ಶುಕ್ರವಾರ, ಸೆಪ್ಟೆಂಬರ್ 17, 2021
23 °C
ವಿದ್ಯಾರ್ಥಿನಿಯರ ಮೇಲುಗೈ; ಗ್ರಾಮೀಣ ಅಭ್ಯರ್ಥಿಗಳ ಉತ್ತಮ ಸಾಧನೆ

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: ಶೇ 51.28ರಷ್ಟು ಉತ್ತೀರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ 51.28ರಷ್ಟು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದು, ಗ್ರಾಮೀಣ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಗೊಂಡಿದ್ದಾರೆ.

‘ಕಳೆದ ವರ್ಷದ ಪೂರಕ ಪರೀಕ್ಷೆಯಲ್ಲಿ ಶೇ 42.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಶೇ 8.81ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ. ಒಟ್ಟು 2,13,955 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 1,09,719 ಅಭ್ಯರ್ಥಿಗಳು ಉತ್ತೀಣರಾಗಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

1,35,202 ವಿದ್ಯಾರ್ಥಿಗಳಲ್ಲಿ 65,652 ವಿದ್ಯಾರ್ಥಿಗಳು (ಶೇ 48.56) ಉತ್ತೀರ್ಣರಾಗಿದ್ದರೆ, 78,753 ವಿದ್ಯಾರ್ಥಿನಿಯರಲ್ಲಿ 44,067 ವಿದ್ಯಾರ್ಥಿನಿಯರು (ಶೇ 55.96) ತೇರ್ಗಡೆ ಹೊಂದಿದ್ದಾರೆ.

ನಗರ ಪ್ರದೇಶದ 1,05,207 ಅಭ್ಯರ್ಥಿಗಳಲ್ಲಿ 50,764 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ (ಶೇ 48.25), ಗ್ರಾಮೀಣ ಪ್ರದೇಶದ 1,08, 748 ಅಭ್ಯರ್ಥಿಗಳಲ್ಲಿ 58, 955 ಅಭ್ಯರ್ಥಿಗಳು (ಶೇ 54.21) ಉತ್ತಿರ್ಣರಾಗಿದ್ದಾರೆ.

ಅ. 7ರಿಂದ 13ರವರೆಗೆ ನಾಲ್ಕು ಕಂದಾಯ ವಿಭಾಗಗಳ 14 ಶೈಕ್ಷಣಿಕ ಜಿಲ್ಲೆಗಳ 84 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 13, 834 ಶಿಕ್ಷಕರು ಪಾಲ್ಗೊಂಡಿದ್ದರು ಎಂದು ಪರೀಕ್ಷಾ ಪ್ರಕ್ರಿಯೆಯ ಕುರಿತು ಅವರು ವಿವರಿಸಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಶೇ 50.19, ಅನುದಾನಿತ ಶಾಲೆಗಳಿಗೆ ಶೇ 53.13 ಮತ್ತು ಅನುದಾನರಹಿತ ಶಾಲೆಗಳಿಗೆ ಶೇ 50.87 ಫಲಿತಾಂಶ ಲಭ್ಯವಾಗಿದೆ. ಮಾಧ್ಯಮವಾರು ಫಲಿತಾಂಶದಲ್ಲಿ ಕನ್ನಡ– ಶೇ 50.79, ಇಂಗ್ಲಿಷ್- ಶೇ 49.25, ಉರ್ದು- ಶೇ 64.88, ಮರಾಠಿ- ಶೇ 61.84, ತೆಲುಗು- ಶೇ 58.1, ತಮಿಳು- ಶೇ 25.45, ಹಿಂದಿ- ಶೇ 44.71 ಫಲಿತಾಂಶ ಲಭ್ಯವಾಗಿದೆ ಎಂದೂ ತಿಳಿಸಿದ್ದಾರೆ.

ಫಲಿತಾಂಶವನ್ನು http://kseeb.kar.nic.in ಮತ್ತು http://karresults.nic.in ವೆಬ್‌ಸೈಟ್‌ ಗಳಲ್ಲಿ ನೋಡಬಹುದು. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶಗಳನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರವೇ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆನ್‌ಲೈನ್‌ ನಲ್ಲಿ ಅವಕಾಶ ಕಲ್ಪಿಸಲಾಗಿದೆ. http://kseeb.kar.nic.in ಜಾಲತಾಣದಲ್ಲಿ ಈ ಕುರಿತ ಸುತ್ತೋಲೆ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ವಿವರ ನೀಡಲಾಗಿದೆ. ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಅ. 17ರಿಂದ 21ರವರೆಗೆ, ಮರು ಎಣಿಕೆಗಾಗಿ ಅ. 20 ರಿಂದ 28 ರವರೆಗೆ ಮತ್ತು ಮರುಮೌಲ್ಯಮಾಪನಕ್ಕಾಗಿ ಅ. 20ರಿಂದ 29ರವರೆಗೆ ಅವಕಾಶವಿದೆ ಎಂದೂ ಸುರೇಶ್ ಕುಮಾರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು