ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 4 ವರ್ಷ ವಾಸವಿದ್ದ ಶಂಕಿತ ಉಗ್ರ: ಓಕಳಿಪುರದಲ್ಲಿ ಸೆರೆಯಾದ ತಾಲಿಬ್

ಕೆಲಸ ನೀಡಿದ್ದ ಚಾಲಕನ ವಿಚಾರಣೆ
Last Updated 9 ಜೂನ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಹಿಜ್ಬುಲ್‌–ಮುಜಾಹಿದ್ದೀನ್‌ (ಎಚ್‌ಎಂ) ಉಗ್ರ ಸಂಘಟನೆಯ ಕಮಾಂಡರ್ ತಾಲಿಬ್ ಹುಸೇನ್ ಅಲಿಯಾಸ್ ತಾರಿಕ್ (36) ನಗರದಲ್ಲಿ ನಾಲ್ಕು ವರ್ಷಗಳಿಂದ ವಾಸವಿದ್ದನೆಂಬ ಸಂಗತಿ ಗುಪ್ತದಳ ಹಾಗೂ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಜಮ್ಮುವಿನಲ್ಲಿ ಸೈನಿಕರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರಕ್ಕೆ ಕಾರಣವಾಗಿದ್ದ ‘ಎ ದರ್ಜೆ’ ಉಗ್ರ ಎನ್ನಲಾದ ತಾಲಿಬ್‌ನನ್ನು ಇತ್ತೀಚೆಗಷ್ಟೇ ನಗರದ ಓಕಳಿಪುರದ ಮಸೀದಿ ಪಕ್ಕದ ಮನೆಯಲ್ಲಿ ಬಂಧಿಸಲಾಗಿದ್ದು, ಆತನ ಪೂರ್ವಾಪರ ತಿಳಿಯಲು ತನಿಖೆ ಮುಂದು ವರಿದಿದೆ.

‘2020ರಿಂದ ಓಕಳಿಪುರದ ಮಸೀದಿ ಪಕ್ಕದ ಮನೆಯಲ್ಲಿ ಪತ್ನಿ ಹಾಗೂ ಮೂವರುಮಕ್ಕಳ ಜೊತೆ ತಾಲಿಬ್ ನೆಲೆಸಿದ್ದನೆಂಬ ಮಾಹಿತಿ ಮಾತ್ರ ಆರಂಭದಲ್ಲಿ ಗೊತ್ತಾಗಿತ್ತು. ಸ್ಥಳೀಯರು ಹಾಗೂ ಸ್ನೇಹಿತರ ವಿಚಾರಣೆ ನಡೆಸಿದಾಗ, ತಾಲಿಬ್‌ ನಾಲ್ಕು ವರ್ಷಗಳಿಂದ ನಗರದಲ್ಲಿ ವಾಸವಿದ್ದನೆಂಬುದು ಖಾತ್ರಿಯಾಗಿದೆ’ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳಿವೆ.

‘ಬೆಂಗಳೂರಿನಲ್ಲೇ ಕುಳಿತು ಜಮ್ಮು–ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದ. ವೇಷ ಬದಲಿಸಿಕೊಂಡು ತನ್ನೂರಿಗೆ ಆಗಾಗ ಹೋಗಿ ಬರುತ್ತಿದ್ದ. ನಾಲ್ಕು ವರ್ಷಗಳ ಅವಧಿಯಲ್ಲಿ 10 ಬಾರಿ ಹೋಗಿ ಬಂದಿರುವ ಮಾಹಿತಿ ಇದೆ. ಯಾವೆಲ್ಲ ಅಪರಾಧದಲ್ಲಿ ತೊಡಗಿದ್ದನೆಂಬುದು ಇನ್ನಷ್ಟೇ ತಿಳಿಯಬೇಕಿದೆ’ ಎಂದೂ ತಿಳಿಸಿವೆ.

ಯಶವಂತಪುರ ಮಾರುಕಟ್ಟೆಯಲ್ಲಿ ಕೆಲಸ: ‘ಜಮ್ಮು–ಕಾಶ್ಮೀರದಿಂದ ದೆಹಲಿ ಮಾರ್ಗವಾಗಿ 2018ರಲ್ಲಿ ಬೆಂಗಳೂರಿಗೆ ಬಂದಿದ್ದ ತಾಲಿಬ್, ಯಶವಂತಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದ. ಅಲ್ಲಿಂದ ಮಾರುಕಟ್ಟೆಗೆ ಹೋಗಿ, ಕೆಲದಿನ ರಸ್ತೆ ಹಾಗೂ ಮಳಿಗೆ ಬಳಿಯೇ ಮಲಗಿದ್ದ’ ಎಂದು ಮೂಲಗಳು ತಿಳಿಸಿವೆ.

‘ಮಾರುಕಟ್ಟೆಯಲ್ಲಿ ಗೂಡ್ಸ್ ವಾಹನದ ಚಾಲಕರೊಬ್ಬರ ಪರಿಚಯವಾಗಿತ್ತು. ತಾನೊಬ್ಬ ಅನಾಥನೆಂದು ತಾಲಿಬ್ ಹೇಳಿದ್ದ. ಗೂಡ್ಸ್ ವಾಹನದಲ್ಲಿ ಕೂಲಿ ಕೆಲಸ ಮಾಡಲೆಂದು ಆ ಚಾಲಕ ನೇಮಿಸಿಕೊಂಡಿದ್ದ. ಅಂದಿನಿಂದ ನಾಲ್ಕು ವರ್ಷ ಆತನ ಜೊತೆಯಲ್ಲೇ ತಾಲಿಬ್ ಸುತ್ತಾಡುತ್ತಿದ್ದ’ ಎಂದೂ ಹೇಳಿವೆ.

ವಾಹನ ಚಾಲನೆಯಲ್ಲೂ ಪರಿಣತಿ: ‘ಮಾರುಕಟ್ಟೆ ಸರಕು ಹಾಗೂ ಇತರೆ ವಸ್ತುಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಲೋಡಿಂಗ್, ಅನ್‌–ಲೋಡಿಂಗ್ ಕೆಲಸವನ್ನು ತಾಲಿಬ್ ಮಾಡುತ್ತಿದ್ದ. ಮಾರುಕಟ್ಟೆಯಲ್ಲಿ ಅಥವಾ ವಾಹನದಲ್ಲೇ ರಾತ್ರಿ ಮಲಗುತ್ತಿದ್ದ. ಚಾಲಕನಿಗೆ ಹುಷಾರಿಲ್ಲದ ವೇಳೆಯಲ್ಲಿ ಚಾಲನೆ ಸಹ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತನಗೆ ಚಾಲನೆ ಬರುವುದಿಲ್ಲವೆಂದು ತಾಲಿಬ್ ಆರಂಭದಲ್ಲಿ ಹೇಳಿದ್ದ. ಆತನ ಚಾಲನೆ ಶೈಲಿ ನೋಡಿ ಚಕಿತನಾಗಿದ್ದ ಚಾಲಕ, ‘ಚಾಲನೆ ಹೇಗೆ ಕಲಿತೆ’ ಎಂದು ಪ್ರಶ್ನಿಸಿದ್ದರು. ತಮ್ಮನ್ನು ನೋಡಿ ಕಲಿತಿರುವುದಾಗಿ ಹೇಳಿ ಸುಮ್ಮನಾಗಿಸಿದ್ದ. ಆದರೆ, ತಾಲಿಬ್ ವಿಶೇಷ ತರಬೇತಿ ಪಡೆದ ವ್ಯಕ್ತಿ ಎಂಬ ಅನುಮಾನ ಅಂದೇ ಚಾಲಕನಿಗೆ ಬಂದಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ತಾಲಿಬ್ ಬಂಧನವಾಗುತ್ತಿದ್ದಂತೆ ಚಾಲಕನನ್ನು ವಿಚಾರಣೆ ನಡೆಸಿದಾಗ ಈ ವಿಷಯ ಗೊತ್ತಾಗಿದೆ’ ಎಂದಿವೆ.

ಪತ್ನಿಗೆ ಮತದಾರರ ಗುರುತಿನ ಚೀಟಿ
‘2020ರಲ್ಲಿ ಜಮ್ಮುವಿಗೆ ಹೋಗಿದ್ದ ತಾಲಿಬ್, ಪತ್ನಿ ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದ. ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಲಾರಂಭಿಸಿದ್ದ. ತನ್ನೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೂಲಕ ಮಸೀದಿ ಮುಖ್ಯಸ್ಥ ಅನ್ವರ್ ಪರಿಚಯ ಮಾಡಿಕೊಂಡಿದ್ದ. ಮಸೀದಿ ಪಕ್ಕ ಮನೆ ಪಡೆದು, ಕುಟುಂಬದ ಜೊತೆ ವಾಸವಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪತ್ನಿ ಹೆಸರಿನಲ್ಲೇ ನಕಲಿ ದಾಖಲೆ ಸೃಷ್ಟಿಸಿದ್ದ ತಾಲಿಬ್, ಆಧಾರ್ ಹಾಗೂ ಚುನಾವಣಾ ಗುರುತಿನ ಚೀಟಿ ಮಾಡಿಸಿದ್ದ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಗುರುತಿನ ಚೀಟಿ ಆತನ ಮನೆಯಲ್ಲಿ ಸಿಕ್ಕಿದೆ. ಅದನ್ನು ಮಾಡಿಸಿಕೊಟ್ಟವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದೂ ತಿಳಿಸಿವೆ.

ಜಮ್ಮು–ಕಾಶ್ಮೀರಕ್ಕೆ ವಿಶೇಷ ತಂಡ
‘ನಾಲ್ಕು ವರ್ಷ ಬೆಂಗಳೂರಿನಲ್ಲಿ ವಾಸವಿದ್ದ ತಾಲಿಬ್, ಹಲವರನ್ನು ಭೇಟಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತಂಡ ಜಮ್ಮು–ಕಾಶ್ಮೀರಕ್ಕೆ ಹೋಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಮ್ಮು–ಕಾಶ್ಮೀರ ಪೊಲೀಸರ ತಂಡವೂ ಬೆಂಗಳೂರಿಗೆ ಬಂದು ತನಿಖೆ ಮಾಡುತ್ತಿದೆ. ಅವರ ಜೊತೆಯಲ್ಲೇ ರಾಜ್ಯದ ಗುಪ್ತದಳ, ಐಎಸ್‌ಡಿ, ಎಟಿಎಸ್ ತಂಡಗಳು ಮಾಹಿತಿ ಹಂಚಿಕೊಳ್ಳುತ್ತಿವೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT