ಶುಕ್ರವಾರ, ಅಕ್ಟೋಬರ್ 7, 2022
28 °C
ನಾಲ್ಕು ತಲೆಮಾರುಗಳಿಂದ ಮುಂದುವರಿದ ಭಾವೈಕ್ಯ, ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ

ಇಲ್ಲಿದೆ ಹಿಂದೂಗಳೇ ಕಟ್ಟಿಸಿದ ದರ್ಗಾ

ಸಂತೋಷ ಈ. ಚಿನಗುಡಿ/ ಇಮಮ್‌ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಹರ್ಲಾಪುರ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಚಿಕ್ಕ ಗ್ರಾಮ ಹರ್ಲಾಪುರ. ಆದರೆ, ಧರ್ಮ ಸೌಹಾರ್ದದಲ್ಲಿ ಈ ಜನರ ಮನಸ್ಸು ಬಹಳ ದೊಡ್ಡದು. ಈ ಊರಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ. ಹಾಗಾಗಿ, ಹಿಂದೂಗಳೇ ಇಲ್ಲಿ ಫಕೀರಸ್ವಾಮಿ ದರ್ಗಾ ಕಟ್ಟಿಸಿ, ಮೊಹರಂ ಆಚರಿಸುತ್ತಿದ್ದಾರೆ.

‘ಪ್ರಜಾವಾಣಿ’ ತಂಡ ಹರ್ಲಾಪುರಕ್ಕೆ ಭೇಟಿ ನೀಡಿದಾಗ ಹಲವು ವಿಶೇಷಗಳು ಕಂಡವು.

ಇಲ್ಲಿ ಪ್ರತಿ ವರ್ಷ ವೈಭವದಿಂದ ಮೊಹರಂ ಆಚರಿಸಲಾಗುತ್ತದೆ. ಪಂಜಾಗಳನ್ನು ಪ್ರತಿಷ್ಠಾಪನೆ ಮಾಡುವುದು, ಪೂಜೆ, ಡೋಲಿಗಳ ನಿರ್ಮಾಣ ಹಾಗೂ ಅವುಗಳನ್ನು ಮೆರವಣಿಗೆ ಮಾಡಿ ಹೊಳೆಗೆ ಸೇರಿಸುವವರೆಗೆ ಮುಸ್ಲಿಂ ಧರ್ಮದ ಎಲ್ಲ ಆಚರಣೆಗಳನ್ನೂ ಇಲ್ಲಿ ಹಿಂದೂಗಳೇ ಮಾಡುತ್ತಾರೆ. ಈ ಬಾರಿಯೂ ಎರಡುವಾರ ಹಿಂದಿನಿಂದ ಸಿದ್ಧತೆ ನಡೆಸಿದ್ದಾರೆ.

ಬಹುಪಾಲು ಜನ ಮನೆಗಳಿಗೆ ಸುಣ್ಣ– ಬಣ್ಣ ಬಳಿದು, ಹೊಸ ಬಟ್ಟೆ ಖರೀದಿಸಿದ್ದಾರೆ. ಸಂತ ರಾಜು ಗಾಂಜಿ ಮಾಸ್ತರ್‌ ಅವರ ಮಾರ್ಗದರ್ಶನದಲ್ಲಿ ಯುವಜನರು ಲೇಜಿಮ್‌, ಕೋಲಾಟ ತಾಲೀಮು ನಡೆಸಿದ್ದಾರೆ. ಯುವಕ ಪುಟ್ಟಣಗೌಡ ಪಾಟೀಲ ಅವರ ಮಧುರ ಧ್ವನಿಯಲ್ಲಿ ರಿವಾಯತ್‌ ಪದಗಳನ್ನು ಕೇಳುವುದೇ ಸೊಗಸು. ಪ್ರತಿ ದಿನ ರಾತ್ರಿ ಇಲ್ಲಿ ಕುಣಿದು, ಹಾಡುಗಾರಿಕೆ ನಡೆಸಿದ್ದಾರೆ. ಹಬ್ಬದ ದಿನ ವರ್ಣರಂಜಿತ ಉಡುಗೆಯಲ್ಲಿ, ಬಣ್ಣಬಣ್ಣದ ಹೂಗುಚ್ಚಗಳನ್ನು ಹಿಡಿದು ಊರಿನಲ್ಲಿ ಮೆರವಣಿಗೆ ಮುಂದೆ ಕುಣಿಯುವುದೇ ಒಂದು ಸಡಗರ.

ಹಿರಿಯರಿಗೆ ಗೊತ್ತಿರುವ ಹಾಗೆ ನಾಲ್ಕು ತಲೆಮಾರುಗಳಿಂದ ಇಲ್ಲಿ ಮೊಹರಂ, ಉರುಸ್‌ ಆಚರಿಸಲಾಗುತ್ತಿದೆ. ದಶಕದ ಹಿಂದೆ ಗುರು– ಹಿರಿಯರು, ಯುವಜನರು ದೇಣಿಗೆ ಸಂಗ್ರಹಿಸಿ, ₹ 8 ಲಕ್ಷದಲ್ಲಿ ಫಕೀರಸ್ವಾಮಿ ದರ್ಗಾ ನಿರ್ಮಿಸಿದ್ದಾರೆ.

ಈ ದರ್ಗಾದಲ್ಲಿ ಹಿಂದೂ, ಬೌದ್ಧ, ಕ್ರೈಸ್ತ, ವೀರಶೈವ– ಲಿಂಗಾಯತ ಧರ್ಮಗಳ ದೇವರು, ಮಹಾತ್ಮರ ಫೋಟೊಗಳನ್ನೂ ಪೂಜಿಸಲಾಗುತ್ತಿದೆ.

ಮೌಖಿಕ ಇತಿಹಾಸ: ಹಿಂದೆ ಮುಸ್ಲಿಂ ಸಮುದಾಯದ ಫಕೀರರೊಬ್ಬರು ಈ ಊರಿನಲ್ಲಿ ನಾಲ್ಕು ದೇವರ ಮೂರ್ತಿಗಳನ್ನು ಪೂಜೆ ಮಾಡುತ್ತಿದ್ದರು. ಅವರು ನಿಧನರಾದ ನಂತರ ರಾಮಚಂದ್ರ ನಿಂಬಾಳಕರ ಎನ್ನುವವರ ಹೊಲದಲ್ಲಿ ದಫನ್‌ ಮಾಡಲಾಯಿತು. ಅಲ್ಲಿಂದ ಹಿಡಿ ಮಣ್ಣು ತಂದು ಊರಿನ ಮುಖ್ಯಭಾಗದಲ್ಲಿ ಗೋರಿ ಕಟ್ಟಿದರು. 2012ರಲ್ಲಿ ಅದಕ್ಕೆ ಹೊಂದಿಕೊಂಡೇ ದರ್ಗಾ ತಲೆ ಎತ್ತಿದೆ. ಆದರೆ, ಫಕೀರ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ ಎನ್ನುತ್ತಾರೆ ಶಿವಪ್ಪ ಒಕ್ಕುಂದ ಮತ್ತು ಬಸನಗೌಡ ಪಾಟೀಲ.

‘ಫಕೀರ ಅವರು ಊರಿನ ಜನರಿಗೆ ಮಾರ್ಗದರ್ಶಿ ಆಗಿದ್ದರು. ಮುಸ್ಲಿಮರಿಗೆ ಫಕೀರ– ಹಿಂದೂಗಳಿಗೆ ಈಶ್ವರ ಎಂದು ಪರಿಗಣಿಸಿ ಅವರಿಗೆ ಫಕೀರೇಶ್ವರ ಎಂದು ಹಿರಿಯರು ಕರೆದಿದ್ದಾರೆ. ಊರಿನಿಂದ ಯಾರೇ ಹೊರಹೋಗುವಾಗ ಮತ್ತು ಮರಳುವಾಗ ಈ ದರ್ಗಾ ಮುಂದೆ ನಿಂತು ಕೈ ಮುಗಿಯುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದಾರೆ’ ಎನ್ನುವುದು ಬಸಪ್ಪ ಒಕ್ಕುಂದ, ರಾಜು ಗಾಂಜಿ ಅವರ ಮಾಹಿತಿ.

‘ದರ್ಗಾ ಪಕ್ಕದಲ್ಲೇ ದೊಡ್ಡ ಬೇವಿನಮರವಿದೆ. ಹಾವು ಕಚ್ಚಿದವರಿಗೆ ಈ ಬೇವಿನ ಮರದ ಎಲೆ ಹಾಗೂ ದರ್ಗಾದ ಪ್ರಸಾದ ಸೇರಿಸಿ ತಿನ್ನಿಸುತ್ತೇವೆ. ತಕ್ಷಣ ವಾಂತಿಯಾಗಿ, ಹಾವು ಕಚ್ಚಿದ ವ್ಯಕ್ತಿ ಪ್ರಾಣ ಉಳಿಯುತ್ತದೆ. ಹಲವು ವರ್ಷಗಳಿಂದ ಈ ನಂಬಿಕೆ ಮುಂದುವರಿಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಗೋವಿಂದ ಚುಳಕಿ, ರಾಮಚಂದ್ರ ನಿಂಬಾಳ್ಕರ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು