ಬುಧವಾರ, ಆಗಸ್ಟ್ 10, 2022
24 °C
ಹಾಸಿಗೆ ಬ್ಲಾಕ್‌ ದಂಧೆಗೆ ಕೋಮು ಬಣ್ಣ?

17 ಮುಸ್ಲಿಮರನ್ನು ಮಾತ್ರ ಗುರಿಪಡಿಸಿದ್ದೇಕೆ?: ಜಾಲತಾಣಗಳಲ್ಲಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV File

ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದ ಕೋವಿಡ್‌ ವಾರ್‌ ರೂಂ ಸಿಬ್ಬಂದಿ ಬಿಬಿಎಂಪಿ ಮೂಲಕ ಹಂಚಿಕೆ ವೇಳೆ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಆರೋಪ ಮಾಡಿದ ಬೆನ್ನಲ್ಲೇ ಈ ವಿವಾದ ಕೋಮು ಬಣ್ಣ ಪಡೆದುಕೊಂಡಿದೆ.

ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಮ್‌ಗೆ ಮಂಗಳವಾರ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್‌ ರೆಡ್ಡಿ, ಎಲ್‌.ಎ.ರವಿ ಸುಬ್ರಹ್ಮಣ್ಯ ಹಾಗೂ ಉದಯ್‌ ಗರುಡಾಚಾರ್‌ ಅವರ ತಂಡವು ವಾರ್‌ ರೂಂನಲ್ಲಿ ಮುಸ್ಲಿಂ ಸಿಬ್ಬಂದಿಯನ್ನು ನೇಮಿಸಿಕೊಂಡ ಬಗ್ಗೆ ಪ್ರಶ್ನೆ ಮಾಡಿತ್ತು. ಮುಸ್ಲಿಂ ಸಿಬ್ಬಂದಿಯ ಹೆಸರುಗಳನ್ನು ಓದಿದ್ದ ತೇಜಸ್ವಿ ಸೂರ್ಯ, ‘ಇವರನ್ನೆಲ್ಲ ಹೇಗೆ ನೇಮಿಸಿಕೊಂಡಿರಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ರವಿಸುಬ್ರಹ್ಮಣ್ಯ ಅವರಂತೂ ‘ನೀವೇನು ಮದರಸಾ ನಡೆಸುತ್ತಿದ್ದೀರಾ, ಕಾರ್ಪೊರೇಷನ್‌ ನಡೆಸುತ್ತಿದ್ದೀರಾ’ ಎಂದೂ ಪ್ರಶ್ನಿಸಿದ್ದರು.

ಇದಾದ ಕೆಲವೇ ಕ್ಷಣಗಳಲ್ಲಿ, ಅನೇಕರು ‘ಇದು ಬೆಂಗಳೂರಿನ ಸಾವಿರಾರು ಮಂದಿಯನ್ನು ಕೊಂದ ಬಿಬಿಎಂಪಿ ವಾರ್‌ ರೂಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರರ ಪಟ್ಟಿ’ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. 16 ಮಂದಿ ಮುಸ್ಲಿಂ ಸಿಬ್ಬಂದಿ ಹಾಗೂ ಈ ವಾರ್‌ ರೂಂ ನಿರ್ವಹಣೆಗೆ ಸಂಬಂಧವೇ ಇಲ್ಲದ ಬಿಬಿಎಂಪಿ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್ ಖಾನ್‌ ಹೆಸರನ್ನು ಸೇರಿಸಿದ ಪಟ್ಟಿಯನ್ನೂ ಇದರ ಜೊತೆ ಹಂಚಿಕೊಂಡಿದ್ದರು. ‌16 ಮಂದಿ ಮುಸ್ಲಿಂ ಸಿಬ್ಬಂದಿಯನ್ನು ಮಂಗಳವಾರವೇ ಕೆಲಸದಿಂದ ತೆಗೆಯಲಾಗಿದೆ.

‘ನಮ್ಮ ವಾರ್‌ ರೂಂ ನಲ್ಲಿ ಬೆಳಗ್ಗಿನ ಪಾಳಿಯಲ್ಲಿ 87, ಎರಡನೇ ಪಾಳಿಯಲ್ಲಿ 87 ಹಾಗೂ ರಾತ್ರಿ ಪಾಳಿಯಲ್ಲಿ 33 ಮಂದಿ ಕಾರ್ಯ ನಿರ್ವಹಿಸುತ್ತಾರೆ. ಇದರಲ್ಲಿ ಬೇರೆ ಬೇರೆ ಧರ್ಮದವರಿದ್ದಾರೆ. ಅರ್ಜಿ ಕರೆದೇ ಅವರನ್ನೆಲ್ಲ ನಿಯುಕ್ತಿ ಮಾಡಲಾಗಿತ್ತು’ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಬೆಂಗಳೂರಿನಲ್ಲಿ ಬಯಲಾದ ಬೆಡ್‌ ಬುಕ್ಕಿಂಗ್‌ ಮಾಫಿಯಾ ಜಾಗತಿಕ ಭಯೋತ್ಪಾದನೆಯ ಹೊಸರೂಪ. ಸೇವೆ ಹಾಗೂ ಉದ್ಯಮದ ಹೆಸರಿನಲ್ಲಿ  ವ್ಯವಸ್ಥೆಯ ಒಳನುಸುಳುವ ಈ ಉಗ್ರರು ಬಾಂಬ್‌ ಸ್ಫೋಟಿಸದೇ ಜನರ ಪ್ರಾಣ ತೆಗೆದಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕಳಂಕ ತರಲು ರೂಪಿಸಿದ ದಂಧೆಯ ಹಿಂದಿರುವ ಕೈಗಳಿಗೆ ಧಿಕ್ಕಾರವಿರಲಿ’ ಎಂದು ಬಿಜೆಪಿ ಟ್ವೀಟ್‌ ಮಾಡಿತ್ತು.

ಕರೆ ಸ್ವೀಕರಿಸದ ಸಂಸದ, ಶಾಸಕರು

ವಾರ್‌ ರೂಂ ಪರಿಶೀಲನೆ ಸಂದರ್ಭದಲ್ಲಿ 17 ಮಂದಿ ಮುಸ್ಲಿಂ ಸಿಬ್ಬಂದಿಯನ್ನು ಮಾತ್ರ ಗುರಿಯಾಗಿಸಿ ಪ್ರಶ್ನೆ ಮಾಡಿದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ ರೆಡ್ಡಿ ಹಾಗೂ ರವಿ ಸುಬ್ರಹ್ಮಣ್ಯ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿತು. 10ಕ್ಕೂ ಅಧಿಕ ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲೇ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು