ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ

Last Updated 16 ಜನವರಿ 2022, 11:26 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿ ಅವಮಾನ ಮಾಡಿರುವ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ. ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಯಾವ ಕಾರಣಕ್ಕಾಗಿ ಅವಕಾಶ ನಿರಾಕರಿಸಲಾಗಿದೆ? ನಾರಾಯಣ ಗುರುಗಳು ಹಿಂದೂ ಧರ್ಮಕ್ಕೆ ಸೇರಿದವರಲ್ಲವೇ? ಅಂಥ ಅಭಿಪ್ರಾಯವನ್ನು ಬಿಜೆಪಿ ಪಕ್ಷ ಹೊಂದಿದ್ದರೆ ಹಾಗೆಂದು ಮುಕ್ತವಾಗಿ ಹೇಳುವ ಧೈರ್ಯ ತೋರಲಿ’ ಎಂದಿದ್ದಾರೆ.

‘ಹಿಂದೂ ಧರ್ಮದ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿ ಅವಮಾನಿಸಿರುವುದು 'ಹಿಂದು ಹೃದಯ ಸಾಮ್ರಾಟ' ಎಂದು ಕರೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಇ‌ನ್ನೂ ಬಂದಿಲ್ಲವೇ’ ಎಂದೂ ಪ್ರಶ್ನಿಸಿದ್ದಾರೆ.

‘ಶತಮಾನದ ಹಿಂದೆಯೇ ಅಸ್ಪೃಶ್ಯತೆ ಮತ್ತು ಪುರೋಹಿತಶಾಹಿ ವ್ಯವಸ್ಥೆ ವಿರುದ್ದ ಸಿಡಿದೆದ್ದು ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಾರಾಯಣ ಗುರುಗಳಿಗೆ ಅವಮಾನಿಸಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ತಮ್ಮ ಮೂಗಿನಡಿಯಲ್ಲಿಯೇ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಪ್ರತಿಕ್ರಿಯಿಸದೆ ಇರುವುದು ಆಶ್ಚರ್ಯಕರ. ಇದನ್ನು ಹೇಗೆ ಅರ್ಥೈಸಬೇಕು? ಈ ಅವಮಾನಕ್ಕೆ ಸಹಮತ ಇದೆಯೆಂದೇ?’ ಎಂದೂ ಕೇಳಿದ್ದಾರೆ.

‘ನಾನು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕೆಂಬ ನಿರ್ಧಾರ ಕೈಗೊಂಡೆ. ಇದರಿಂದಾಗಿ ಇಂದು ರಾಜ್ಯದ ಮೂಲೆಮೂಲೆಗೆ ಗುರುಗಳ ಚಿಂತನೆಯ ಸಂದೇಶ ತಲುಪುತ್ತಿದೆ‌ ಎಂಬ ಹೆಮ್ಮೆ ಮತ್ತು ತೃಪ್ತಿ ನನ್ನದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT