ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಬಾಲಂಗೋಚಿ ಜೆಡಿಎಸ್‌: ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

Last Updated 21 ಜನವರಿ 2022, 16:52 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿರುವ ಬಿಜೆಪಿಯ ಕೆಟ್ಟ ಸರ್ಕಾರಕ್ಕೆ ಬಾಲಂಗೋಚಿಯಂತೆ ಜೆಡಿಎಸ್‌ ಪಕ್ಷ ಕೆಲಸ ಮಾಡುತ್ತಿದೆ. ಜೆಡಿಎಸ್‌ನಿಂದ ಏನೂ ಆಗುವುದಿಲ್ಲ. ಬೇಕಾದಾಗ ಬಿಜೆಪಿ ಜತೆ ಇರುತ್ತಾರೆ, ಆಮೇಲೆ ಕಾಂಗ್ರೆಸ್‌ ಜತೆ ಬರುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕಾಂತರಾಜು (ಬೆಮೆಲ್ ಕಾಂತರಾಜು) ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ‘ಜೆಡಿಎಸ್‌ನವರು ಕೇವಲ ಜಾತಿಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ. ಅವರಿಗೆ ಸಿದ್ಧಾಂತವಿಲ್ಲ. ಅದು ರಾಜಕೀಯ ಪಕ್ಷವೇ ಅಲ್ಲ. ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್‌ ಪಕ್ಷವನ್ನು ತುಮಕೂರಿನಿಂದ ಓಡಿಸಿ’ ಎಂದರು.

ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮಾತ್ರ ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತಿದೆ. ಬಿಜೆಪಿಯು ಆರ್‌ಎಸ್‌ಎಸ್‌ನ ಮುಖವಾಡ ಮಾತ್ರ. ಅದಕ್ಕೆ ರಾಜಕೀಯ ಸಿದ್ಧಾಂತ ಇಲ್ಲ. ದೇವರು, ಧರ್ಮ, ಜಾತಿಯಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಾಲ ಮಾಡಿದ್ದೇ ಸಾಧನೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷಗಳಾಗಿವೆ. ನರೇಂದ್ರ ಮೋದಿ ಪ್ರಧಾನಿಯಾಗುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಾಲ ₹ 53.11 ಲಕ್ಷ ಕೋಟಿ ಇತ್ತು. ಈಗ 135.78 ಲಕ್ಷ ಕೋಟಿಗೆ ಏರಿಕೆಯಾಗಿದೆ. ಸಾಲ ಮಾಡಿದ್ದೇ ಮೋದಿ ಸರ್ಕಾರದ ಸಾಧನೆ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಕೇಂದ್ರ ಸರ್ಕಾರ ರೂಪಿಸಿದ ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಒಂದು ವರ್ಷ ನಿರಂತರ ಪ್ರತಿಭಟನೆ ನಡೆಸಿದರು. 702 ರೈತರು ಪ್ರತಿಭಟನೆ ಸಂದರ್ಭದಲ್ಲೇ ಮೃತಪಟ್ಟರು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದಿದೆ. ಮೋದಿ ಅವರಿಗೆ ಮಾನ, ಮರ್ಯಾದೆ ಇದ್ದಿದ್ದರೆ ಈ ವೇಳೆಗೆ ರಾಜೀನಾಮೆ ನೀಡಿರುತ್ತಿದ್ದರು’ ಎಂದರು.

ಬೇಷರತ್‌ ಬರುವವರಿಗೆ ಪ್ರವೇಶ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ವಿವಿಧ ಪಕ್ಷಗಳ ಹಲವು ಮುಖಂಡರು ಕಾಂಗ್ರೆಸ್‌ ಸೇರಲು ಆಸಕ್ತಿ ತೋರಿದ್ದಾರೆ. ನನ್ನ ಮತ್ತು ಪಕ್ಷದ ಸಮಿತಿಯ ಮುಂದೆ ಹಲವು ಅರ್ಜಿಗಳಿವೆ. ಪಕ್ಷದ ನಾಯಕತ್ವ ಮತ್ತು ಸಿದ್ಧಾಂತ ಒಪ್ಪಿಕೊಂಡು ಬೇಷರತ್‌ ಆಗಿ ಬರುವವರಿಗೆ ಪಕ್ಷಕ್ಕೆ ಪ್ರವೇಶ ನೀಡಲಾಗುವುದು’ ಎಂದು ತಿಳಿಸಿದರು.

ಕಾಂತರಾಜು ಮಾತನಾಡಿ, ‘ಕಾಂಗ್ರೆಸ್‌ನ ನಾಯಕತ್ವ ಮತ್ತು ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷ ಸೇರಿದ್ದೇನೆ. ಪಕ್ಷದ ನಾಯಕರು ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ’ ಎಂದರು.

ಶಾಸಕ ಡಾ.ಜಿ. ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ಆರ್‌. ಧ್ರುವ ನಾರಾಯಣ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಇದ್ದರು.

‘ಲಂಚ ಪಡೆದಿದ್ದು ಹೇಳಿದರೆ ನಿವೃತ್ತಿ’

‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ಭ್ರಷ್ಟ ಸರ್ಕಾರವನ್ನು ಎಂದೂ ನೋಡಿಲ್ಲ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರಿಂದ ಶೇಕಡ 40ರಷ್ಟು ಲಂಚ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ. ನಾನು 13 ಬಜೆಟ್‌ ಮಂಡಿಸಿದ್ದೇನೆ. ಎಲ್‌ಒಸಿ ಅಥವಾ ಇತರೆ ಕೆಲಸಕ್ಕೆ ಒಂದು ರೂಪಾಯಿ ಲಂಚ ಕೊಟ್ಟಿದ್ದೇನೆ ಎಂದು ಒಬ್ಬ ಗುತ್ತಿಗೆದಾರ ಹೇಳಿದರೂ ರಾಜಕೀಯ ನಿವೃತ್ತಿ ಪಡೆಯುವೆ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT