ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ ತಿರುವು: ಅರಣ್ಯ ಇಲಾಖೆ ಒಪ್ಪಿಗೆ

33 ಹೆಕ್ಟೇರ್‌ ಮೀಸಲು ಅರಣ್ಯ ಬಳಕೆ l ಕೇಂದ್ರ ಪರಿಸರ ಸಚಿವಾಲಯಕ್ಕೆ ಪ್ರಸ್ತಾವ
Last Updated 1 ಜನವರಿ 2023, 20:14 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ಯೋಜನೆಯ ಕಳಸಾ ನಾಲಾ ತಿರುವು ಯೋಜನೆಗೆ 33.05 ಹೆಕ್ಟೇರ್‌ ಮೀಸಲು ಅರಣ್ಯವನ್ನು ಬಳಸಿಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ.

ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣವು 2018ರ ಆಗಸ್ಟ್‌ 14ರಂದು ಕಳಸಾ– ಬಂಡೂರಿ ಯೋಜನೆಗೆ 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿದೆ. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 2.18 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌ಗೆ) ಒಪ್ಪಿಗೆ ನೀಡುವಂತೆ ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಬೆಳಗಾವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಅವರು ಅಕ್ಟೋಬರ್‌ 19, ಡಿಸೆಂಬರ್‌ 15 ಹಾಗೂ 20ರಂದು ಸ್ಥಳ ಪರಿಶೀಲನೆ ನಡೆಸಿ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಅವರಿಗೆ ಹಲವು ಶಿಫಾರಸುಗಳು ಹಾಗೂ ಷರತ್ತುಗಳನ್ನು ಒಳಗೊಂಡ ವರದಿ ಸಲ್ಲಿಸಿದ್ದರು. ಬಳಿಕ ಸಿಸಿಎಫ್ ಅವರು ಅರಣ್ಯ ಪಡೆಯ ಮುಖ್ಯಸ್ಥ ರಾಜ್‌ ಕಿಶೋರ್ ಸಿಂಗ್ ಅವರಿಗೆ ವರದಿ ನೀಡಿದ್ದರು. ಈ ವರದಿಯ ಆಧಾರದಲ್ಲಿ ರಾಜ್‌ ಕಿಶೋರ್ ಸಿಂಗ್ ಅವರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್ ಅವರಿಗೆ ಶುಕ್ರವಾರ ವರದಿ ಸಲ್ಲಿಸಿದ್ದಾರೆ.

ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಸೆಕ್ಷನ್‌ 2 ಅಡಿಯಲ್ಲಿ
ಈ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಪರಿಸರ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪ ಮಹಾನಿರ್ದೇಶಕರಿಗೆ (ಕೇಂದ್ರ) ಶುಕ್ರವಾರವೇ ಪ್ರಸ್ತಾವನೆ
ಸಲ್ಲಿಸಿದ್ದಾರೆ.

40 ಹೆಕ್ಟೇರ್‌ಗಿಂತ ಕಡಿಮೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಬೆಂಗಳೂರು
ಪ್ರಾದೇಶಿಕ ಕಚೇರಿಯಿಂದ ಅನುಮತಿ ಪಡೆದರೆ ಸಾಕು. ಹೀಗಾಗಿ, ಕಳಸಾ ಹಾಗೂ ಬಂಡೂರಿ ಯೋಜನೆಗೆ ಪ್ರತ್ಯೇಕವಾಗಿ ಪ್ರಸ್ತಾವಗಳನ್ನು ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗುತ್ತಿದೆ.
ಕೆಲವೇ ದಿನಗಳಲ್ಲಿ ಬಂಡೂರಿ ಯೋಜನೆಯ ಪ್ರಸ್ತಾವವನ್ನು ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗುವುದು. ಪ್ರಾದೇಶಿಕ ಕಚೇರಿಯಿಂದ ತಿಂಗಳೊಳಗೆ ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.

33 ಹೆಕ್ಟೇರ್‌ನಲ್ಲಿ 11,240 ಮರಗಳು

ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಿರುವ ಮೀಸಲು ಅರಣ್ಯದಲ್ಲಿ ವಿವಿಧ ಜಾತಿಯ 11,240 ಮರಗಳಿವೆ ಎಂದು ಡಿಸಿಎಫ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

* ಈ ಅರಣ್ಯದ ಸುತ್ತಮುತ್ತ ಹುಲಿ, ಚಿರತೆ, ಕರಡಿ, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳಿವೆ. ಇಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಮರ ಗಿಡಗಳು ಇವೆ.

* ಈ ಅರಣ್ಯವು ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮ, ಹುಲಿ ಸಂರಕ್ಷಿತ ಪ್ರದೇಶ, ಆನೆ ಕಾರಿಡಾರ್, ವನ್ಯಜೀವಿ ವಲಸೆ ಕಾರಿಡಾರ್‌ನ ಭಾಗ ಅಲ್ಲ.

* ಈ ಯೋಜನೆಯು ಭೀಮಘಡ ವನ್ಯಜೀವಿ ಧಾಮದಿಂದ 5–6 ಕಿ.ಮೀ. ದೂರದಲ್ಲಿದೆ.

* ಅರಣ್ಯ ಸಂರಕ್ಷಣಾ ಕಾಯ್ದೆ 1980 ಅಡಿಯಲ್ಲಿ ಯಾವುದೇ ಉಲ್ಲಂಘನೆ ಆಗಿಲ್ಲ.

* ಇಲ್ಲಿ ರಕ್ಷಣಾ ಭೂಮಿ, ಪುರಾತತ್ವ ಹಾಗೂ ಪಾರಂಪರಿಕ ತಾಣ ಇಲ್ಲ.

* ಈ ಯೋಜನೆಗಾಗಿ ಬೇಕಿರುವ ಅರಣ್ಯ ಭೂಮಿ ಕನಿಷ್ಠ ಪ್ರಮಾಣದ್ದು.

ಅರಣ್ಯೀಕರಣಕ್ಕೆ 60 ಹೆಕ್ಟೇರ್‌

ಯಾವುದೇ ಯೋಜನೆಗೆ ಅರಣ್ಯ ಭೂಮಿ ಬಳಸುವ ವೇಳೆ ಅರಣ್ಯೇತರ ಜಾಗದಲ್ಲಿ ಕಡ್ಡಾಯ ಅರಣ್ಯೀಕರಣ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಕೇಂದ್ರ ಪರಿಸರ ಸಚಿವಾಲಯ 2019ರಲ್ಲಿ ನಿರ್ದೇಶನ ನೀಡಿದೆ. ಕರ್ನಾಟಕ ಸರ್ಕಾರವು ಕಡ್ಡಾಯ ಅರಣ್ಯೀಕರಣಕ್ಕಾಗಿ ಅಥಣಿ ತಾಲ್ಲೂಕಿನ ಹಲ್‌ಹಳ್ಳಿ ಗ್ರಾಮದ 60 ಹೆಕ್ಟೇರ್‌ ಜಾಗವನ್ನು ಅರಣ್ಯೀಕರಣಕ್ಕೆ ಬಳಸುವುದಾಗಿ ತಿಳಿಸಿದೆ. ಪ್ರತಿ ಹೆಕ್ಟೇರ್‌ನಲ್ಲಿ 1 ಸಾವಿರ ಗಿಡಗಳನ್ನು ನೆಡುವುದಾಗಿ ಹೇಳಿದೆ. ಅರಣ್ಯೀಕರಣದ ವೆಚ್ಚವನ್ನು ಕರ್ನಾಟಕ ನೀರಾವರಿ ನಿಗಮ ಭರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT