ಗ್ರಾ.ಪಂ ಚುನಾವಣೆ: ಪತ್ನಿ ಆಯ್ಕೆಗೆ ₹ 25 ಲಕ್ಷ ಕೊಡಲು ಮುಂದಾದ ತಹಶೀಲ್ದಾರ್!

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ತಹಶೀಲ್ದಾರ್ ಒಬ್ಬರು ತಮ್ಮ ಪತ್ನಿಯ ಅವಿರೋಧ ಆಯ್ಕೆಗಾಗಿ ₹ 25 ಲಕ್ಷ ನೀಡಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಭಾನುವಾರ ಮನೆಗೊಬ್ಬರಂತೆ ಸಭೆ ಸೇರಿ ತಹಶೀಲ್ದಾರ್ ಪತ್ನಿಯ ಆಯ್ಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಗ್ರಾಮದಲ್ಲಿ ದೇವಾಲಯ ನಿರ್ಮಾಣಕ್ಕೆ ₹ 25 ಲಕ್ಷ ಹಾಗೂ ಗ್ರಾಮದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಹಣಕಾಸಿನ ಸಹಾಯ ಮಾಡಲು ತಹಶೀಲ್ದಾರ್ ಭರವಸೆ ನೀಡಿದ್ದಾರೆ. ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಇತರ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ಈಗ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ತಹಶೀಲ್ದಾರ್ ಕೂಡ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚು ಸರ್ಕಾರಿ ಸೌಲಭ್ಯಗಳು ಲಭಿಸಿ ಗ್ರಾಮ ಅಭಿವೃದ್ಧಿ ಹೊಂದುತ್ತದೆ. ಅವರ ಪತ್ನಿಯನ್ನು ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲೂ ಮಾತುಕತೆಯಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದರು.
ಸ್ಮಶಾನಕ್ಕೆ 8 ಗುಂಟೆ ಜಮೀನು: ಮದ್ದೂರು ತಾಲ್ಲೂಕು ಬೆಸಗರಹಳ್ಳಿ ಗ್ರಾಮ ಪಂಚಾಯಿತಿಯ ವಾರ್ಡ್ವೊಂದರಲ್ಲಿ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಅವಿರೋಧ ಆಯ್ಕೆಗೆ 8 ಗುಂಟೆ ಜಮೀನು ನೀಡಲು ಒಪ್ಪಿದ್ದಾರೆ. ವಾರ್ಡ್ನಲ್ಲಿ ಸ್ಮಶಾನ ಇಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದು, ಆ ಭೂಮಿಯಲ್ಲಿ ಸ್ಮಶಾನವನ್ನೇ ಅಭಿವೃದ್ಧಿಗೊಳಿಸಬೇಕು ಎಂದು ಕೋರಿದ್ದಾರೆ.
ಮಳವಳ್ಳಿ ತಾಲ್ಲೂಕು ನೆಲಮಾಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಳ್ಳಿಯೊಂದರ ಎರಡು ಸ್ಥಾನಗಳಲ್ಲೂ ಹಣ ಕೊಟ್ಟು ಅವಿರೋಧ ಆಯ್ಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಾಮಾನ್ಯ ಪುರುಷ ಸ್ಥಾನಕ್ಕೆ ₹ 7.50 ಲಕ್ಷ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ₹ 5.20 ಲಕ್ಷ ಕೊಡಲು ಆಕಾಂಕ್ಷಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಹಣದ ವ್ಯವಹಾರ ಬೇಡ: ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮ ಪಂಚಾಯಿತಿ ಎಲ್ಲಾ 14 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡುವ ಸಂಬಂಧ ಸಭೆ ನಡೆಸಲಾಗಿದೆ. ಯಾವುದೇ ಹಣ ಪಡೆಯದೇ ಉತ್ತಮ ಅಭ್ಯರ್ಥಿಗಳ ಆಯ್ಕೆಗೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಹಿಂದಿನಿಂದಲೂ ಮಾದರಿ ಗ್ರಾಮ ಪಂಚಾಯಿತಿಯಾಗಿದೆ.
‘ಅವಿರೋಧ ಆಯ್ಕೆಯ ವಿಚಾರದಲ್ಲಿ ಹಣದ ವಹಿವಾಟು ನಡೆಸುವುದು ಅಪರಾಧ. ಗ್ರಾಮದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಅಲ್ಲಿಯ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫಿಕರ್ ಉಲ್ಲಾ ಹೇಳಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.