ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟದ ಶಿಕ್ಷಣಕ್ಕಾಗಿ ಟ್ಯಾಬ್‌ ವಿತರಣೆ’

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ ಸಾವಿರ ವಿದ್ಯಾರ್ಥಿಗಳಿಗೆ ಸೌಲಭ್ಯ
Last Updated 24 ಡಿಸೆಂಬರ್ 2020, 20:43 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ನಡುವೆ ಡಿಜಿಟಲ್‌ ಸೌಕರ್ಯದ ಅಂತರ ಕುಗ್ಗಿಸಲು ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್‌ ವಿತರಿಸಲಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಪ್ರೌಢಶಾಲೆಗಳ ಸಾವಿರ ವಿದ್ಯಾರ್ಥಿಗಳಿಗೆ ಗುರುವಾರ ಉಚಿತವಾಗಿ ಟ್ಯಾಬ್‌ ವಿತರಿಸಿ ಅವರು ಮಾತನಾಡಿದರು.

ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಷನ್‌, ಆರ್‌.ವಿ.ಶಿಕ್ಷಣ ಸಂಸ್ಥೆ, ಶಿಕ್ಷಣ ಫೌಂಡೇಷನ್‌ ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.

‘ಡಿಜಿಟಲ್‌ ಮತ್ತು ಸ್ಮಾರ್ಟ್‌ ಕಲಿಕೆಗೆ ಒತ್ತು ನೀಡಲು ಈ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಕ್ಷೇತ್ರದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೂ ಬೋಧನೆಯ ಗುಣಮಟ್ಟ ವೃದ್ಧಿಗೆ ಒತ್ತು ನೀಡಲಾಗುವುದು’ ಎಂದರು.

ಶಿಕ್ಷಕರಿಗೂ ತರಬೇತಿ: ‘ಡಿಜಿಟಲ್‌ ಮತ್ತು ಸ್ಮಾರ್ಟ್‌ ಶಿಕ್ಷಣಕ್ಕೆ ಹೊಂದಿಕೊಳ್ಳುವಂತೆ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಂದ ಪಠ್ಯ ಅಭ್ಯಾಸ, ಪರೀಕ್ಷೆ ನಡೆಸುವುದು, ಓದಿಸುವುದು, ಮೇಲ್ವಿಚಾರಣೆ ಸೇರಿದಂತೆ ಎಲ್ಲ ರೀತಿಯಲ್ಲಿ ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತಿದೆ’ ಎಂದರು.

ಆರ್‌.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಶಿಕ್ಷಣ ಫೌಂಡೇಷನ್‌ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌, ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಪ್ರಸನ್ನ, ಬೆಂಗಳೂರು ಉತ್ತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾರಾಯಣ್‌, ಮಲ್ಲೇಶ್ವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಇದ್ದರು.

ಟ್ಯಾಬ್‌ ಉಪಯೋಗ
*
ಉತ್ತಮ ಗುಣಮಟ್ಟದ ಈ ಟ್ಯಾಬ್‌ಗಳಲ್ಲಿ ರಾಜ್ಯಮಟ್ಟದ ಪಠ್ಯ ಇದೆ. ಅದರಲ್ಲಿ ಫೊಟೋಗಳು, ವಿಡಿಯೋಗಳು ಸೇರಿದಂತೆ ಸಮಕಾಲೀನ ಸಂದರ್ಭದಲ್ಲಿ ಕಲಿಯಬೇಕಾದ ಎಲ್ಲ ರೀತಿಯ ಅಂಶಗಳನ್ನೂ ಮೊದಲೇ ಲೋಡ್‌ ಮಾಡಲಾಗಿರುತ್ತದೆ.
* ಶಿಕ್ಷಣ ಫೌಂಡೇಷನ್‌ ಸಹಯೋಗದೊಂದಿಗೆ 10ನೇ ತರಗತಿಯ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನು ಟ್ಯಾಬ್‌ಗಳಲ್ಲಿ ತುಂಬಲಾಗಿದೆ. ಅದರಲ್ಲಿ ವೀಡಿಯೋಗಳು ಮತ್ತು ಚಟುವಟಿಕೆಗಳೂ ಸೇರಿವೆ.
* ಆಫ್‌ಲೈನ್‌ನಲ್ಲಿ ಇದ್ದಾಗಲೂ ವಿದ್ಯಾರ್ಥಿಗಳು ಟ್ಯಾಬ್‌ಗಳ ಮೂಲಕ ಕಲಿಕೆಯನ್ನು ಮುಂದುವರಿಸಬಹುದು. ತಂತ್ರಜ್ಞಾನದ ಮೂಲಕ ಕಲಿಕೆ ಮತ್ತು ಗ್ರಹಿಕೆ ಪರಿಣಾಮಕಾರಿಯಾಗಿರುತ್ತದೆ.
* ಮಕ್ಕಳು ಮನೆಯಲ್ಲಿದ್ದಾಗಲೂ ಕಲಿಯಬಹುದು. ಜತೆಗೆ ಆಯಾ ಮಕ್ಕಳನ್ನು ಶಿಕ್ಷಕರು ಪ್ರತ್ಯೇಕವಾಗಿ ಗಮನವಿಟ್ಟು ನೋಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT