ಸೋಮವಾರ, ಸೆಪ್ಟೆಂಬರ್ 27, 2021
25 °C

ತೆರಿಗೆಯಿಂದ ಸುಲಿಗೆ, ಬೆಲೆ ಏರಿಕೆಯಿಂದ ಲೂಟಿ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತೆರಿಗೆ ಮೂಲಕ ಸುಲಿಗೆ, ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿರುವ ಕೇಂದ್ರ– ರಾಜ್ಯ ಬಿಜೆಪಿ ಸರ್ಕಾರಗಳು ಜನರ ರಕ್ತ ಹೀರುತ್ತಿವೆ. ಆಕರ್ಷಕ ಘೋಷಣೆಗಳಲ್ಲೇ ಮರಳು ಮಾಡಬಹುದು ಎನ್ನುವ ನಂಬಿಕೆ ಬಿಜೆಪಿಯವರದ್ದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ವಿಪರೀತ ಬೆಲೆ ಏರಿಕೆ ಮತ್ತು ಪರೋಕ್ಷ ಹಾಗೂ ಪ್ರತ್ಯಕ್ಷ ತೆರಿಗೆಗಳ ಭಾರಕ್ಕೆ ನಗರ ಪ್ರದೇಶಗಳಲ್ಲಿರುವವರು, ಮಧ್ಯಮ ವರ್ಗದ ಮಂದಿ ಕೂಡ ಇತರೆ ಸಮುದಾಯಗಳ ರೀತಿ
ಯಲ್ಲಿಯೇ ಹೈರಾಣಾಗಿ, ಬೇಸತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿದ್ಯುಚ್ಚಕ್ತಿ ಬಿಲ್‌ಗಳು ಶೇ 30ರಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಮೋದಿ ಅವರು ಪ್ರಧಾನಿ ಪಟ್ಟದಲ್ಲಿ ಇರುವವರೆಗೂ ಇಳಿಯುವಂತೆ ಕಾಣುತ್ತಿಲ್ಲ. ಅನಿಲ ಸಿಲಿಂಡರ್ ಬೆಲೆ ಒಂದು ವಾರದಲ್ಲಿ ₹ 50ರಷ್ಟು ಹೆಚ್ಚಿದೆ. ಮನೆಗಳ ಆಸ್ತಿ ತೆರಿಗೆ ಹೆಚ್ಚಾಗಿರುವುದು ಮಾತ್ರವಲ್ಲದೆ ಖಾಲಿ ಜಾಗಗಳಿಗೂ ತೆರಿಗೆ ವಿಧಿಸುತ್ತಿದ್ದಾರೆ. ಕಬ್ಬಿಣ, ಸಿಮೆಂಟ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆಯೂ ಆಕಾಶ ಮುಟ್ಟುತ್ತಿದೆ. ಅಚ್ಛೆ ದಿನ್ ಅಂದರೆ ಇದೇನಾ’ ಎಂದು ಪ್ರಶ್ನಿಸಿದರು.

‘ಅಂಬಾನಿ ಮಾಡಿದ್ದ ₹ 4.5 ಲಕ್ಷ ಕೋಟಿ ಬ್ಯಾಂಕ್ ಸಾಲವನ್ನು ವಸೂಲಾಗದ ಸಾಲ ಎಂದು ತೀರ್ಮಾನಿಸಿ ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ರೈತರು ಸಾಲ ತೀರಿಸಿಲ್ಲ ಎಂದು ಅವರ ಟ್ರ್ಯಾಕ್ಟರ್‌ ಜಪ್ತಿ ಮಾಡುವ ಬಿಜೆಪಿ ಸರ್ಕಾರ, ಮೋದಿ ಪ್ರಧಾನಿ ಆದ 7 ವರ್ಷಗಳಲ್ಲಿ ₹ 7 ಲಕ್ಷ ಕೋಟಿಯಷ್ಟು ಕಾರ್ಪೋರೇಟ್ ಶ್ರೀಮಂತರ ಸಾಲ ಮನ್ನಾ ಮಾಡಿದೆ. ಇದರಲ್ಲಿ ಅಂಬಾನಿ ಒಬ್ಬರದ್ದೇ ₹ 4.5 ಲಕ್ಷ ಕೋಟಿ ಸೇರಿದೆ’ ಎಂದರು.

‘ಆಸ್ತಿ ನಗದೀಕರಣ ಹೆಸರಿನಲ್ಲಿ ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿ ಪ್ರತಿಯೊಂದನ್ನೂ ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು ಈಗ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೆಲ್ಲಾ ಯಾರ ಅವಧಿಯಲ್ಲಿ ಆಗಿದ್ದು’ ಎಂದೂ ಪ್ರಶ್ನಿಸಿದರು.

‘ಸಂಕಷ್ಟ ತಂದಿಟ್ಟಿರುವ, ನರಕ ಸೃಷ್ಟಿ ಮಾಡಿರುವ ಬಿಜೆಪಿಯನ್ನು ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲಬುರ್ಗಿ ಮಹಾನಗರಪಾಲಿಕೆ ಚುನಾವಣೆಗಳಲ್ಲಿ ನಗರವಾಸಿಗಳು ತಿರಸ್ಕರಿಸಬೇಕು‘ ಎಂದೂ ಮನವಿ ಮಾಡಿದರು.

*
ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಪ್ರಧಾನಿ ಮೋದಿ, ಈ ದೇಶದ ಜನರ ಅನುಮತಿ ಪಡೆದಿದ್ದಾರಾ?
-ಸಿದ್ದರಾಮಯ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು