ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಧಾನಿ ಹಾಕಿಸಿಕೊಂಡ ಲಸಿಕೆಯನ್ನೇ ನಮಗೆ ನೀಡಿ’: ಕೋವ್ಯಾಕ್ಸಿನ್‌ಗೆ ಭಾರೀ ಬೇಡಿಕೆ

Last Updated 8 ಏಪ್ರಿಲ್ 2021, 3:15 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿ ಅನುಮಾನದಿಂದ ನೋಡಲಾಗುತ್ತಿದ್ದ ದೇಶೀಯ ಲಸಿಕೆ ಕೋವ್ಯಾಕ್ಸಿನ್ ‌‌ಈಗ ಸಾರ್ವಜನಿಕರ ಆಯ್ಕೆಯ ಲಸಿಕೆಯಾಗಿದೆ. ಹೌದು, 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯದ ಆರೋಗ್ಯಾಧಿಕಾರಿಗಳು ಈ ಹೊಸ ಪ್ರವೃತ್ತಿಯನ್ನು ಗಮನಿಸಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಈವರೆಗೆ ರಾಜ್ಯದಲ್ಲಿಒಟ್ಟು 5.08 ಲಕ್ಷ ಡೋಸ್ ಕೋವ್ಯಾಕ್ಸಿನ್ನೀಡಲಾಗಿದೆ. ಬುಧವಾರ ಬೆಳಿಗ್ಗೆಯವರೆಗೆ ನೀಡಲಾಗಿರುವ 44.9 ಲಕ್ಷ ಕೋವಿಶೀಲ್ಡ್ ಡೋಸ್‌ಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ. ಆದರೆ, ಏಪ್ರಿಲ್ 1 ರಿಂದ ಕೋವ್ಯಾಕ್ಸಿನ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ, ಜನವರಿ 16 ರಂದು ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾದಾಗಿನಿಂದ ಈವರೆಗೆ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಒಟ್ಟು 10,350 ಡೋಸ್‌ ಲಸಿಕೆ ನೀಡಲಾಗಿದ್ದು, ಇದರಲ್ಲಿ 5,070 ಡೋಸ್‌ ಕೋವಿಶೀಲ್ಡ್ ಲಸಿಕೆಯಾದರೆ ಅರ್ಧಕ್ಕಿಂತ ಹೆಚ್ಚು (5,280) ಕೋವ್ಯಾಕ್ಸಿನ್ಲಸಿಕೆ ನೀಡಲಾಗಿದೆ.

"ಮಾರ್ಚ್ 13 ರಂದು ಕೋವ್ಯಾಕ್ಸಿನ್ಲಸಿಕೆ ಹಾಕುವ ಪ್ರಕ್ರಿಯೆ ಆರಂಭಿಸಲಾಗಿದ್ದರೂ ಸಹ, ಅದರ ವಿತರಣಾ ಸಂಖ್ಯೆಯು ಈಗಾಗಲೇ ಕೋವಿಶೀಲ್ಡ್‌ಗೆ ‌‌ ಸಮಾನವಾಗಿದೆ" ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಬಿ ಆರ್ ವೆಂಕಟೇಶಯ್ಯ ಹೇಳಿದರು.

ಜನವರಿ 16 ರಿಂದ ವ್ಯಾಕ್ಸಿನೇಷನ್ ಆರಂಭವಾದಾಗಿನಿಂದ ಈವರೆಗೆ 13,107 ಡೋಸ್ ಲಸಿಕೆ ವಿತರಿಸಿರುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಸಾರ್ವಜನಿಕರಲ್ಲಿ ಹೆಚ್ಚು ಆಸಕ್ತಿ ಕಂಡುಬಂದಿದೆ. “ಈ ಒಟ್ಟು ವಿತರಣೆಯಾದ ಲಸಿಕೆಯಲ್ಲಿ ಕೇವಲ 2,092ಕೋವ್ಯಾಕ್ಸಿನ್ ಲಸಿಕೆ ಆಗಿದೆ. ಆದರೆ, ಇವುಗಳಲ್ಲಿ ಸುಮಾರು 2,000 ಡೋಸ್ ಲಸಿಕೆ ಕಳೆದ 10 ರಿಂದ 12 ದಿನಗಳಲ್ಲಿ ನೀಡಲಾಗಿದೆ ” ಎಂದು ಮೂಲವೊಂದು ತಿಳಿಸಿದೆ.

‘ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬರುವ ಸುಮಾರು 65% ಜನರು ಈಗ ಕೋವ್ಯಾಕ್ಸಿನ್ ಲಸಿಕೆಗೆ ಬೇಡಿಕೆ ಇಡುತ್ತಿದ್ದಾರೆ" ಎಂದು ಮೂಲಗಳು ಹೇಳಿವೆ.

ಜನರು ಕೋವ್ಯಾಕ್ಸಿನ್ಲಸಿಕೆ ಬೇಡಿಕೆ ಇಡುತ್ತಿರುವ ಸಂಗತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಮ್ಯುನಿಸೇಶನ್ಸ್ ನಿರ್ದೇಶಕರಾದ ಡಾ. ರಜನಿ ನಾಗೇಶ್ವರ್ ರಾವ್ ಅವರು ಸಹ ಖಚಿತಪಡಿಸಿದ್ಧಾರೆ. ವಿಶೇಷವಾಗಿ, ಬೆಂಗಳೂರಿನಲ್ಲಿ ಕೋವ್ಯಾಕ್ಸಿನ್ಲಸಿಕೆ ಬೇಡಿಕೆ ಹೆಚ್ಚಾಗಿದೆ ಎಂದು ಅವರು ಹೇಳಿದ್ಧಾರೆ. ಆದರೂ, ಮಾರ್ಚ್ ಮಧ್ಯಭಾಗದಲ್ಲಿ ಕೊವ್ಯಾಕ್ಸಿನ್‌ಗೆ ಬೇಡಿಕೆ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದರು. "ಕೋವ್ಯಾಕ್ಸಿನ್ಲಸಿಕೆ ಕ್ಲಿನಿಕಲ್ ಟ್ರಯಲ್ ಮೋಡ್‌ನಿಂದ ಹೊರಬಂದ ಬಳಿಕ ಹೆಚ್ಚಿನ ಜನರು ಅದನ್ನು ಕೇಳಲು ಪ್ರಾರಂಭಿಸಿದ್ಧಾರೆ" ಎಂದು ಅವರು ಖಚಿತಪಡಿಸಿದ್ದಾರೆ.

ಕೋವಿಶೀಲ್ಡ್ ಪರಿಣಾಮಕತ್ವದ ಬಗ್ಗೆ ವೈದ್ಯಕೀಯ ವರದಿಗಳ ಕಾರಣದಿಂದಾಗಿ ಕೋವ್ಯಾಕ್ಸಿನ್ ಲಸಿಕೆ ಬಗ್ಗೆ ಜನರ ಆಸಕ್ತಿ ಹೆಚ್ಚಾಗಿರಬಹುದು ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಮತ್ತು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯ ಡಾ.ಎಚ್. ಸುದರ್ಶನ್ ಬಲ್ಲಾಳ್ ಹೇಳಿದರು. ಅಸ್ಟ್ರಾಜೆನೆಕಾ ಲಸಿಕೆ (ಕೋವಿಶೀಲ್ಡ್) ಮತ್ತು ಮೆದುಳಿನಲ್ಲಿ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ನಡುವಿನ ಸಂಬಂಧದ ಬಗ್ಗೆ ಇತ್ತೀಚಿಗೆ ಬಂದ ವರದಿಗಳ ಬಗ್ಗೆ ಅವರು ಗಮನಸೆಳೆದರು.

ಕೋವಿಶೀಲ್ಡ್‌(65% ಮತ್ತು 90% ಪರಿಣಾಮಕಾರಿತ್ವದ ವರದಿ) ಗಿಂತ ಕೋವ್ಯಾಕ್ಸಿನ್ಲಸಿಕೆಯು ಹೆಚ್ಚಿನ ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಜನರು ನಂಬುತ್ತಾರೆ. ಸೆಲೆಬ್ರಿಟಿಗಳು ಮತ್ತು ನಾಯಕರು ಸಹ ಕೊವ್ಯಾಕ್ಸಿನ್ ಲಸಿಕೆ ತೆಗೆದುಕೊಂಡಿದ್ದಾರೆ. ಹಾಗಾಗಿಯೇ, ಕೋವ್ಯಾಕ್ಸಿನ್ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ ಎಂದು ಯೋಜನಾ ಸಂಯೋಜಕರಾದ ಇಸ್ಮಾಯಿಲ್ ಮೊಹಮ್ಮದ್ ಹೇಳುತ್ತಾರೆ.

"ಪ್ರಧಾನ ಮಂತ್ರಿ ಮೋದಿಯವರು ತೆಗೆದುಕೊಂಡ" ಲಸಿಕೆಯನ್ನೇ ನಮಗೆ ನೀಡಿ ಎಂದು ಜನರು ಒತ್ತಾಯಿಸುತ್ತಾರೆ ಎಂದು ಸರ್ಕಾರದ ರೋಗನಿರೋಧಕ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT