ಗುರುವಾರ , ಫೆಬ್ರವರಿ 2, 2023
26 °C
ಕಾಂಗ್ರೆಸ್‌– ಬಿಜೆಪಿ ವಾಕ್ಸಮರ l ಸಚಿವರ ಸಮರ್ಥನೆ

ಸೋಮಣ್ಣ– ರೌಡಿ ನಾಗ ಭೇಟಿ: ಕಾಂಗ್ರೆಸ್‌– ಬಿಜೆಪಿ ವಾಕ್ಸಮರ, ಸಚಿವರ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರನ್ನು ವಿಲ್ಸನ್‌ಗಾರ್ಡನ್‌ ನಾಗ ಎಂಬ ರೌಡಿ ಭೇಟಿ ಮಾಡಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಮತ್ತೆ ವಾಕ್ಸಮರಕ್ಕೆ ಕಾರಣವಾಗಿದೆ.

‘ಕುಸ್ತಿ ಆಡಲು ಬಿಜೆಪಿಯವರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ’ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಸಚಿವರಾದ ಸೋಮಣ್ಣ ಮತ್ತು ಡಾ.ಸಿ.ಎನ್‌.ಅಶ್ವತ್ಥನಾರಾಯಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಮತ್ತೊಬ್ಬ ರೌಡಿ ಸೈಲೆಂಟ್‌ ಸುನೀಲ್‌ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್‌, ಶಾಸಕ ಉದಯ್ ಗರುಡಾಚಾರ್ ಭಾಗವಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ವಿಲ್ಸನ್‌ಗಾರ್ಡನ್‌ ನಾಗ ಬುಧವಾರ ಸೋಮಣ್ಣ ಅವರನ್ನು ಭೇಟಿ ಮಾಡಿದ್ದು ಕಾಂಗ್ರೆಸ್‌– ಬಿಜೆಪಿ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.

ಸುದ್ದಿಗಾರರ ಜತೆ ಮಾತನಾಡಿದ ಸೋಮಣ್ಣ , ‘ಶಾಸಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಮನೆಗೆ ಸಾವಿರಾರು ಜನರು ಬರುತ್ತಾರೆ. ಸಾವಿರಾರು ಜನ ಹೋಗುತ್ತಾರೆ. ಬಂದ ವರಲ್ಲಿ ನಾಗ ಯಾರು, ತಿಮ್ಮ ಯಾರು, ಬೊಮ್ಮ ಯಾರು ಎಂಬುದು ಹೇಗೆ ಗೊತ್ತಾಗುತ್ತದೆ. ನಾಗ ಯಾರು ಎಂಬುದು ಗೊತ್ತಿಲ್ಲ. ಅವನ ಮುಖಪರಿಚಯವೂ ಇಲ್ಲ. ಯಾರೇ ನನ್ನ ಬಳಿ ಬಂದರೂ ಒಂದೆರಡು ನಿಮಿಷಗಳ ಕಾಲ ಮಾತನಾಡಿರಬಹುದು. ರೌಡಿಗಳನ್ನು ಬೆಳೆಸಿ ಜೀವನ ಮಾಡಿದವನಲ್ಲ. ನನ್ನ ಜೀವನ ತೆರೆದ ಪುಸ್ತಕ’ ಎಂದು ಹೇಳಿದರು.

‘75 ವರ್ಷದವರನ್ನು 25 ವರ್ಷ ದವರಿಗೆ ಹೋಲಿಕೆ ಮಾಡಬೇಡಿ. ಜೀವನೋಪಾಯಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ಸೇವೆ ಮತ್ತು ಅವಕಾಶ ಎಂದು ಸಾರ್ವಜನಿಕ ಜೀವನದಲ್ಲಿದ್ದೇನೆ’ ಎಂದರು.

ಕಾಂಗ್ರೆಸ್‌ ರೌಡಿಗಳ ಪಕ್ಷ: ‘ಕಾಂಗ್ರೆಸ್‌ ಪಕ್ಷ ಎಂದರೆ ಗೂಂಡಾಗಳ, ರೌಡಿಗಳ ಪಕ್ಷ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರ ಹಿನ್ನೆಲೆ ನೋಡಿದರೆ ಗೊತ್ತಾಗುತ್ತದೆ’ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

‘ಬಿಜೆಪಿಗೆ ರೌಡಿಗಳ ಅಗತ್ಯವಿಲ್ಲ. ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಜನರ ಆಶೀರ್ವಾದ ಬಿಜೆಪಿಯ ಮೇಲಿದೆ. ರೌಡಿಗಳ ಅವಶ್ಯ ಕತೆ ಇದ್ದರೆ ಅದು ಕಾಂಗ್ರೆಸ್‌ಗೆ ಮಾತ್ರ. ರೌಡಿಗಳಿಗೆ ಮತ್ತು ಅಂತಹ ಚಟುವಟಿಕೆಗಳನ್ನು ನಡೆಸುವವರಿಗೆ ನಮ್ಮ ಪಕ್ಷದಲ್ಲಿ ಮಾನ್ಯತೆ ಇಲ್ಲ. ಕಾಂಗ್ರೆಸ್‌ಗೆ ಹೇಳಿಕೊಳ್ಳಲು ಯಾವುದೇ ವಿಚಾರ ಇಲ್ಲದಿರುವ ಕಾರಣ ಇಂತಹ ವಿಷಯ ಗಳನ್ನು ಪ್ರಸ್ತಾಪಿಸುತ್ತಿದೆ ಎಂದರು.

ರೌಡಿಗಳಿಗೆ ಬಿಜೆಪಿ ಮಣೆ: ಡಿಕೆಶಿ

ಕಲಬುರಗಿ: ‘ಬಿಜೆಪಿಯ ಕಾರ್ಯಕರ್ತರು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಕಾರ್ಯಕರ್ತರ ಕೊರತೆ ನೀಗಿಸಿಕೊಳ್ಳಲು ಬಿಜೆಪಿಯವರು ರೌಡಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

‘ಬಿಜೆಪಿಯ ನೈಜ ಸಂಸ್ಕೃತಿ ಈಗ ಹೊರ ಬರುತ್ತಿದೆ. ತಮ್ಮಲ್ಲಿ ಇರುವ ಹೆಗ್ಗಣ ಬಿಟ್ಟು, ಬೇರೆಯವರತ್ತ ಬೆರಳು ಮಾಡುತ್ತಿದೆ. ಕಾಂಗ್ರೆಸ್ ಬಲಿಷ್ಠವಾಗಿ ಅಧಿಕಾರಕ್ಕೆ ಬರುತ್ತದೆ ಎಂಬ ಆತಂಕ ಬಿಜೆಪಿಯಲ್ಲಿದೆ. ಅದಕ್ಕೆ ನಮಗೆ ಬರುವ ಮತಗಳನ್ನು ಕಡಿತಗೊಳಿಸಲು ಮುಂದಾಗಿದೆ’ ಎಂದರು.

‘ಕಾಂಗ್ರೆಸ್‌ ಸೇರುವವರಿಗೆ ಮುಕ್ತ ಮತ್ತು ಬೇಷರತ್ ಆಹ್ವಾನವಿದೆ’  ಎಂದು ಕೋರಿದರು.

‘ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಬಿರುಕಿಲ್ಲ. ಬಿಜೆಪಿಯ ಸದಾನಂದಗೌಡ, ಜಗದೀಶ ಶೆಟ್ಟರ್, ಬಸನಗೌಡ ಪಾಟೀಲ ಯತ್ನಾಳ, ವಿಜಯೇಂದ್ರ ಅವರು ತಮ್ಮ ನಡುವಿನ ಬಿರುಕು ಮುಚ್ಚಿಕೊಳ್ಳಲಿ’ ಎಂದರು.

‘ಗಡಿ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಹಳ್ಳಿಗಳು ನಮ್ಮವು, ಅ‌ವರ ಹಳ್ಳಿಗಳು ಅವರವು’ ಎಂದರು.

****

ಪಕ್ಷಕ್ಕೆ ಯಾವುದೇ ರೌಡಿಗಳನ್ನು ಸೇರ್ಪಡೆ ಮಾಡುವುದಿಲ್ಲ. ಯಾವುದೇ ಅವಕಾಶಗಳನ್ನು ಕೊಡುವುದಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಪ್ರಶ್ನೆಯೇ ಇಲ್ಲ

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು