ಶನಿವಾರ, ಸೆಪ್ಟೆಂಬರ್ 18, 2021
31 °C
ಅರಮನೆ ಮೈದಾನದಲ್ಲಿ ಭಾನುವಾರ ಮಹಾ ಸಮಾವೇಶ

ಯಡಿಯೂರಪ್ಪ ಬೆಂಬಲಿಸಿ ಶಕ್ತಿ ಪ್ರದರ್ಶನಕ್ಕೆ ಮಠಾಧೀಶರು ಸಜ್ಜು; ನಾಳೆ ಮಹಾ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ಹೇಳಿದ ಬಳಿಕವೂ ಅವರ ಬೆನ್ನಿಗೇ ನಿಲ್ಲಲು ಮುಂದಾಗಿರುವ ಮಠಾಧೀಶರು, ನಗರದ ಅರಮನೆ ಮೈದಾನದಲ್ಲಿ ಭಾನುವಾರ ಬಲ ಪ್ರದರ್ಶನ ನಡೆಸಲು ಸಜ್ಜಾಗಿದ್ದಾರೆ.

ಕಳೆದ ಒಂದು ವಾರದಿಂದ ಮಠಾಧೀಶರು ನಾಡಿನ ವಿವಿಧ ಭಾಗಗಳಲ್ಲಿ ಯಡಿಯೂರಪ್ಪ ಅವರ ಪರ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿ
ದ್ದರು. ಸಾಕಷ್ಟು ಸಂಖ್ಯೆಯ ಮಠಾಧೀಶರು ನಗರದಲ್ಲೇ ಬೀಡು ಬಿಟ್ಟಿದ್ದಾರೆ.

ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಇತರ ಸ್ವಾಮೀಜಿಗಳು ಶುಕ್ರವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಠಾಧೀಶರ ಸಮಾವೇಶದ ಮಾಹಿತಿ ನೀಡಿದರು. ‘ಸಮಾವೇಶದಲ್ಲಿ ನಾಡಿನ ಎಲ್ಲ ಸಮುದಾಯಗಳ ಸ್ವಾಮೀಜಿಗಳು ಭಾಗವಹಿಸಲಿದ್ದು, ಸುಮಾರು 1,000 ಮಠಾಧೀಶರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಬೆಳಿಗ್ಗೆಯಿಂದಲೇ ಸಮಾವೇಶ ನಡೆಯಲಿದೆ. ಸದ್ಯಕ್ಕೆ ಯಾವುದೇ ಕಾರ್ಯಸೂಚಿ ರೂಪಿಸಿಲ್ಲ. ಎಲ್ಲ ಮಠಾಧೀಶರು ಸೇರಿಯೇ ಚರ್ಚಿಸುತ್ತೇವೆ. ಇದರಲ್ಲಿ ಯಡಿಯೂರಪ್ಪ ಅವರು ರಾಜೀನಾಮೆ ವಿಚಾರ ಬರಬಹುದು, ಬರದೇ ಇರಬಹುದು’ ಎಂದು ಸೂಚ್ಯವಾಗಿ ತಿಳಿಸಿದರು.

‘ಈ ಸಮಾವೇಶಕ್ಕೆ ಸಾರ್ವಜನಿಕರು ಹಾಗೂ ರಾಜಕಾರಣಿಗಳಿಗೆ ಪ್ರವೇಶ ಇರುವುದಿಲ್ಲ‘ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

‘ಯಡಿಯೂರಪ್ಪ ಅವರನ್ನು ಮುಂದುವರಿಸಬೇಕೇ ಬಿಡಬೇಕೆ ಎಂಬುದು ಪಕ್ಷಕ್ಕೆ ಬಿಟ್ಟ ತೀರ್ಮಾನ. ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸುತ್ತೇವೆ. ಅಲ್ಲಿ ಏನು ಚರ್ಚೆ ಮಾಡುತ್ತೇವೆ ಎಂಬುದನ್ನು ಈಗ ಹೇಳಲಾಗದು. ಸಮಾವೇಶದಲ್ಲಿ ಆ ವಿಚಾರ ಪ್ರಸ್ತಾಪಿಸಲಾಗುತ್ತ
ದೆಯೋ ಇಲ್ಲವೋ ಎಂದು ಹಿರಿಯ ಮಠಾಧೀಶರು ತೀರ್ಮಾನಿಸುತ್ತಾರೆ ಎಂದರು.

‘ಸಮಾಜದಲ್ಲಿ ಸಂಕಷ್ಟ ಎದುರಾದಾಗ, ಅನ್ಯಾಯ ಎದುರಾದಾಗ ಸನ್ಯಾಸಿಗಳು ಮಧ್ಯಪ್ರವೇಶಿಸುವುದು ಹೊಸತಲ್ಲ. ವೇದಗಳು, ರಾಮಾಯಣ, ಮಹಾಭಾರತ, ದಾಸ, ಶರಣರ ಕಾಲದಲ್ಲೂ ನಡೆದಿತ್ತು. ಈಗಲೂ ನಡೆದಿದೆ. ತಪ್ಪೇನು ಇಲ್ಲ’ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು.

ಯಾವುದೇ ಒಬ್ಬ ಗುರು ಯಾವುದೇ ಭಕ್ತನ ಮನೆಗೂ ಹೋದರೂ ಗೌರವಿಸಿ ಕಳಿಸಲಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿ ಮನೆಗೆ ಹೋದಾಗಲೂ ಲಕೋಟೆ ನೀಡಿದ್ದರು. ಆದರೆ, ಅದನ್ನು ಮಾಧ್ಯಮಗಳಲ್ಲಿ ವಿಕೃತವಾಗಿ ಬಿಂಬಿಸಿರುವುದು ಸರಿಯಲ್ಲ ಎಂದು ಸ್ವಾಮೀಜಿ ಹೇಳಿದರು.

ಸಚಿವರ ಹೆಸರೂ ಪರಿಶೀಲನೆಯಲ್ಲಿ - ಅಶೋಕ: ಉತ್ತಮವಾಗಿ ಕೆಲಸ ಮಾಡಿರುವ ಸಚಿವರ ಹೆಸರುಗಳು ಮುಖ್ಯಮಂತ್ರಿ ಆಯ್ಕೆಗಾಗಿ ಪಕ್ಷದ ವರಿಷ್ಠರ ಪರಿಶೀಲನೆಯಲ್ಲಿವೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿನ ಮಾಹಿತಿ ಗಳನ್ನು ಪಡೆಯಲು ವರಿಷ್ಠರು ಅವರದ್ದೇ ಆದ ಮೂಲಗಳನ್ನು ಹೊಂದಿದ್ದಾರೆ. ಕೆಲವು ಶಾಸಕರ ಹೆಸರುಗಳು ಅವರ ಮುಂದಿವೆ’ ಎಂದು ಅವರು ತಿಳಿಸಿದ್ದಾರೆ.

ಸಚಿವರ ಹೆಸರೂ ಪರಿಶೀಲನೆಯಲ್ಲಿ:ಅಶೋಕ

ಉತ್ತಮವಾಗಿ ಕೆಲಸ ಮಾಡಿರುವ ಸಚಿವರ ಹೆಸರುಗಳು ಮುಖ್ಯಮಂತ್ರಿ ಆಯ್ಕೆಗಾಗಿ ಪಕ್ಷದ ವರಿಷ್ಠರ ಪರಿಶೀಲನೆಯಲ್ಲಿವೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿನ ಮಾಹಿತಿಗಳನ್ನು ಪಡೆಯಲು ವರಿಷ್ಠರು ಅವರದ್ದೇ ಆದ ಮೂಲಗಳನ್ನು ಹೊಂದಿದ್ದಾರೆ. ಕೆಲವು ಶಾಸಕರ ಹೆಸರುಗಳು ಅವರ ಮುಂದಿವೆ' ಎಂದರು.

‘ನೀವು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇದ್ದೀರೆ’ ಎಂಬ ಪ್ರಶ್ನೆಗೆ, ’ಯಾರಾದರೂ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೋದರೆ, ಅದು ನಮ್ಮ ಪಕ್ಷದಲ್ಲಿ ನಡೆಯುವುದಿಲ್ಲ. ಅಷ್ಟಕ್ಕೂ ಈಗ ಮುಖ್ಯಮಂತ್ರಿ ಕುರ್ಚಿ ಖಾಲಿಯೂ ಇಲ್ಲ’ ಎಂದು ಅವರು ಹೇಳಿದರು.

ಬಿಎಸ್‌ವೈ ಕೈಬಿಟ್ಟರೆ ಬಿಜೆಪಿಗೆ ಕಷ್ಟ ಅಮಿತ್‌ ಶಾಗೆ ಸ್ವಾಮೀಜಿ ಪತ್ರ:

ಶರಣಬಸವಶಿವಲಿಂಗ ಶಿವಯೋಗಿ ಸ್ವಾಮೀಜಿಯವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯಿಂದ ಕೈಬಿಡಬಾರದು. ಒಂದು ವೇಳೆ ಬಿಟ್ಟರೆ, ಭವಿಷ್ಯದಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಕಷ್ಟವಾಗಬಹುದು ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಬಹುಮತ ಗಳಿಸುವಲ್ಲಿ ಎಡವಿತ್ತು. ಆಗ ಯಡಿಯೂರಪ್ಪ ಅವರು ಕಷ್ಟಪಟ್ಟು ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾದರು. ಜನರರಿಗೆ ಅವರ ಮೇಲೆ ಅಪಾರ ವಿಶ್ವಾಸವಿದೆ. ಆದ ಕಾರಣ ಅವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ನಡ್ಡಾ ಭೇಟಿ ಮಾಡಿದ ವಿಜಯೇಂದ್ರ

ನವದೆಹಲಿ: ಮುಖ್ಯಮಂತ್ರಿ ಬದಲಾವಣೆ ನಿಶ್ಚಿತವಾಗಿರುವುದರಿಂದ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ನಡ್ಡಾ ಅವರನ್ನು ಶುಕ್ರವಾರ ‌ಭೇಟಿ ಮಾಡಿ ಚರ್ಚಿಸಿದ್ದಾರೆ.

ವಿವಿಧ ಮಠಾಧೀಶರು ಯಡಿಯೂರಪ್ಪ ಅವರ‌ ಬೆಂಬಲಕ್ಕೆ ನಿಂತಿರುವುದು, ವೀರಶೈವ-ಲಿಂಗಾಯತ ಸಮುದಾಯದ ಬೆಂಬಲವನ್ನು ನಿರ್ಲಕ್ಷಿಸದಂತೆ‌ ಅವರು ಮನವರಿಕೆ ಮಾಡಿದರು ಎಂದು ತಿಳಿದುಬಂದಿದೆ.

ಆದರೆ, ಮಠಾಧೀಶರ ಹಸ್ತಕ್ಷೇಪಕ್ಕೆ ಅನಗತ್ಯ ಅವಕಾಶ‌ ನೀಡಿರುವುದು ಸರಿಯಲ್ಲ ಎಂದೇ ನಡ್ಡಾ ಅವರು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

‘ಒಂದೊಮ್ಮೆ ನನ್ನ ರಾಜೀನಾಮೆ ಪಡೆದಲ್ಲಿ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡಬೇಕು' ಎಂಬ ಯಡಿಯೂರಪ್ಪ ಅವರ ಬೇಡಿಕೆಯ ಕುರಿತೂ ಚರ್ಚೆ ನಡೆಸಲಾಯಿತು. ಪಕ್ಷ ಸಂಘಟನೆ ಹಾಗೂ ಸರ್ಕಾರದಲ್ಲಿ ಸ್ಥಾನ ನೀಡುವ‌ ಭರವಸೆಯನ್ನೂ ನೀಡಲಾಯಿತು’ ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು