ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಲಿತ ಜೀವನ ಸೂಚ್ಯಂಕ ರ‍್ಯಾಂಕಿಂಗ್‌: ರಾಜ್ಯದ ದತ್ತಾಂಶದಲ್ಲಿ ಭಾರಿ ವ್ಯತ್ಯಾಸ

ವಿವರಣೆ ಕೇಳಿದ ಕೇಂದ್ರ ವಸತಿ ಸಚಿವಾಲಯ
Last Updated 25 ಫೆಬ್ರವರಿ 2023, 22:00 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ನಗರ ಸ್ಥಳೀಯ ಸಂಸ್ಥೆಗಳ (ಬಿಬಿಎಂಪಿ ಸೇರಿ) ವ್ಯಾಪ್ತಿಯಲ್ಲಿ 2020ರಲ್ಲಿ 148 ಸ್ಮಶಾನಗಳು ಇದ್ದವು. 2022ರಲ್ಲಿ ಅವುಗಳ ಸಂಖ್ಯೆ 12ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ 2020ರಲ್ಲಿ 1,020 ಉದ್ಯಾನಗಳಿದ್ದವು. 2022ರಲ್ಲಿ ಅವುಗಳ ಸಂಖ್ಯೆ 700 ಆಗಿದೆ. ಶಿವಮೊ‌ಗ್ಗದಲ್ಲಿ 1,182 ಇದ್ದ ಬಸ್‌ಗಳ ಸಂಖ್ಯೆ 33ಕ್ಕೆ ಕುಸಿದಿದೆ!

ಎರಡೇ ವರ್ಷಗಳಲ್ಲಿ ಮೂಲ ಸೌಕರ್ಯ ವ್ಯವಸ್ಥೆಯಲ್ಲಿ ಇಷ್ಟೊಂದು ಬದಲಾವಣೆಯಾಯಿತೇ ಎಂದು ಅಚ್ಚರಿಯಾಯಿತೇ? ಕರ್ನಾಟಕ ಸರ್ಕಾರದ ಅಧಿಕಾರಿಗಳು 2020 ಹಾಗೂ 2022ರಲ್ಲಿ ಕೇಂದ್ರ ಸರ್ಕಾರಕ್ಕೆ ಒದಗಿಸಿರುವ ಮಾಹಿತಿಗಳ ಸ್ಯಾಂಪಲ್‌ ಇದು.

‘ಸುಲಲಿತ ಜೀವನ ಸೂಚ್ಯಂಕ’ ರ‍್ಯಾಂಕಿಂಗ್‌ಗಾಗಿ ಕರ್ನಾಟಕ ಸರ್ಕಾರವು ಸಲ್ಲಿಸಿರುವ ದಾಖಲೆಗಳನ್ನು ವಿಶ್ಲೇಷಿಸಿರುವ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು, ರಾಜ್ಯ ಒದಗಿಸಿರುವ ದತ್ತಾಂಶಗಳಲ್ಲಿನ ಎಡವಟ್ಟುಗಳನ್ನು ಬೊಟ್ಟು ಮಾಡಿ ತೋರಿಸಿದೆ. ರಾಜ್ಯದ ಆರು ನಗರಗಳು ಒದಗಿಸಿರುವ 38 ಪ್ರಮುಖ ದತ್ತಾಂಶಗಳಲ್ಲಿ ಎರಡೇ ವರ್ಷಗಳಲ್ಲಿ ಭಾರಿ ವ್ಯತ್ಯಾಸ ಆಗಿದೆ. ಈ ವ್ಯತ್ಯಾಸಕ್ಕೆ ಕಾರಣ ಏನು ಎಂದು ಸಚಿವಾಲಯ ಪ್ರಶ್ನಿಸಿದೆ. ಈ ಸಂಬಂಧ ಸಚಿವಾಲಯದ ಜಂಟಿ ಕಾರ್ಯದರ್ಶಿಯೂ
ಆಗಿರುವ ಸ್ಮಾರ್ಟ್‌ ಸಿಟಿ ಮಿಷನ್‌ ನಿರ್ದೇಶಕ ಕುನಾಲ್‌ ಕುಮಾರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.

ನಗರಗಳ ದತ್ತಾಂಶ ಸಂಗ್ರಹಿಸಲು ಸಚಿವಾಲಯವು ಸಮಗ್ರ ದತ್ತಾಂಶ ಪೋರ್ಟಲ್‌ ಅನ್ನು 2022ರ ಜೂನ್‌ನಲ್ಲಿ ಅಭಿವೃದ್ದಿಪಡಿಸಿದೆ. ನಗರ ಫಲಿತಾಂಶ ಚೌಕಟ್ಟಿನಡಿ (ಯುಒಎಫ್‌) ಸಂಗ್ರಹಿಸುವ ದತ್ತಾಂಶವು ಸುಲಲಿತ ಜೀವನ ಸೂಚ್ಯಂಕದ ರ‍್ಯಾಂಕಿಂಗ್‌ ನೀಡಲು ನೆರವಾಗುತ್ತದೆ. ಉತ್ತಮ ಗುಣಮಟ್ಟದ ಜೀವನ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಗರೀಕರಣದ ಸವಾಲುಗಳ ಕುರಿತು ಮೌಲ್ಯಮಾಪನ ನಡೆಸಿ ರ್‍ಯಾಂಕಿಂಗ್‌ ನೀಡಲಾಗುತ್ತದೆ. ಉತ್ತಮ ಸಾಧನೆ ಮಾಡಿದ ನಗರಗಳಲ್ಲಿ ಹೂಡಿಕೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ.

ನಗರದಲ್ಲಿ ನಗರ ಫಲಿತಾಂಶ ಚೌಕಟ್ಟಿನ ಉಪಕ್ರಮಗಳ ಮೇಲ್ವಿಚಾರಣೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸಚಿವಾಲಯವು ಎಲ್ಲ ರಾಜ್ಯಗಳಿಗೆ 2022ರ ಜೂನ್‌ನಲ್ಲಿ ನಿರ್ದೇಶನ ನೀಡಿತ್ತು. ಕರ್ನಾಟಕ ರಾಜ್ಯದ ಎಂಟು ನಗರಗಳು ಕೇಂದ್ರಕ್ಕೆ ದತ್ತಾಂಶ ಕಳುಹಿಸಿವೆ. ಈ ದತ್ತಾಂಶಗಳನ್ನು ಸಚಿವಾಲಯದ ತಂಡವು ವಿಶ್ಲೇಷಣೆಗೆ ಒಳಪಡಿಸಿದೆ. 2020ಕ್ಕೆ ಹೋಲಿಸಿದರೆ ಆರು ನಗರಗಳ ಪ್ರಮುಖ ದತ್ತಾಂಶಗಳಲ್ಲಿ ಭಾರಿ ವ್ಯತ್ಯಾಸ ಆಗಿದೆ. ದತ್ತಾಂಶ ಒದಗಿಸುವ ವೇಳೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿರುವುದು ರ‍್ಯಾಂಕಿಂಗ್‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜತೆಗೆ, ನಗರದ ಸುಲಲಿತ ವ್ಯವಹಾರ ಹಾಗೂ ನಾಗರಿಕರ ಗ್ರಹಿಕೆ ಮೇಲೂ ಪರಿಣಾಮ ಉಂಟು ಮಾಡ ಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.

ಸೂಕ್ತ ದಾಖಲೆಗಳನ್ನು ಒದಗಿಸಿ ಈ ದತ್ತಾಂಶಗಳನ್ನು ಬದಲಿಸಲು ಅವಕಾಶ ಇದೆ. ಇದನ್ನು ಫೆಬ್ರುವರಿ 28ರೊಳಗೆ ಒದಗಿಸಬೇಕು. ಮುಖ್ಯ ಕಾರ್ಯದರ್ಶಿಯವರೇ ಮಧ್ಯಪ್ರವೇಶಿಸಿ ಸಂಬಂಧಿಸಿದ ನಗರ ಪಾಲಿಕೆಗಳ ಆಯುಕ್ತರಿಗೆ ಈ ಸಂಬಂಧ ನಿರ್ದೇಶನ ನೀಡಬೇಕು. ಇದರಿಂದ ನಗರಗಳ ರ‍್ಯಾಂಕಿಂಗ್‌ನಲ್ಲಿ ಸುಧಾರಣೆ ಮಾಡಿಕೊಳ್ಳಲು ಅವಕಾಶ ಇದೆ ಎಂದೂ ಅವರು ತಿಳಿಸಿದ್ದಾರೆ.

ಕೆಲವು ಎಡವಟ್ಟುಗಳು: ಬೆಳಗಾವಿಯಲ್ಲಿ ನಗರ ದತ್ತಾಂಶ ನೀತಿ ರೂಪಿಸಲಾಗಿದೆ ಎಂದು ಸರ್ಕಾರ 2020ರಲ್ಲಿ ತಿಳಿಸಿತ್ತು. ನೀತಿ ರೂಪಿಸಿಲ್ಲ ಎಂದು 2022ರಲ್ಲಿ ಸರ್ಕಾರ ಹೇಳಿಕೊಂಡಿದೆ. ಕರ್ನಾಟಕದ ದತ್ತಾಂಶದಲ್ಲಿನ ಲೋಪವನ್ನು ಪತ್ತೆ ಹಚ್ಚಿರುವ ಸಚಿವಾಲಯವು, ದತ್ತಾಂಶ ನೀತಿಗೆ ಅನುಮೋದನೆ ನೀಡಲಾಗಿದೆ ಎಂದು ಟಿಪ್ಪಣಿಯಲ್ಲಿ ಬರೆದಿದೆ. ಬೆಂಗಳೂರಿನಲ್ಲಿ 35,11,328 ಮನೆಗಳು ಎಲ್‌ಪಿಜಿ/ಪಿಎನ್‌ಜಿ ಸಂಪರ್ಕಗಳನ್ನು ಹೊಂದಿದೆ ಎಂದು ಕರ್ನಾಟಕ ಸರ್ಕಾರ 2020ರಲ್ಲಿ ತಿಳಿಸಿತ್ತು. ಎರಡೇ ವರ್ಷಗಳಲ್ಲಿ ಅವುಗಳ ಸಂಖ್ಯೆ ಸೊನ್ನೆಗೆ ಇಳಿದಿದೆ. ಬೆಂಗಳೂರಿನಲ್ಲಿ 2020ರಲ್ಲಿ 20,43,792 ಆಸ್ತಿಗಳು ಇದ್ದರೆ, 2022ರಲ್ಲಿ ಅವುಗಳ ಸಂಖ್ಯೆ 1,31,63,000 ಕ್ಕೆ ಜಿಗಿದಿದೆ. ಬೆಂಗಳೂರಿನಲ್ಲಿ 2,537 ಕಿ.ಮೀ ಇದ್ದ ರಸ್ತೆ ಜಾಲ ಎರಡೇ ವರ್ಷಗಳಲ್ಲಿ 13,873 ಕಿ.ಮೀಗೆ ಏರಿದೆ. ಇವುಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ಈ ಅಂಕಿ ಅಂಶಗಳಲ್ಲಿ ಹೊಂದಾಣಿಕೆಯೇ ಆಗುತ್ತಿಲ್ಲ ಎಂದು ಕೇಂದ್ರ ವಸತಿ ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT