ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣಕ್ಕೆ ಹೊಸ ಆಯಾಮದ ಕನಸು: ಬೀದಿಗಿಳಿದ ದಂಪತಿ

ಆನ್ ದ ವೇ ಹೆಸರಿನ ಅಭಿಯಾನ; ರಾಜ್ಯದಾದ್ಯಂತ ಪ್ರವಾಸದ ಯೋಜನೆ
Last Updated 7 ಅಕ್ಟೋಬರ್ 2022, 19:51 IST
ಅಕ್ಷರ ಗಾತ್ರ

ಮಂಗಳೂರು: ಎರಡೋ ಮೂರೋ ರಸ್ತೆಗಳು ಸೇರುವಲ್ಲಿ ಏಕಾಏಕಿ ಧ್ವನಿವರ್ಧಕ ಕಂಡುಬರುತ್ತದೆ. ಕ್ರಾಂತಿಗೀತೆ ಅಥವಾ ಭಾವಗಾನ ಕೇಳತೊಡಗುತ್ತದೆ. ಸ್ವಲ್ಪ ಹೊತ್ತಿನಲ್ಲಿ ಜನರು ಸೇರುತ್ತಾರೆ. ಹಾಡು ಮುಗಿಯುವುದರೊಳಗೆ ಪ್ರಶ್ನೆಗಳು ಕೇಳಿಬರುತ್ತವೆ, ಸಂವಾದ ನಡೆಯುತ್ತದೆ.

ಮಂಗಳೂರಿನ ಶಾಲಾ ಶಿಕ್ಷಕರಾಗಿರುವ ಅಕ್ಷತಾ ಕುಡ್ಲ ಮತ್ತು ಚೇತನ್ ಕೊಪ್ಪ ದಂಪತಿ ಆರಂಭಿಸಿರುವ ‘ಆನ್ ದ ವೇ’ ಹೆಸರಿನ ಶಿಕ್ಷಣ ಅಭಿಯಾನ ಆರಂಭವಾಗುವುದು ಹೀಗೆ. ಮಕ್ಕಳ ಬದುಕು ಪಠ್ಯದಲ್ಲೇ ಕಳೆದುಹೋಗಬಾರದು, ಪಠ್ಯವನ್ನು ಪೂರಕವಾಗಿ ಬಳಸಿಕೊಂಡು ಜೀವನ ಮುನ್ನಡೆಸಲು ದಾರಿಯೊಂದು ಇದೆ ಎಂಬುದನ್ನು ಪಾಲಕರು ಮತ್ತು ಶಿಕ್ಷಕರಿಗೆ ಮನವರಿಕೆ ಮಾಡುವುದಕ್ಕಾಗಿ ಆರಂಭಿಸಿರುವ ಚಾರಣದ ಅರಂಭಿಕ ಘಟ್ಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಗುತ್ತಿದೆ.

ಚೇತನ್ ಕೊಪ್ಪ ಅವರು ದಕ್ಷಿಣ ಕನ್ನಡದ ಉಳಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ. ಅಕ್ಷತಾ, ಮಂಗಳೂರು ನಗರದ ಸೇಂಟ್ ಅಲೋಶಿಯಸ್ ಗೊನ್ಜಾಗ ಶಾಲೆಯ ಕನ್ನಡ ಶಿಕ್ಷಕಿ. ಪಚ್ಚನಾಡಿಯಲ್ಲಿ ವಾಸವಾಗಿರುವ ಈ ಜೋಡಿಯ ಅಭಿಯಾನ, ಗಾಂಧಿಜಯಂತಿಯ ದಿನ ಉಳಾಯಿಬೆಟ್ಟುವಿನಲ್ಲಿ ಆರಂಭಗೊಂಡಿದ್ದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗಾಗಲೇ ಸಂವಾದ ನಡೆಸಲಾಗಿದೆ.

‘ಇಂದಿನ ಶಿಕ್ಷಣ ಪದ್ಧತಿ ವಿಚಿತ್ರವಾಗಿದೆ. ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದವರು ಸಾಹಿತಿಯಾಗುವುದಿಲ್ಲ. ವಿಜ್ಞಾನ ವಿಷಯದಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು ವಿಜ್ಞಾನಿ ಆಗುವುದಿಲ್ಲ. ಪಠ್ಯವು ಅನುಭವಕ್ಕೆ ಬಾರದೆ ಅಂಕ ಗಳಿಸುವ ವಿಧಾನ ಮಾತ್ರ ಆಗಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಮೂಲಕ ಮಕ್ಕಳನ್ನು ವಿಭಿನ್ನವಾಗಿ ಬೆಳೆಸಲು ಪ್ರೇರೇಪಿಸುವುದೇ ಅಭಿಯಾನದ ಉದ್ದೇಶ’ ಎನ್ನುತ್ತಾರೆ ಈ ದಂಪತಿ.

ಸರ್ಕಾರಿ ಶಾಲೆಯ ವಠಾರದಲ್ಲಿ ಅಥವಾ ಊರ ಪ್ರಮುಖ ಪೇಟೆಯಲ್ಲಿ ಹಾಡು, ಮಿಮಿಕ್ರಿ ಮೂಲಕ ಜನರನ್ನು ಸೇರಿಸಿ ಶಿಕ್ಷಣಕ್ಕೆ ಸಂಬಂಧಿಸಿ ಅವರ ಅನಿಸಿಕೆಯನ್ನು ಕೇಳಿ ಪರಿವರ್ತನೆಗಾಗಿ ಪ್ರೇರೇಪಿಸುವುದು ಕಾರ್ಯಕ್ರಮದ ಪ್ರಮುಖ ಗುರಿ. ದಸರಾ ರಜೆಯನ್ನು ಪೂರ್ತಿಯಾಗಿ ಈ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ದಂಪತಿ, ರಾಜ್ಯದ ವಿವಿಧ ಕಡೆಗಳಲ್ಲಿ ಸುತ್ತಾಡಲಿದ್ದಾರೆ. ದಸರಾ ನಂತರ ರಜಾ ದಿನಗಳಲ್ಲೂ ಕೆಲವೊಮ್ಮೆ ವೃತ್ತಿಗೆ ರಜೆ ಹಾಕಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ‘ಪ್ರಜಾವಾಣಿ’ಗೆ ಅವರು ತಿಳಿಸಿದರು.

‘7 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ಅದಕ್ಕೂ ಮೊದಲು 7 ವರ್ಷ ಅನೌಪಚಾರಿಕ ಶಿಕ್ಷಣ ಸಂಸ್ಥೆಯಾದ ‘ಸ್ವರೂಪ ಅಧ್ಯಯನ ಕೇಂದ್ರ’ದಲ್ಲಿದ್ದೆ. ಶಿಕ್ಷಣ ವ್ಯವಸ್ಥೆಗೆ ಹೊಸ ಆಯಾಮ
ಬಯಸುವ ಇಂಥ ಅಭಿಯಾನವೊಂದರ ಅಗತ್ಯ ಇದೆ ಎಂದು ತೋಚಿತ್ತು. ಇದು ಪೋಷಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಬದಲಾವಣೆ ಬಯಸಿದರೆ, ಸರ್ಕಾರದ ಮೇಲೆ ಪ್ರಭಾವ ಬೀರುವ ಭರವಸೆ ಇದೆ. ಅಷ್ಟಾದರೆ ನಮ್ಮ ಕಾರ್ಯ ಸಾರ್ಥಕ’ ಎಂದು ಚೇತನ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT