ತಿಪಟೂರು (ತುಮಕೂರು): ನೊಳಂಬ ಲಿಂಗಾಯತರ ಸಂಘದ ನೇತೃತ್ವದಲ್ಲಿ ಗುರು ಸಿದ್ಧರಾಮೇಶ್ವರರ 850ನೇ ಜಯಂತಿ ಮಹೋತ್ಸವವನ್ನು ನಗರದ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಶನಿವಾರ ಅದ್ದೂರಿಯಾಗಿ ಆಚರಿಸುವ ಮೂಲಕ ನೊಳಂಬ ಲಿಂಗಾಯತರು ತಮ್ಮ ಶಕ್ತಿ ಪ್ರದರ್ಶಿಸಿದರು.
ಪ್ರತಿ ವರ್ಷವೂ ಜಯಂತಿಯನ್ನು ಇತರೆಡೆಗಳಲ್ಲಿ ಆಚರಣೆ ಮಾಡಿಕೊಂಡು ಬಂದಿದ್ದು, ಈ ಬಾರಿ ಜಿಲ್ಲೆಯಲ್ಲಿ ಸಮಾವೇಶ ನಡೆಸಿ ಒಗ್ಗಟ್ಟು ತೋರ್ಪಡಿಸಿದರು. ರಾಜ್ಯದ ವಿವಿಧೆಡೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಸಮುದಾಯದ ಜನರು ಬಂದಿದ್ದರು.
ಜಯಂತ್ಯುತ್ಸವದ ಅಂಗವಾಗಿ ಕೃಷಿ ಹಾಗೂ ಕೈಗಾರಿಕಾ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವಸ್ತುಪ್ರದರ್ಶನದಲ್ಲಿ ನೂತನ ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿಕೊಡಲಾಯಿತು. ಪುಸ್ತಕಗಳ ಪ್ರದರ್ಶನ, ಮಾರಾಟವೂ ಇತ್ತು.
ಎರಡು ದಿನ ನಡೆಯುವ ಮಹೋತ್ಸವಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ‘ಅಲ್ಲಮಪ್ರಭು, ಅಕ್ಕಮಹಾದೇವಿ ಅವರ ಸಾಲಿನಲ್ಲಿ ಗುರು ಸಿದ್ಧರಾಮೇಶ್ವರರು ನಿಲ್ಲುತ್ತಾರೆ. ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾಗಿದ್ದು, ಜನರ ನೀರಿನ ದಾಹ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಯಡಿಯೂರಪ್ಪ ಸ್ಮರಿಸಿದರು.
ಕೃಷಿ ಗೋಷ್ಠಿ, ಸಿದ್ಧರಾಮ ಸಾಹಿತ್ಯ ಗೋಷ್ಠಿ, ಅಭಿನಂದನಾ ಕಾರ್ಯಕ್ರಮ ನೆರವೇರಿದವು. ಸಂಶೋಧಕ ಪ್ರೊ.ಬಿ.ರಾಜಶೇಖರಪ್ಪ ಅವರಿಗೆ ‘ಸಿದ್ಧರಾಮ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ನಾಗೇಶ್, ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ ಸೇರಿದಂತೆ ವಿವಿಧ ಮಠಾಧೀಶರು, ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಭಾನುವಾರ ಮಹಿಳಾ ಗೋಷ್ಠಿ, ‘ನೊಳಂಬ ಶ್ರೀ’ ಪ್ರಶಸ್ತಿ ಪ್ರದಾನ, ಸಮಾರೋಪ ಸಮಾರಂಭದ ಮೂಲಕ ಸಿದ್ಧರಾಮೇಶ್ವರ ಜಯಂತಿಗೆ ತೆರೆ ಬೀಳಲಿದೆ.
‘ರೈತರ ಹೆಸರಿನಲ್ಲಿ ಜಮೀನಿರಲಿ’
‘ಕೈಗಾರಿಕೆ ಸೇರಿದಂತೆ ಹಲವಾರು ಯೋಜನೆಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ರೈತರಿಂದ ಜಮೀನು ಪಡೆದುಕೊಂಡರೂ ಖಾತಾ ರೈತರ ಹೆಸರಿನಲ್ಲೇ ಇರುವಂತೆ ಕಾನೂನು ರೂಪಿಸಬೇಕು’ ಎಂದು ಚಿತ್ರದುರ್ಗದ ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು. ಜಮೀನಿನಲ್ಲಿ ಬೆಳೆಯುತ್ತಿದ್ದ ಬೆಳೆಯ ಆಧಾರದಲ್ಲಿ ಪ್ರತಿ ತಿಂಗಳೂ ಹಣ ನೀಡುವಂತಾಗಬೇಕು. ವಿದೇಶಗಳಲ್ಲಿ ಈಗಾಗಲೇ ಈ ರೀತಿಯಲ್ಲಿ ಭೂಮಿಯ ಬಳಕೆ ಪ್ರಾರಂಭವಾಗಿದೆ. ರಾಜ್ಯದಲ್ಲೂ ಇಂತಹ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.