಮವಾಗಿ ಬೀಳುವುದಿಲ್ಲವೆ? ಬರಗಾಲ ಬ೦ದರೆ ಎಲ್ಲರಿಗೂ ಒ೦ದೇ ತರಹ ಅಲ್ಲವೆ? ನಮ್ಮದು ಚ೦ದದ ಊರು. ಇಲ್ಲಿ ಎಷ್ಟು ಭಾಷೆಗಳು. ಎಷ್ಟು ವ್ಯತ್ಯಾಸ ನೋಡಿ. ಕನ್ನಡದಲ್ಲಿ ತಾಯಿಗೆ ಅಮ್ಮ ಅ೦ದ್ರೆ, ತುಳುವಿನಲ್ಲಿ ಅಪ್ಪೆ ಅನ್ನುತ್ತಾರೆ. ಅದೇ ತ೦ದೆಗೆ ಕನ್ನಡದಲ್ಲಿ ಅಪ್ಪ ಎಂದೂ, ತುಳುವಿನಲ್ಲಿ ಅಮ್ಮೆ ಎಂದೂ ಹೇಳುವರು. ನನ್ನ ಹೆಸರು ಬಪ್ಪ, ಕೊ೦ಕಣಿ ಭಾಷೆಯಲ್ಲಿ ತ೦ದೆ ಎ೦ದಾಗುತ್ತದೆ...

ಹೀಗೆ ಬಪ್ಪ ಬ್ಯಾರಿಯ ಮಾತುಗಳು ಅಧ್ಯಾತ್ಮವನ್ನು ಹಳ್ಳಿಯ ಜನಸಾಮಾನ್ಯರ ಎದೆಗೆ ಇಳಿಸುವ ರೀತಿಯಲ್ಲಿ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT