ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರ ತ್ಯಜಿಸಿ ನಾಡಿಗೆ ಬಂದರೂ ತಪ್ಪದ ಪಾಡು: 5 ವರ್ಷ ಕಳೆದರೂ ಕೈ ಸೇರದ ಹಣ

ಮಾತು ತಪ್ಪಿದ ಸರ್ಕಾರ:
Last Updated 19 ಅಕ್ಟೋಬರ್ 2021, 19:59 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲರಂತೆ ನೆಮ್ಮದಿಯ ಜೀವನ ನಡೆಸಬೇಕೆಂಬ ಆಸೆಯಿಂದ ಅವರೆಲ್ಲಾ ಶಸ್ತ್ರಾಸ್ತ್ರ ತ್ಯಜಿಸಿದ್ದರು. ಸರ್ಕಾರದ ಕರೆಗೆ ಓಗೊಟ್ಟು ಕಾಡಿನಿಂದ ನಾಡಿಗೆ ಮರಳಿದ್ದರು. ಹಾಗೆ ಬಂದವರ ಕನಸುಗಳೆಲ್ಲಾ ಒಂದೊಂದಾಗಿಯೇ ಕಮರುತ್ತಿವೆ. ನ್ಯಾಯಾಲಯಕ್ಕೆ ಅಲೆದು ಅಲೆದು ಹೈರಾಣಾಗಿರುವ ಅವರಿಗೆ ಈಗ ದಾರಿಯೇ ಕಾಣದಾಗಿದೆ.

ನಕ್ಸಲ್‌ ಚಟುವಟಿಕೆಗಳನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಮರಳಿದ್ದಪರಶುರಾಮ್‌, ಕಾವೇರಿ, ಕನ್ಯಾಕುಮಾರಿ ಹಾಗೂ ಜ್ಞಾನದೇವ್‌ ಅವರು ಪಡುತ್ತಿರುವ ನಿತ್ಯದ ಬವಣೆ ಇದು.

ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಭೂಗತರಾಗಿ ನಕ್ಸಲ್‌ ಚಟುವಟಿಕೆ ನಡೆಸುತ್ತಿದ್ದ ಪರಶುರಾಮ್‌ ಹಾಗೂ ಕಾವೇರಿ 2016ರ ನವೆಂಬರ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗಿದ್ದರು.ಕನ್ಯಾಕುಮಾರಿ ಹಾಗೂ ಜ್ಞಾನದೇವ್‌ 2017ರ ಜೂನ್‌ನಲ್ಲಿ ಮುಖ್ಯವಾಹಿನಿಗೆ ಬಂದಿದ್ದರು.

‘ಸಮಾಜದಲ್ಲಿ ಗೌರವಯುತ ಬದುಕು ನಡೆಸಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಕಲ್ಪಿಸುವುದಾಗಿ ಸರ್ಕಾರ ಹೇಳಿತ್ತು. ನಮ್ಮ ಮೇಲಿನ ಎಲ್ಲಾ ಪ್ರಕರಣಗಳನ್ನು ಕೈಬಿಡುವ ಭರವಸೆಯನ್ನೂ ನೀಡಿತ್ತು. ಈವರೆಗೂ ಅದ್ಯಾವುದೂ ಈಡೇರಿಲ್ಲ. ಐದು ವರ್ಷ ಕಳೆದರೂ ಒಂದೇ ಒಂದು ಪ್ರಕರಣವನ್ನೂ ಕೈಬಿಟ್ಟಿಲ್ಲ. ನ್ಯಾಯಾಲಯಕ್ಕೆ ಅಲೆದು ಸಾಕಾಗಿ ಹೋಗಿದೆ’ ಎಂದು ಜ್ಞಾನದೇವ್‌ ಅಳಲು ತೋಡಿಕೊಂಡರು.

‘ಪುನರ್ವಸತಿ ಕಲ್ಪಿಸಿಕೊಡುವುದಾಗಿ ಹೇಳಿದ್ದ ಸರ್ಕಾರ ಅದನ್ನೂ ಮರೆತಿದೆ. ನನ್ನ ಪ‍ತ್ನಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾಳೆ. ಆಕೆಯ ವಿರುದ್ಧ ರಾಜ್ಯದಲ್ಲಿ 33, ಕೇರಳದ ವಿವಿಧ ಜಿಲ್ಲೆಗಳಲ್ಲಿ 30 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕಾಗಿ ವಕೀಲರನ್ನು ನೇಮಿಸಬೇಕು. ಅವರಿಗೆ ಸಾವಿರಾರು ರೂ‍ಪಾಯಿ ಪಾವತಿಸಬೇಕು. ಅದಕ್ಕಾಗಿಯೇ ಸಾಲ ಮಾಡಿದ್ದೇನೆ. ಅದನ್ನು ಹೇಗೆ ತೀರಿಸಲಿ ಎಂಬ ಚಿಂತೆ ಕಾಡುತ್ತಿದೆ’ ಎಂದು ಗದ್ಗದಿತರಾದರು.

‘ಮಗನ ಹೆಸರು ಗೆಲುವು. ನಾವು ಶರಣಾಗುವಾಗಆತನ ವಯಸ್ಸು ಆರು ತಿಂಗಳು. ಹೀಗಾಗಿ ಪತ್ನಿಯ ಜೊತೆ ಆತನನ್ನೂ ಜೈಲಿಗೆ ಕಳುಹಿಸಲಾಗಿತ್ತು. ಈಗ ಐದು ವರ್ಷ ಪೂರ್ಣಗೊಂಡಿದೆ. ಶಾಲೆಗೆ ಸೇರಿಸಬೇಕು ಮನೆಗೆ ಕಳಿಸಿಕೊಡಿ ಎಂದರೂ ಜೈಲು ಅಧಿಕಾರಿಗಳು ಒಪ್ಪುತ್ತಿಲ್ಲ. ಶರಣಾದವರಿಗೆ ತಲಾ ₹5 ಲಕ್ಷ ನೀಡುವುದಾಗಿ ಸರ್ಕಾರ ಹೇಳಿತ್ತು. ಆ ಪೈಕಿ ₹2.5 ಲಕ್ಷದ ಚೆಕ್‌ ಮಾತ್ರ ನೀಡಿದರು. ಆ ಮೊತ್ತ ವಕೀಲರಿಗೆ ಕೊಡುವುದಕ್ಕೇ ಸರಿಯಾಯಿತು. ಬಾಕಿ ಇದ್ದ ₹2.5 ಲಕ್ಷ ಈವರೆಗೂ ಕೈಸೇರಿಲ್ಲ. ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಪಡೆಯಬೇಕೆಂದರೆ ಕನಿಷ್ಠ ₹ 10 ಲಕ್ಷ ಬೇಕು. ಅಷ್ಟು ಹಣ ಹೊಂದಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಕಾಡಿನಲ್ಲಿದ್ದಾಗಲೇ ಚೆನ್ನಾಗಿತ್ತು’

‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಶರಣಾಗಿದ್ದ ನಕ್ಸಲರ ಪುನರ್ವಸತಿಗಾಗಿ ಸಮಿತಿಯೊಂದನ್ನು ರಚಿಸಿದ್ದರು. ಗೌರಿ ಲಂಕೇಶ್‌ ಅವರ ಹತ್ಯೆ ಹಾಗೂಎ.ಕೆ.ಸುಬ್ಬಯ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರ ನಿಧನದ ಬಳಿಕ ಆ ಸಮಿತಿ ನಿಷ್ಕ್ರಿಯವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ನಕ್ಸಲರ ಪುನರ್ವಸತಿಗಾಗಿ ₹20 ಲಕ್ಷ ಬಿಡುಗಡೆ ಮಾಡಿದ್ದರು. ಆ ಹಣ ಇದುವರೆಗೂ ನಮ್ಮ ಕೈಸೇರಿಲ್ಲ’ ಎಂದು ಪರಶುರಾಮ್‌ ಹೇಳಿದರು. ‘ನಮ್ಮ ಬದುಕು ಇಷ್ಟು ಶೋಚನೀಯ ಸ್ಥಿತಿಗೆ ತಲುಪುತ್ತದೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ದೊರೆಸ್ವಾಮಿ ಅವರು ನಮ್ಮೊಂದಿಗೆ ಮಾತನಾಡಿ ಮನವೊಲಿಸಿದ ಬಳಿಕ ಶರಣಾಗತಿಗೆ ಒಪ್ಪಿದ್ದೆವು. ಕಾಡಿನಲ್ಲಿದ್ದಾಗಲೇ ನಮ್ಮ ಬದುಕು ಎಷ್ಟೋ ಚೆನ್ನಾಗಿತ್ತು. ನಗರಕ್ಕೆ ಬಂದು ಸಾಲಗಾರರಾಗಿ ಬಿಟ್ಟಿದ್ದೇವೆ. ಮೂರು ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ಹಣ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT