ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಬಿಜೆಪಿ ಕಾರ್ಯಕರ್ತರು

ಇದು ಹೇಡಿಗಳ ಕೃತ್ಯ ಎಂದ ಸಿದ್ದರಾಮಯ್ಯ
Last Updated 18 ಆಗಸ್ಟ್ 2022, 20:06 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಗುರುವಾರ ಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದರು. ಕಪ್ಪು ಬಾವುಟ ಪ್ರದರ್ಶಿಸಿ, ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿಗೆ ತಿತಿಮತಿಯಲ್ಲಿ ಕಾರನ್ನು ತಡೆದು, ಕರಪತ್ರ ಒಳಕ್ಕೆ ಎಸೆದು, ಧಿಕ್ಕಾರ ಕೂಗಿದರು. ನಂತರ, ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸೇರಿ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದರು. ಕೆಲವು ಮೊಟ್ಟೆಗಳು ಪತ್ರಕರ್ತರ ಮೇಲೂ ಬಿದ್ದವು.

‘ಕೊಡಗು ವಿರೋಧಿ ಸಿದ್ದರಾಮಯ್ಯ’, ‘ಶಾಂತಿಪ್ರಿಯ ಕೊಡಗಿಗೆ ಸಿದ್ದರಾಮಯ್ಯ ಬರುವುದು ಬೇಡ’, ‘ಟಿಪ್ಪು ಜಯಂತಿಯನ್ನು ಬಲವಂತವಾಗಿ ಹೇರಿದ ಹಿಂದೂ ವಿರೋಧಿ’ ಎಂಬ ಘೋಷಣೆಗಳನ್ನ ಕೂಗಿದರು.

ಅದನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಬಿಜೆಪಿ ಕಾರ್ಯಕರ್ತರತ್ತ ನುಗ್ಗಲು ಯತ್ನಿಸಿದಾಗ, ಪೊಲೀಸರು ವೃತ್ತದ ಎರಡೂ ಬದಿಗಳಲ್ಲಿ ಉಭಯ ಪಕ್ಷದ ಕಾರ್ಯಕರ್ತರನ್ನು ತಡೆದರು.

‘ಕೋಳಿಮೊಟ್ಟೆ ಎಸೆದವರನ್ನು ಬಂಧಿಸಿ, ಇಲ್ಲವೇ ನಮ್ಮನ್ನು ಬಂಧಿಸಿ’ ಎಂದು ಕಾರ್ಯಕರ್ತರು ವೃತ್ತದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು, ನಗರ ಸಭೆ ಸದಸ್ಯರು ಕಪ್ಪು ಬಾವುಟ ಹಿಡಿದು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಉಭಯ ಪಕ್ಷದ ನಾಯಕರ ಮನವೊಲಿಸಿದರು. ಇದರಿಂದಾಗಿ 30 ನಿಮಿಷಗಳಿಗೂ ಹೆಚ್ಚು ಕಾಲ ಸಂಚಾರದಟ್ಟಣೆ ಉಂಟಾಗಿತ್ತು.

ನಂತರ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಜನರಲ್ ತಿಮ್ಮಯ್ಯ ವೃತ್ತದಿಂದ ಸುದರ್ಶನ ಅತಿಥಿ ಗೃಹದವರೆಗೂ ಮೆರವಣಿಗೆಯಲ್ಲಿ ಕರೆತಂದರು. ನಂತರ ಅವರು ಜಿಲ್ಲಾ ಪ್ರವಾಸ ಮುಗಿಸಿ ಹೊರಡುವಾಗ ಕುಶಾಲನಗರದ ಗುಡ್ಡೆಹೊಸೂರು ಸಮೀಪವೂ ಕಾರನ್ನು ಅಡ್ಡಗಟ್ಟಿ ಘೇರಾವ್ ಮಾಡಲು ಹಾಗೂ ಕಲ್ಲೆಸೆಯಲು ಯತ್ನಿಸಿದವರನ್ನು ಪೊಲೀಸರು ವಶಕ್ಕೆ ಪಡೆದರು. ಸಂಜೆ ಶನಿವಾರಸಂತೆಗೆ ತೆರಳುವ ಮಾರ್ಗದಲ್ಲೂ ಅವರ ವಾಹನ ಬಂದಾಗ ಬಿಜೆಪಿ ಕಾರ್ಯಕರ್ತರು ‌ಕಪ್ಪುಬಾವುಟ ಪ್ರದರ್ಶಿಸಿ ಘೋಷಣೆ ಕೂಗಿದರು.

26ರಂದು ಪ್ರತಿಭಟನೆ: ಅದರಿಂದ ಕೋಪಗೊಂಡ ಸಿದ್ದರಾಮಯ್ಯ, ‘ಹೆಜ್ಜೆಹೆಜ್ಜೆಗೂ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿದ್ದಾರೆ. ಪೊಲೀಸ್ ಇಲಾಖೆ ಭದ್ರತೆ ನೀಡಲು ವಿಫಲವಾಗಿದೆ. ಆಗಸ್ಟ್ 26ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ಕಾರ್ಯಕರ್ತರ ವರ್ತನೆ ಖಂಡಿಸಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಿ.ನರಸೀಪುರದ ರಾಷ್ಟ್ರೀಯ ಹೆದ್ದಾರಿಯ ಗರ್ಗೇಶ್ವರಿ ಬಳಿ ಗುರುವಾರ ಸಂಜೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಇದು ಹೇಡಿಗಳ ಕೃತ್ಯ: ಸಿದ್ದರಾಮಯ್ಯ
‘ಕೊಡಗಿನಲ್ಲಿ 2018ರಲ್ಲಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಮನೆ ನೀಡಿಲ್ಲ. ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಳಪೆಯಾಗಿರುವುದು ಗೊತ್ತಾಗಬಾರದು ಎಂದು ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿ ತಡೆಯುವಂಥ ಹೇಡಿತನದ ಕೆಲಸ ಮಾಡಿದರು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

‘ತಡೆಗೋಡೆಯ ಕಳಪೆ ಕಾಮಗಾರಿಯಲ್ಲಿ ಕಮಿಷನ್ ಹಣ ಜನಪ್ರತಿನಿಧಿಗಳಿಗೂ ಹೋಗಿದೆ. ಕೊಡಗಿನಲ್ಲೂ ಬಿಜೆಪಿ ವಿರುದ್ಧ ಜನಸಾಮಾನ್ಯರಲ್ಲಿ ಆಕ್ರೋಶ ಮಡುಗಟ್ಟಿದ್ದು, ಬದಲಾವಣೆ ಬಯಸಿದ್ದಾರೆ. ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವೆಂಬುದನ್ನು ತಿಳಿದೇ ಹಣ ಕೊಟ್ಟು ಜನರನ್ನು ಕರೆತಂದು ಪ್ರತಿಭಟನೆ ನಡೆಸಿದರು’ ಎಂದು ದೂರಿದರು.

‘ಹಲವು ಬಾರಿ ಕೊಡಗಿಗೆ ಬಂದಿದ್ದಾಗ ಪ್ರತಿಭಟನೆ ಎದುರಾಗಿರಲಿಲ್ಲ. ಈಗ ಮಾತ್ರ ಪ್ರತಿಭಟಿಸಿರುವುದು ಸರ್ಕಾರ ಹತಾಶಗೊಂಡಿರುವುದರ ಪ್ರತೀಕ. ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಕೊಡಗಿನಲ್ಲಿ ಬಿಜೆಪಿಯ ಯಾವ ಸಚಿವರನ್ನೂ ಓಡಾಡುವುದಕ್ಕೆ ಬಿಡುವುದಿಲ್ಲ. ಆದರೆ, ಅದು ನಮ್ಮ ಸಂಸ್ಕೃತಿಯಲ್ಲ’ ಎಂದರು.

‘ಕೋಳಿಮೊಟ್ಟೆ ಎಸೆದಿದ್ದು ನನಗೆ ಗೊತ್ತಿಲ್ಲ. ಆದರೆ, ಕಪ್ಪುಬಾವುಟ ಪ್ರದರ್ಶಿಸಿದ್ದು ಹೌದು’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

***

ಅತಿವೃಷ್ಟಿಯಿಂದ ಹಾನಿಯಾಗಿ ಹಲವು ದಿನಗಳಾಗಿವೆ. ಪರಿಹಾರ ಕೊಟ್ಟ ಮೇಲೆ ಈಗೇಕೆ ಪ್ರವಾಸ ಮಾಡುತ್ತಿದ್ದಾರೋ ಗೊತ್ತಿಲ್ಲ.
-ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವ

***

ತಿತಿಮತಿಯಲ್ಲಿ ಪ್ರತಿಭಟಿಸಿದವರನ್ನು ಬಂಧಿಸಿದ್ದರೆ ಇಡೀ ಜಿಲ್ಲೆಯಲ್ಲಿ ಇದು ಮರುಕಳಿಸುತ್ತಿರಲಿಲ್ಲ. ಪೊಲೀಸರು ಆರ್‌ಎಸ್‌ಎಸ್‌ ಜತೆ ಶಾಮೀಲಾಗಿ ಪಿತೂರಿ ನಡೆಸಿದ್ದಾರೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

***

ಸಿದ್ದರಾಮಯ್ಯ ಕಾರಿಗೆ ಮೊಟ್ಟೆಯನ್ನು ತೂರಿರುವ ಘಟನೆ ಬಗ್ಗೆ ಅರಿವಿದೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಜ್ಯದ ಡಿಜಿ–ಐಜಿಪಿ ಅವರಿಗೆ ಸೂಚಿಸಲಾಗಿದೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT