ಶನಿವಾರ, ಜನವರಿ 29, 2022
17 °C
ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಕುರಿತು ಸಚಿವ ಬಿ.ಶ್ರೀರಾಮುಲು ಲೇವಡಿ

ಸಿಎಂ ಸ್ಥಾನಕ್ಕೆ ಭಂಡಾಸುರ, ಮೊಂಡಾಸುರರ ಕಚ್ಚಾಟ: ಸಚಿವ ಶ್ರೀರಾಮುಲು ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ಭಂಡಾಸುರ (ಡಿ.ಕೆ.ಶಿವಕುಮಾರ್‌) ಹಾಗೂ ಮೊಂಡಾಸುರರ (ಸಿದ್ದರಾಮಯ್ಯ) ನಡುವೆ ಕಚ್ಚಾಟ ನಡೆಯುತ್ತಿದೆ. ತಮ್ಮ ಒಳಜಗಳ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಕಾಂಗ್ರೆಸ್‌ ದಯನೀಯ ಸ್ಥಿತಿಯಲ್ಲಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂಬುದು ಭ್ರಮೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿ ದೊಡ್ಡ ನಾಯಕರಾಗಲು ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ’ ಎಂದರು.

‘ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಇಲ್ಲ. ಎಲ್ಲ ನಾಯಕರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತೇವೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಟ್‌ ಕಾಯಿನ್‌ ಬಗ್ಗೆ ಕಾಂಗ್ರೆಸ್‌ ಆಧಾರ ರಹಿತ ಆರೋಪ ಮಾಡುತ್ತಿದೆ. ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಹೆದರಿಸುವವರಂತೆ ವರ್ತಿಸುತ್ತಿದೆ. ಸಾಕ್ಷ್ಯ ಒದಗಿಸಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳಲು ಸಿದ್ಧರಿದ್ದಾರೆ’ ಎಂದು ಹೇಳಿದರು.

***

ಭಾರಿ ಮಳೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ. ರಾಜ್ಯ ಹಾಗೂ ಕೇಂದ್ರದ ತಂಡಗಳು ಭೇಟಿ ನೀಡಿ ವರದಿ ನೀಡಿದ ತಕ್ಷಣ ಪರಿಹಾರ ಒದಿಸಲಾಗುತ್ತದೆ.

ಬಿ.ಶ್ರೀರಾಮುಲು
ಸಾರಿಗೆ ಸಚಿವ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು