ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿ, ಮುಂಗಟ್ಟು 24X7 ತೆರೆಯಲು ಅನುಮತಿ

Last Updated 2 ಜನವರಿ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ದಿನದ 24X7 ತೆರೆಯಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ಷರತ್ತುಗಳೇನು?: ಅಂಗಡಿ, ಮಳಿಗೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರಿಗೂ ಸರದಿಯಲ್ಲಿ ವಾರಕ್ಕೊಂದು ರಜೆ ನೀಡಬೇಕು. ಪ್ರತಿ ಕಾರ್ಮಿಕರ ವಿವರವನ್ನು ಅಂಗಡಿ ಅಥವಾ ಮಳಿಗೆಯಲ್ಲಿ ಎಲ್ಲರಿಗೂ ಕಾಣುವಂಥ ಸೂಕ್ತ ಜಾಗದಲ್ಲಿ ಪ್ರದರ್ಶಿಸಬೇಕು. ಅಲ್ಲದೆ, ಪ್ರತಿದಿನ ರಜೆಯಲ್ಲಿರುವ ನೌಕರನ ಮಾಹಿತಿಯನ್ನೂ ಪ್ರದರ್ಶಿಸಬೇಕು.

ಅಲ್ಲದೆ, ವೇತನ ಕಾಯ್ದೆ ಅನ್ವಯ ಕಾರ್ಮಿಕರ ಸಂಬಳವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು. ಕಾರ್ಮಿಕರಿಗೆ ನಿತ್ಯ ಕೆಲಸದ ಅವಧಿ 8 ಗಂಟೆಯಂತೆ ವಾರಕ್ಕೆ 48 ಗಂಟೆ ಮಾತ್ರ ಇರಬೇಕು. ಹೆಚ್ಚುವರಿ ಕೆಲಸದ ಅವಧಿ ದಿನಕ್ಕೆ 10 ಗಂಟೆ ಮೀರಬಾರದು. ಸತತ ಮೂರು ತಿಂಗಳಲ್ಲಿ ಒಟ್ಟು ಹೆಚ್ಚುವರಿ ಕೆಲಸ ಅವಧಿ 50 ಗಂಟೆಯನ್ನು ದಾಟಬಾರದು. ರಜೆಯ ದಿನ ಕೆಲಸ ಮಾಡಿಸಿದರೆ ಅಥವಾ ಅದನ್ನು ಹೆಚ್ಚುವರಿ ಅವಧಿ ಎಂದು ಪರಿಗಣಿಸದೆ ದುಡಿಸಿದರೆ ಉದ್ಯೋಗದಾತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ರಾತ್ರಿ 8 ಗಂಟೆಯ ಬಳಿಕ ಮಹಿಳಾ ಕಾರ್ಮಿಕರನ್ನು ದುಡಿಸಲು ಅವಕಾಶ ಇಲ್ಲ. ಆದರೆ, ಮಹಿಳಾ ಕಾರ್ಮಿಕರಿಂದ ಲಿಖಿತ ಒಪ್ಪಿಗೆ ಪಡೆದು ಮತ್ತು ಎಲ್ಲ ಸೌಲಭ್ಯಗಳನ್ನು ಒದಗಿಸಿ ನೇಮಿಸಿಕೊಳ್ಳಬಹುದು. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆಯ ವ್ಯಾಪ್ತಿಯಲ್ಲಿರುವ ಎಲ್ಲ ಅಂಗಡಿ, ಮುಂಗಟ್ಟು, ಹೋಟೆಲುಗಳು 24 ಗಂಟೆಯೂ ತೆರೆದಿಡಬಹುದೆಂಬ ಸರ್ಕಾರ ಆದೇಶ ಸ್ವಾಗತಾರ್ಹ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕ್ಕಲ್‌ ಎಂ. ಸುಂದರ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT