ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಜಿಡಿಪಿ ಕುಸಿತಕ್ಕೆ ಕಾರಣ

Last Updated 1 ಸೆಪ್ಟೆಂಬರ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ರದ್ದತಿ, ದೋಷಪೂರಿತ ಜಿಎಸ್‌ಟಿ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡಕಸುಬಿ ಸಚಿವರು ಕೂಡಾ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮುಂದೆ ತಪ್ಪೊಪ್ಪಿಕೊಳ್ಳಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೊರೊನಾ ನಿಗ್ರಹಿಸಲು ಲಾಕ್ ಡೌನ್ ಅಗತ್ಯವಿತ್ತು ನಿಜ, ನಮ್ಮ ಪಕ್ಷ ಕೂಡಾ ಅದನ್ನು ಬೆಂಬಲಿಸಿತ್ತು. ಆದರೆ ಅವೈಜ್ಞಾನಿಕವಾಗಿ, ದಿನಕ್ಕೊಂದು ರೀತಿಯ ಅನಿಶ್ಚಿತ ನಿರ್ಧಾರಗಳ ಮೂಲಕ ಲಾಕ್ ಡೌನ್ ಜಾರಿಗೊಳಿಸಿದ್ದರಿಂದಾಗಿ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನ ಮಂತ್ರಿಯವರೇ ವಹಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ. ಆದರೆ ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ಮೇಲೆ ಹೇರುವ ಮೂಲಕ ಪ್ರಧಾನಿ ಅವರು ತನ್ನ ಜವಾಬ್ದಾರಿಯನ್ನು ನುಣುಚಿಕೊಳ್ಳುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ಕೇಂದ್ರದಲ್ಲಿ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ ಎನ್ನುವುದನ್ನು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್‌ಬಿಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರವರೆಗಿನ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ. ಆಗ ಕುರುಡು-ಕಿವುಡು ಆಗಿದ್ದ ಸರ್ಕಾರ ಈಗ ಕೊರೊನಾ ಮುಂದಿಟ್ಟು ರೋದಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

2015ರಲ್ಲಿ ಜಿಡಿಪಿ ಅಂದಾಜು ಮಾಡುವ ಮೂಲ ವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಲಾಯಿತು. ಆ ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ ಅಂಶಗಳನ್ನೇ ತಡೆಹಿಡಿಯಲಾಯಿತು. ಈಗ ಎಲ್ಲವನ್ನು ಕೊರೊನಾ ಲೆಕ್ಕಕ್ಕೆ ಬರೆದು ಕೈತೊಳೆದುಕೊಳ್ಳಲು ಪ್ರಧಾನಿ ನರೇಂದ್ರಮೋದಿಯವರು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT