ಶುಕ್ರವಾರ, ಡಿಸೆಂಬರ್ 4, 2020
22 °C
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಜೊತೆ ಸುಧಾಕರ್‌ ವಿಡಿಯೊ ಸಂವಾದ

ಚಳಿಗಾಲ, ಹಬ್ಬಕ್ಕೆ ನಿರ್ಬಂಧ ಸಡಿಲಿಕೆ ಇಲ್ಲ: ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ನಿಯಂತ್ರಿಸುವ ಉದ್ದೇಶಕ್ಕಾಗಿ, ಬರಲಿರುವ ಚಳಿಗಾಲ ಮತ್ತು ಹಬ್ಬದ ದಿನಗಳಲ್ಲಿ ನಮ್ಮ ಕಾರ್ಯತಂತ್ರದಲ್ಲಿ ರಾಜಿ ಮಾಡಿಕೊಳ್ಳದೆ ಎಚ್ಚರಿಕೆಯಿಂದ ಮುಂದುವರಿಯಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಲಸಿಕೆ ವಿತರಣೆಗೆ ಮಾಡಿ ಕೊಂಡಿರುವ ಸಿದ್ಧತೆ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಜೊತೆ ವಿಡಿಯೊ ಸಂವಾದದಲ್ಲಿ ಮಾತನಾಡಿದ ಅವರು, ‘ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗುತ್ತಿದೆ. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿರುವ ಸೆರೋ ಸಮೀಕ್ಷೆಗಳಿಂದ ಕೂಡಾ ಅಳವಡಿಸಿ ಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ಸಿಕ್ಕಿದೆ’ ಎಂದರು.

‘ದಸರಾ ಆಚರಣೆ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ದೀಪಾವಳಿ ಸಂದರ್ಭದಲ್ಲಿಯೂ ನಿರ್ಬಂಧಗಳನ್ನು ಸಡಿಲಿಸುವುದಿಲ್ಲ. ರಾಜ್ಯದಲ್ಲಿರುವ ಕೇಂದ್ರದ ಕೆಲವು ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲು ಸೂಚಿಸಬೇಕು. ಆರ್‌ಟಿಪಿಸಿಆರ್ ಕಿಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಬೇಕು. ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಕೇಂದ್ರ ನೆರವು ನೀಡಬೇಕು’ ಎಂದೂ ಕೇಂದ್ರ ಸಚಿವರ ಬಳಿ ಸುಧಾಕರ್‌ ಮನವಿ ಮಾಡಿದರು.

ಕೇಂದ್ರದ ಮೆಚ್ಚುಗೆ: ‘ಕೋವಿಡ್ ನಿಯಂತ್ರಣ ವಿಷಯದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳು ಸಮಾಧಾನಕರವಾಗಿವೆ’ ಎಂದು ಹರ್ಷವರ್ಧನ್ ಮೆಚ್ಚುಗೆ ಸೂಚಿಸಿದರು.

ಗುಣಮುಖರ ಸಂಖ್ಯೆ 7.88 ಲಕ್ಷಕ್ಕೆ ಏರಿಕೆ: ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 5,827 ಮಂದಿ ಸೇರಿದಂತೆ ರಾಜ್ಯದಲ್ಲಿ 8,045 ಮಂದಿಗೆ ಕಾಯಿಲೆ ವಾಸಿಯಾಗಿದೆ. ಇದರಿಂದಾಗಿ ಗುಣಮುಖರ ಸಂಖ್ಯೆ 7.88 ಲಕ್ಷ ದಾಟಿದೆ.

ರಾಜ್ಯದಲ್ಲಿ ಸತತ 21 ದಿನಗಳಿಂದ ಗುಣಮುಖರ ಸಂಖ್ಯೆಯು ಹೊಸ ಕೋವಿಡ್‌ ಪ್ರಕರಣಗಳನ್ನು ಮೀರಿಸಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 35 ಸಾವಿರಕ್ಕೆ ಇಳಿಕೆಯಾಗಿದೆ. ಬುಧವಾರ 3,377 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 8.35 ಲಕ್ಷಕ್ಕೆ ಏರಿಕೆಯಾಗಿದೆ. 10 ದಿನಗಳ ಅವಧಿ ಯಲ್ಲಿ 32,956 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 3,295 ಮಂದಿ ಸೋಂಕಿತರಾಗಿದ್ದಾರೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂ ರಿನಲ್ಲಿ 16 ಮಂದಿ ಸೇರಿದಂತೆ ರಾಜ್ಯದಲ್ಲಿ 34 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 11,281ಕ್ಕೆ ತಲುಪಿದೆ. ಸೋಂಕಿತರಲ್ಲಿ ಸದ್ಯ 928 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದ ಜನರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಹೆಚ್ಚು

ರಾಜ್ಯದ ಜನರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಶೇ 16ರಷ್ಟು ಜನರಲ್ಲಿ ಕೋವಿಡ್‌ ಪ್ರತಿಕಾಯ ಇರುವುದು ಅಂಶ ‘ಸೆರೋ’ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ ಮತ್ತು ಪುಣೆಯಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ಸಮೀಕ್ಷೆ ಮಾಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಎಲ್ಲ 30 ಜಿಲ್ಲೆಗಳಲ್ಲೂ ಸಮೀಕ್ಷೆ ಮಾಡಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ನಗರದ ಎಂಟೂ ವಲಯಗಳಲ್ಲೂ ಸಮೀಕ್ಷೆ ನಡೆದಿದ್ದು, 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಿದ್ದು, 15,624 ಜನರ ಫಲಿತಾಂಶ ಬಂದಿದೆ. ಕಡಿಮೆ ಅಪಾಯ, ಮಧ್ಯಮ ಅಪಾಯ ಮತ್ತು ಹೆಚ್ಚು ಅಪಾಯದ ವರ್ಗ ಎಂದು ವರ್ಗೀಕರಿಸಿ ಪರೀಕ್ಷೆ ನಡೆಸಲಾಗಿದೆ. ಕೊರೊನಾ ವೈರಾಣು ದೇಹಕ್ಕೆ ಸೋಂಕಿದಾಗ ಪ್ರತಿರೋಧಕವಾಗಿ ಐಜಿಜಿ ಉತ್ಪತ್ತಿಯಾಗುತ್ತದೆ. ಐಜಿಜಿ ಹೊಂದಿದವರು ಮತ್ತು ಸಕ್ರಿಯ ಸೋಂಕಿತರನ್ನು ಪತ್ತೆ ಮಾಡುವ ಮೂಲಕ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಸುಧಾಕರ್‌ ಹೇಳಿದರು.

ಸಮೀಕ್ಷೆಗೆ ಒಳಪಟ್ಟ 15,624 ಜನರಲ್ಲಿ ಐಜಿಜಿ ಪ್ರತಿಕಾಯ ಇರುವವರ ಪ್ರಮಾಣ ಶೇ 16.4 ಮತ್ತು ಸಕ್ರಿಯ ಸೋಂಕಿತರ ಪ್ರಮಾಣ ಶೇ 12.7 ಇದೆ. ಐಜಿಜಿ ಇರುವ ಜನ ಸೋಂಕಿಗೆ ಒಳಗಾಗಿ ಗುಣಮುಖರಾದವರು. ಈ ಪ್ರಮಾಣ ದೆಹಲಿಯಲ್ಲಿ ಶೇ 29.1, ಮುಂಬೈ ಕೊಳೆಗೇರಿಗಳಲ್ಲದ ಪ್ರದೇಶಗಳಲ್ಲಿ ಶೇ 16 ಮತ್ತು ಕೊಳೆಗೇರಿಗಳಲ್ಲಿ ಶೇ 57, ಪುಣೆಯ 5 ಪ್ರದೇಶಗಳಲ್ಲಿ ಶೇ 36.1 ರಿಂದ ಶೇ 65.4, ಇಂದೋರ್‌ನಲ್ಲಿ ಶೇ 7.8, ಪಾಂಡಿಚೇರಿಯಲ್ಲಿ ಶೇ 22.7, ಚೆನ್ನೈನಲ್ಲಿ ಶೇ 32.3 ಇದೆ ಎಂದರು.

ಈ ಸಮೀಕ್ಷೆ 2020ರ ಸೆಪ್ಟೆಂಬರ್‌ 3ರಿಂದ 16ರವರೆಗೆ ನಡೆದಿತ್ತು. ಕೋವಿಡ್‌ ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ, ಬಹಳ ಕಡಿಮೆ ಇದೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ 0.05 ಇದೆ. ಮುಂಬೈಯಲ್ಲಿ ಶೇ 0.05–0.10, ಪುಣೆಯಲ್ಲಿ ಶೇ 0.08, ದೆಹಲಿಯಲ್ಲಿ ಶೇ 0.09, ಚೆನ್ನೈನಲ್ಲಿ ಶೇ 0.13 ಮರಣ ಪ್ರಮಾಣವಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು