ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಸಂಚಾರ ಉತ್ತೇಜನಕ್ಕೆ ಸಜ್ಜಾದ ‘ಸುಮ’

ನೆರೆಹೊರೆಯ ಪಯಣ– ನಡಿಗೆ, ಸೈಕಲ್‌ ಬಳಕೆಗೆ ಪ್ರೇರಣೆ * 9 ಸಂಸ್ಥೆಗಳ ಆಯ್ಕೆ
Last Updated 19 ಡಿಸೆಂಬರ್ 2020, 20:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನರು ನೆರೆಹೊರೆಯ ಸಂಚಾರಕ್ಕೆ ಸುಸ್ಥಿರ ಮಾದರಿ ಬಳಸುವುದನ್ನು ಉತ್ತೇಜಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಸುಸ್ಥಿರ ಸಂಚಾರ ಒಪ್ಪಂದ (ಸುಮ) ಕಾರ್ಯಕ್ರಮವನ್ನು ರೂಪಿಸಿದೆ. ಇದರ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಒಂಬತ್ತು ಸಾಮುದಾಯಿಕ ಸಂಸ್ಥೆಗಳನ್ನು ಆಯ್ಕೆ ಮಾಡಿದೆ.

‘ನಗರದ ಸಂಚಾರ ವ್ಯವಸ್ಥೆಗೆ ಹೊಸ ದಿಸೆ ನೀಡಬಲ್ಲ ಸುಮಾ ಕಾರ್ಯಕ್ರಮ ಅನುಷ್ಠಾನಕ್ಕೆ ಸಜ್ಜಾಗಿದೆ. 9 ಸಂಸ್ಥೆಗಳನ್ನು ಆಯ್ಕೆ ಮಾಡಿದ್ದೇವೆ. ಈ ಸಂಸ್ಥೆಗಳ ಜೊತೆ ಮುಖಾಮುಖಿ ಮಾತುಕತೆ ನಡೆಸಲಿದ್ದೇವೆ. ನೆರೆ ಹೊರೆಯ ಸಂಚಾರಕ್ಕೆ ಸೈಕಲ್‌ ಮತ್ತು ನಡಿಗೆ ಹಾಗೂ ಸಾರ್ವಜನಿಕ ಸಾರಿಗೆಯಂತಹ ಸುಸ್ಥಿರ ಮಾದರಿಗಳ ಬಳಕೆಗೆ ಈ ಸಂಸ್ಥೆಗಳ ಕಾರ್ಯಯೋಜನೆಗಳೇನು ಎಂಬುದನ್ನು ಪರಾಮರ್ಶಿಸಿ ಅವುಗಳ ಅನುಷ್ಠಾನಕ್ಕೆ ನೆರವು ಒದಗಿಸಲಿದ್ದೇವೆ. ಪ್ರತಿ ಸಂಸ್ಥೆಗೂ ಈ ಕಾರ್ಯಕ್ರಮ ಅನುಷ್ಠಾನಕ್ಕಾಗಿ ₹ 50 ಲಕ್ಷ ಪ್ರೋತ್ಸಾಹ ಧನ ನೀಡಲಿದ್ದೇವೆ’ ಎಂದು ಡಲ್ಟ್‌ ಆಯುಕ್ತರಾದ ವಿ.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚಿನ ಮಹಾ ನಗರಗಳಲ್ಲಿ ವಾಹನಗಳ ಓಡಾಟ ಕೇಂದ್ರಿತವಾಗಿ ಯೋಜನೆ ವಿನ್ಯಾಸಗೊಳಿಸಲಾಗುತ್ತದೆಯೇ ಹೊರತು, ಜನರ ಓಡಾಟಕ್ಕೆ ಅನುಗುಣವಾಗಿ ಅಲ್ಲ. ಸೈಕ್ಲಿಂಗ್‌ ಹಾಗೂ ನಡಿಗೆಯಂತಹ ಕ್ರಿಯಾಶೀಲ ಮಾದರಿಗಳ ಬಗ್ಗೆ ಚರ್ಚೆಗಳೇನೋ ನಡೆಯುತ್ತವೆ. ಆದರೆ, ಅದಕ್ಕೆ ಜನ ಎಷ್ಟು ಸಜ್ಜಾಗಿದ್ದಾರೆ ಎಂಬ ಬಗ್ಗೆಯಾಗಲೀ, ಸಂಚಾರದ ಈ ಮಾದರಿಗಳಿಗೆ ಅಗತ್ಯವಿರುವ ಮೂಲಸೌಕರ್ಯದ ಬಗ್ಗೆಯಾಗಲೀ ಚಿಂತನೆಗಳು ನಡೆಯುತ್ತಿಲ್ಲ. ಹಾಗಾಗಿ ಈ ಬಗ್ಗೆ ಆಸಕ್ತಿ ಹೊಂದಿರುವ ಸಾಮುದಾಯಿಕ ಸಂಸ್ಥೆಗಳನ್ನೇ ಆಯ್ಕೆ ಮಾಡಿ ಸುಸ್ಥಿರ ಸಾರಿಗೆ ಮಾದರಿಗಳನ್ನು ಅನುಷ್ಠಾನಕ್ಕಾಗಿ ಸುಮ ಯೋಜನೆ ರೂಪಿಸಲಾಗಿದೆ’ ಎಂದು ಡಲ್ಟ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘2013ರಲ್ಲಿ ನಗರದಲ್ಲಿ ಮೊದಲ ಬಾರಿಗೆ ಸೈಕಲ್‌ ದಿನ ಆಚರಣೆಯನ್ನು ಡಲ್ಟ್‌ ವತಿಯಿಂದ ಆರಂಭಿಸಲಾಯಿತು. ಅಲ್ಪ ದೂರದ ಪ್ರಯಾಣಗಳಿಗೆ ಸೈಕಲ್‌ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಇದು ಪರಿಣಾಮ ಬೀರಿದೆ. ಸುಮ ಕಾರ್ಯಕ್ರಮ ಇದರ ಸುಧಾರಿತ ರೂಪ. ನಿರ್ಧಾರ ತಳೆಯುವಂತಹ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳು ಹಾಗೂ ರಾಜಕೀಯ ನೇತಾರರು ಮೋಟಾರುರಹಿತ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮಾಡುವುದು ಹಾಗೂ ನಗರದ ಸಾರಿಗೆ ಸಮಸ್ಯೆ ಬಗೆಹರಿಸಲು ಈ ಮಾದರಿ ಪರಿಣಾಮಕಾರಿ ಆಗಲಿದೆ ಎಂದು ತೋರಿಸಿ ಕೊಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ’ ಎಂದು ಅವರು ವಿವರಿಸಿದರು.

‘ಮೋಟಾರುರಹಿತ ಹಾಗೂ ಸುಸ್ಥಿರ ಸಾರಿಗೆ ಬಳಕೆಯನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಆಸಕ್ತ ಸಂಸ್ಥೆಗಳಿಂದ ಡಲ್ಟ್‌ ಎರಡು ತಿಂಗಳ ಹಿಂದೆ ಅರ್ಜಿ ಆಹ್ವಾನಿಸಿತ್ತು. ಈ ಸಂಸ್ಥೆಗಳ ಅರ್ಹತೆ ಆಧಾರದಲ್ಲಿ 9 ಸಂಸ್ಥೆಗಳ ಹೆಸರನ್ನು ಅಂತಿಮಗೊಳಿಸಿದ್ದೇವೆ. ಇವುಗಳೆಲ್ಲವೂ ಒಂದೋ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು ಅಥವಾ ಸೈಕಲ್‌ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಸರ್ಕಾರೇತರ ಸಂಘಟನೆಗಳೇ ಆಗಿವೆ’ ಎಂದರು.

ಸುಮ ಅನುಷ್ಠಾನಕ್ಕೆ ಕಾರ್ಯಪಡೆ

ಸುಮ ಕಾರ್ಯಕ್ರಮದ ಅನುಷ್ಠಾನದ ಉಸ್ತುವಾರಿಗಾಗಿ ಡಲ್ಟ್‌ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಬೆಂಗಳೂರು ಕೊಯೆಲಿಯೇಷನ್‌ ಫಾರ್‌ ಓಪನ್‌ ಸ್ಟ್ರೀಟ್‌ (ಬಿಕಾಸ್‌), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ವರ್ಲ್ಡ್ ರಿಸೋರ್ಸಸ್‌ ಇನ್ಸ್ಟಿಟ್ಯೂಟ್‌ (ಡಬ್ಲ್ಯುಆರ್‌ಐ) ಸಂಸ್ಥೆಗಳ ಪ್ರತಿನಿಧಿಗಳು ಇದ್ದಾರೆ. ಇದರ ಜೊತೆಗೆ ಬಿಬಿಎಂಪಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಬಿಎಂಪಿ), ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರತಿನಿಧಿಗಳನ್ನೂ ಕಾರ್ಯಪಡೆಗೆ ಸೇರಿಸಿಕೊಳ್ಳಲು ಸಿದ್ಧತೆ ನಡೆದಿದೆ.

‘ಮೂರು ತಿಂಗಳು ಅಧ್ಯಯನ’

ಸುಮ ಕಾರ್ಯಕ್ರಮ ಅನುಷ್ಠಾನಕ್ಕೆ ಆಯ್ಕೆಯಾದ ಸಂಸ್ಥೆಗಳು ಮೂರು ತಿಂಗಳ ನಿರ್ದಿಷ್ಟ ಪ್ರದೇಶದ ಜನರು ಯಾವೆಲ್ಲ ಮಾದರಿಯ ಸಾರಿಗೆ ಬಳಸುತ್ತಿದ್ದಾರೆ. ಎಷ್ಟು ಮಂದಿ ಸುಸ್ಥಿರ ಮಾದರಿ ಅನುಸರಿಸಲು ಆಸಕ್ತರಾಗಿದ್ದಾರೆ. ಆ ಪ್ರದೇಶದಲ್ಲಿ ಮೋಟಾರುರಹಿತ ಸಾರಿಗೆ ಮೂಲಸೌಕರ್ಯಗಳು ಎಷ್ಟರಮಟ್ಟಿಗೆ ಇವೆ ಎಂಬ ಅಂಶಗಳ ಬಗ್ಗೆ ಸಮೀಕ್ಷೆ ನಡೆಸಿ ದತ್ತಾಂಶ ಕಲೆ ಹಾಕಲಿವೆ. ಇದರ ಆಧಾರದಲ್ಲಿ ಆಯಾ ಪ್ರದೇಶದ ಅಗತ್ಯಗಳಿಗೆ ಅನುಗುಣವಾಗಿ ಸುಸ್ಥಿರ ಸಾರಿಗೆ ವ್ಯವಸ್ಥೆ ಹೊಂದುವ ಬಗ್ಗೆ ಆ ಸಂಸ್ಥೆಗಳೇ ರೂಪರೇಷೆ ಸಿದ್ಧಪಡಿಸಲಿವೆ. ಇದಕ್ಕೆ ಅಗತ್ಯ ತಾಂತ್ರಿಕ ನೆರವನ್ನು ಡಲ್ಟ್‌ ಒದಗಿಸಲಿದೆ. ಜತೆಗೆ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಪ್ರತಿ ಸಂಸ್ಥೆಗೂ ₹ 50 ಲಕ್ಷ ನೀಡಲಿದೆ.

ಏನಿದು ನೆರೆಹೊರೆಯ ಸುಸ್ಥಿರ ಸಂಚಾರ?

ನಿರ್ದಿಷ್ಟ ಪ್ರದೇಶದಲ್ಲಿ ಜನಸಮುದಾಯದ ನೆರೆಹೊರೆಯ ಓಡಾಟದಶೇ 80 ರಷ್ಟು ನಡಿಗೆ ಹಾಗೂ ಸೈಕಲ್‌ಗಳ ಮೂಲಕವೇ ಆಗಬೇಕು. ಅಲ್ಲಿನ ಜನ ಹೊರಗಡೆಯ ಪ್ರದೇಶಗಳಿಗೆ ಪ್ರಯಾಣಿಸುವುದಾದರೆ ಅದರಲ್ಲಿ ಸರ್ಕಾರಿ ಸಾರಿಗೆ, ನಡಿಗೆ ಹಾಗೂ ಸೈಕಲ್‌ ಬಳಕೆ ಶೇ 60ರಷ್ಟಾದರೂ ಇರಬೇಕು. ಇದನ್ನು ನೆರೆಹೊರೆಯ ಸುಸ್ಥಿರ ಸಂಚಾರ ಎಂದು ಪರಿಗಣಿಸಲಾಗುತ್ತದೆ.

‘ಸುಮ’ ಅನುಷ್ಠಾನಕ್ಕೆ ಆಯ್ಕೆಯಾದ ಸಂಸ್ಥೆಗಳು

* ಐ ಕೇರ್‌ ಟ್ರಸ್ಟ್ ಆರ್‌.ಆರ್‌.ನಗರ

* ಎಸ್‌ಆರ್‌ಎಸ್‌ ಸಿಟಿಜನ್ಸ್‌ ಫೋರಮ್‌, ಎಚ್‌ಆರ್‌ಎಸ್‌ ಬಡಾವಣೆ

*ಮಲ್ಲೇಶ್ವರ ಸೋಷಿಯಲ್‌ ಸೆನ್ಸಿಂಗ್‌ ಲೋಕಲ್‌ ಫೌಂಡೇಷನ್‌, ಮಲ್ಲೇಶ್ವರ ಅರ್ಬನ್ ಲಿವಿಂಗ್‌ ಲ್ಯಾಬ್‌, ಮತ್ತು ಮಲ್ಲೇಶ್ವರ ಸ್ವಾಭಿಮಾನ ಇನಿಷಿಯೇಟಿವ್‌

*ಫರ್ನ್ಸ್‌ ಪ್ಯಾರಡೈಸ್‌ ಪ್ಲಾಟ್‌ ಓನರ್ಸ್‌ ಅಸೋಸಿಯೇಷನ್‌, ದೊಡ್ಡನೆಕ್ಕುಂದಿ

*ಸ್ವರ್‌ (ಎಸ್‌ಡಬ್ಲ್ಯುಎಆರ್‌)– ವಾಯ್ಸ್‌ ಫಾರ್‌ ಚೇಂಜ್‌, ಬೇಗೂರು

*ಚೇಂಜ್‌ ಮೇಕರ್ಸ್‌ ಆಫ್‌ ಕನಕಪುರ ರೋಡ್‌ ಮತ್ತು ಶೋಭಾ ಫಾರೆಸ್ಟ್‌ ವೀವ್‌ ಅಪಾರ್ಟ್‌ಮೆಂಟ್‌ ಓನರ್ಸ್‌ ಅಸೋಸಿಯೇಷನ್‌

*ವುಮೆನ್‌ ಆಫ್ ವಿಸ್ಡಂ ಟ್ರಸ್ಟ್‌, ಜೆ.ಪಿ.ನಗರ

*ಡಿಫೆನ್ಸ್‌ ಕಾಲೊನಿ ರೆಸಿಡೆನ್ಸಿ ಅಸೋಸಿಯೇಷನ್‌, ಇಂದಿರಾನಗರ

*ರೋಟರಿ ಆರ್‌ಎಂವಿ ವೆಲ್‌ಫೇರ್‌ ಫೌಂಡೇಷನ್‌, ರಾಜಮಹಲ್‌ ವಿಲಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT