ಗುರುವಾರ , ಮೇ 26, 2022
24 °C
ಸಂಸ್ಕೃತ ವಿಶ್ವವಿದ್ಯಾಲಯ: ಏನಿದು ವಿವಾದ?

ಪ್ರಜಾವಾಣಿ ಸಂವಾದ: ಅನ್ನದ ಭಾಷೆಗೆ ವಂಚನೆ ಸಲ್ಲದು; ಸಂಸ್ಕೃತಕ್ಕೂ ಆದ್ಯತೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಸ್ಕತದ ಬಗ್ಗೆ ದ್ವೇಷ ಇಲ್ಲ. ಸಂಸ್ಕೃತದಲ್ಲಿನ ಜ್ಞಾನ ಭಂಡಾರ ಕನ್ನಡಕ್ಕೆ ಬರಬೇಕು. ಆದರೆ, ನಾಡಿನ ವಿಶ್ವವಿದ್ಯಾಲಯಗಳೇ ದುಃಸ್ಥಿತಿಯಲ್ಲಿವೆ. ಹೀಗಿರುವಾಗ, ಅತಿ ಕಡಿಮೆ ಸಂಖ್ಯೆಯಲ್ಲಿ ಅಧ್ಯಯನ ಮಾಡುವ ಮತ್ತು ಮಾತನಾಡುವ ಜನರಿಗಾಗಿ ಸರ್ಕಾರ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ₹359 ಕೋಟಿ ಅನುದಾನ ಮತ್ತು 100 ಎಕರೆ ಜಮೀನು ನೀಡುವ ಅಗತ್ಯ ಏನಿದೆ ಎನ್ನುವ ಪ್ರಶ್ನೆ ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ’ಫೇಸ್‌ ಬುಕ್‌‘ ಲೈವ್‌ ಸಂವಾದದಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಅತಿಥಿಗಳು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

‘ಬಿಕ್ಕಟ್ಟುಗಳಿಗೆ ಸ್ಪಂದಿಸುವ ವಿಶ್ವವಿದ್ಯಾಲಯ ಬೇಕು’

ಯಾವುದೇ ವಿಶ್ವವಿದ್ಯಾಲಯ ಸದ್ಯದ ಬಿಕ್ಕಟ್ಟುಗಳಿಗೆ ಯಾವ ರೀತಿ ಪರಿಹಾರ ಸೂಚಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಮಹಿಳೆಯರು, ಪರಿಶಿಷ್ಟರು ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ನೀಡಬೇಕು. 12ನೇ ಶತಮಾನದಲ್ಲಿ ಸಮಾಜ ಎದುರಿಸುತ್ತಿದ್ದ ಬಿಕ್ಕಟ್ಟುಗಳಿಗೆ ಅಚ್ಚಕನ್ನಡದಲ್ಲಿ ’ವಚನ ವಿಶ್ವವಿದ್ಯಾಲಯ‘ ಉತ್ತರ ನೀಡಿತ್ತು. ಇಂತಹ ವಚನ ಸಾಹಿತ್ಯ ನಮ್ಮ ಆದ್ಯತೆಯಾಗಬೇಕು.

ಇಂದು ದೇವಭಾಷೆ ಮತ್ತು ಅನ್ನದ ಭಾಷೆ ನಡುವೆ ಹೋರಾಟ ನಡೆಯುತ್ತಿದೆ. ‌ಬೇರೆ ವಿಶ್ವವಿದ್ಯಾಲಯಗಳಿಗೆ ಅನುದಾನವನ್ನೇ ಕೊಡುತ್ತಿಲ್ಲ. ಹಂಪಿ ವಿಶ್ವವಿದ್ಯಾಲಯದಲ್ಲಿ ನಿವೃತ್ತರಿಗೆ ಸೌಲಭ್ಯಗಳನ್ನು ನೀಡಿಲ್ಲ. ಸಾವಿರಾರು ಜನ ಊಟಕ್ಕೆ ಪರದಾಡುತ್ತಿರುವಾಗ ಇನ್ನೊಂದು ಭಾಷೆಯ ಬಗ್ಗೆ ಮಮಕಾರ ಸರಿಯೇ?

ಸಂಸ್ಕೃತದ ಬಗ್ಗೆ ಎಲ್ಲರಿಗೂ ಪ್ರೀತಿ ಮತ್ತು ಗೌರವ ಇದೆ. ಶತಮಾನಗಳಿಂದ ಸಂಸ್ಕೃತವನ್ನು ಜತೆಯಾಗಿಟ್ಟುಕೊಂಡಿದ್ದೇವೆ. ಮುಂದೆಯೇ ಇಟ್ಟುಕೊಳ್ಳುತ್ತೇವೆ. ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ದೊರೆಯಬೇಕು.

ಸಂಸ್ಕೃತ ಭಾಷೆ ಬಹುಸಂಖ್ಯಾತರನ್ನು ಹೊರಗಿಟ್ಟಿದೆ. ಈ ಭಾಷೆಯಲ್ಲಿ ಒಳಗೊಳ್ಳುವಿಕೆ ಇಲ್ಲ. ಈಗಲೂ ಜನರ ಉಸಿರಾಗಿರುವ ಕನ್ನಡಕ್ಕೆ ಪ್ರಾಮುಖ್ಯತೆ ನೀಡದಿದ್ದರೆ ವಂಚನೆ ಮಾಡಿದಂತಾಗುತ್ತದೆ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಸಾವಿರಾರು ಮಂದಿ ಇದ್ದಾರೆ. ಆದರೆ, ಸಂಸ್ಕೃತ ಓದಿದವರು ಅತ್ಯಂತ ಕಡಿಮೆ ಮಂದಿ. ಆದ್ದರಿಂದ, ನಮ್ಮ ಮೊದಲ ಆದ್ಯತೆ ಅನ್ನದ ಪ್ರಶ್ನೆಯಾಗಬೇಕು. ಸಂಸ್ಕೃತ ‌ಜನರ ಭಾಷೆ ಅಥವಾ ಆಡಳಿತ ಭಾಷೆ ಅಲ್ಲ. ಆದರೂ, ಅಲ್ಲಿನ ಜ್ಞಾನದ ಭಾಷೆಯನ್ನು ಕನ್ನಡದ ಜನ ಗೌರವಿಸಿದ್ದಾರೆ.

- ಡಾ.ಎಂ.ಎಸ್‌. ಆಶಾದೇವಿ, ಕನ್ನಡ ಪ್ರಾಧ್ಯಾಪಕಿ, ಮಹಾರಾಣಿ ಕ್ಲಸ್ಟರ್‌ ವಿ.ವಿ., ಬೆಂಗಳೂರು.

***

‘ಸಂಸ್ಕೃತ ವಿ.ವಿ ಹಿಂದೆ ಹುನ್ನಾರ ಅಡಗಿದೆ’

ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶದ ಹಿಂದೆ ಆರ್‌ಎಸ್‌ಎಸ್‌ನ ಹುನ್ನಾರ ಅಡಗಿದೆ. ದೇಶಕ್ಕೆ ಒಂದೇ ಭಾಷೆ ಇರಬೇಕು. ಅದು ಸಂಸ್ಕೃತವಾಗಿರಬೇಕು ಎನ್ನುವುದು ಆರ್‌ಎಸ್‌ಎಸ್‌ನ ಕಾರ್ಯಸೂಚಿ. ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ದೊರೆತರೆ ಸಂಸ್ಕೃತಕ್ಕೆ ಮಾನ್ಯತೆ ದೊರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ವಿಷಯವನ್ನು ಕಡ್ಡಾಯ ಮಾಡಿರುವುದನ್ನು ಸಂಸ್ಕೃತ ಭಾರತಿ ಟ್ರಸ್ಟ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಭವಿಷ್ಯದಲ್ಲಿ ಪ್ರಾಥಮಿಕ ಶಿಕ್ಷಣ, ಆಡಳಿತ ಮತ್ತು ಉದ್ಯೋಗದಲ್ಲಿಯೂ ಕನ್ನಡ ಕಡ್ಡಾಯ ಮಾಡುವುದನ್ನು ತೆಗೆದುಹಾಕುವಂತೆ ವಾದ ಮಂಡಿಸಬಹುದು. ಇದರಿಂದ, ಕನ್ನಡಿಗರಿಗೆ ಕುತ್ತು ಬರಲಿದೆ. ಹೀಗಾಗಿ, ಸಂಸ್ಕೃತ ಭಾರತಿ ನ್ಯಾಯಾಲಯದಲ್ಲಿನ ಮೊಕದ್ದೆಮಯನ್ನು ವಾಪಸ್‌ ಪಡೆಯಬೇಕು.

ಕೇಂದ್ರ ಸರ್ಕಾರವು ಸಂಸ್ಕೃತದ ಅಭಿವೃದ್ಧಿಗೆ ₹ 1,200 ಕೋಟಿ ಅನುದಾನ ನೀಡಿದೆ. ಆದರೆ, ಇತರ ಪ್ರಾದೇಶಿಕ ಭಾಷೆಗಳಿಗೆ ಅತ್ಯಲ್ಪ ಅನುದಾನ ನೀಡಿದೆ. ಸಂಸ್ಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಕೃತದ ವಿರುದ್ಧ ನಾವು ಹೋರಾಟ ಮಾಡುತ್ತಿಲ್ಲ. ಈ ರೀತಿಯ ತಾರತಮ್ಯದ ವಿರುದ್ದ ಮತ್ತು ಕನ್ನಡ ಕಡ್ಡಾಯ ಮಾಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯದಲ್ಲಿನ ಬಹುತೇಕ ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆ ಇದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ಎಲ್ಲ ವಿಶ್ವವಿದ್ಯಾಲಯಗಳನ್ನು ಉಳಿಸಿ ಬೆಳೆಸಬೇಕು.

- ಅರುಣ ಜಾವಗಲ್‌, ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ

***

‘ಸಂಸ್ಕೃತದ ಸಂಶೋಧನೆಗೆ ಸಂಸ್ಥೆಯ ಬೆಂಬಲ ಅಗತ್ಯ’

ಸಂಸ್ಕತ ದೇವ ಭಾಷೆ ಎನ್ನುವುದಕ್ಕೆ ಯಾವ ವಾಖ್ಯಾನವೂ ಇಲ್ಲ. ಇಂಗ್ಲಿಷ್‌ ಅನ್ನದ ಭಾಷೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಕನ್ನಡ ಮತ್ತು ಸಂಸ್ಕೃತ ಮಧ್ಯೆ ವಿವಾದ ಸೃಷ್ಟಿಸಿದಾಗ ಕನ್ನಡ ಅನ್ನದ ಭಾಷೆಯಾಗುತ್ತದೆ. ಆಗ ಸಂಸ್ಕೃತ ದೇವ ಭಾಷೆಯಾಗುತ್ತದೆ. ಇದು ಸರಿಯಾದ ಕ್ರಮವಲ್ಲ.

ಕನ್ನಡದ ಭಾಗವನ್ನು ಸಂಸ್ಕೃತ ಕಸಿದುಕೊಳ್ಳುತ್ತಿದೆ ಎನ್ನುವುದು ಹಾಸ್ಯಾಸ್ಪದ. ಯಾವುದೇ ರಾಜ್ಯದ ಭಾಷೆ ಸಂಸ್ಕೃತವಲ್ಲ. ಸಂಸ್ಕೃತ ಸಂಶೋಧನೆಗೆ ಸಂಸ್ಥೆಯ ಬೆಂಬಲ ಬೇಕು. ಸಂಸ್ಕೃತದ ಅಮೂಲ್ಯ ಗ್ರಂಥ ಭಂಡಾರ ಉಳಿಸಬೇಕು. ಇದಕ್ಕಾಗಿ ಪಂಡಿತರು ಬೇಕು ಮತ್ತು ಅನುದಾನವೂ ಬೇಕು. ಹೀಗಾಗಿಯೇ, ಸಂಸ್ಕೃತ ವಿಶ್ವವಿದ್ಯಾಲಯ ಅಗತ್ಯತೆಯನ್ನು ಕಂಡುಕೊಂಡು ಸ್ಥಾಪಿಸಲಾಗುತ್ತಿದೆ. ಇದು ಹಲವು ವರ್ಷಗಳ ಬೇಡಿಕೆ.

ಸಂಸ್ಕೃತ ಪಾಠಶಾಲೆಯ ಕೋರ್ಸ್‌ಗಳಿಗೆ ಈ ಮೊದಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪ್ರಮಾಣಪತ್ರಗಳನ್ನು ನೀಡುತ್ತಿತ್ತು. ದೇಶದ ಯಾವುದೇ ವಿಶ್ವವಿಶ್ವದ್ಯಾಲಯ ಈ ಪ್ರಮಾಣಪತ್ರಕ್ಕೆ ಮಾನ್ಯತೆ ಅಥವಾ ಬೆಲೆ ನೀಡುತ್ತಿರಲಿಲ್ಲ. ಈಗ ಸಂಸ್ಕೃತ ವಿಶ್ವವಿದ್ಯಾಲಯ ಆರಂಭಿಸಿದ ನಂತರ ಈ ಪ್ರಮಾಣಪತ್ರಕ್ಕೆ ಮಾನ್ಯತೆ ದೊರೆತಿದೆ. ಸಂಸ್ಕೃತ ವಿ.ವಿ. ಅಗತ್ಯತೆಗೆ ಇದೂ ಒಂದು ಕಾರಣ.

ಕನ್ನಡ ವಿಶ್ವವಿದ್ಯಾಲಯ ಇದುವರೆಗೆ ನಾಡಿಗೆ ಏನೇನು ಕೊಡುಗೆ ನೀಡಿದೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟು ಚರ್ಚೆ ನಡೆಯಬೇಕಿದೆ. ಅದೇ ರೀತಿಯ ಪ್ರಶ್ನೆಯನ್ನು ಇತರ ವಿಶ್ವವಿದ್ಯಾಲಯಗಳ ಮುಂದಿಡಬೇಕು. ನಿತ್ಯ ಮಾತನಾಡುವ ಕನ್ನಡವನ್ನು ವಿಶ್ವ ವಿದ್ಯಾಲಯದಲ್ಲಿಯೇ ಕಲಿಯಬೇಕಾಗಿಲ್ಲ. ಸಂಸ್ಕೃತ ಜ್ಞಾನಭಂಡಾರದ ಅಧ್ಯಯನಕ್ಕೆ ಸಾಂಸ್ಥಿಕ, ಆರ್ಥಿಕ ಬೆಂಬಲ ಬೇಕಾಗಿದೆ.

- ಡಾ. ನವೀನ್‌ ಭಟ್‌ ಗಂಗೋತ್ರಿ, ಸಹಾಯಕ ಪ್ರಾಧ್ಯಾಪಕ, ಅಮೃತ ವಿಶ್ವವಿದ್ಯಾಪೀಠಂ, ಕೊಯಮತ್ತೂರು

***

ಪೂರ್ಣ ಸಂವಾದವನ್ನು www.facebook.com/prajavani.net  ಹಾಗೂ https://youtu.be/kJnIta1bjHk ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು