ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಬೆಂಗಳೂರಿನಿಂದ ಮಳವಳ್ಳಿಗೆ ಆಟೊದಲ್ಲೇ ಅಮ್ಮನ ಶವ ಒಯ್ದ ಮಗ

Last Updated 10 ಮೇ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಕ್ಕಾಲು ಗಂಟೆಯಿಂದ ಒಂದೇ ಸಮನೆ 108 ಗೆ ಕರೆ ಮಾಡಿದರೂ ಆಂಬುಲೆನ್ಸ್‌ ಸಿಗಲೇ ಇಲ್ಲ. ಇದರಿಂದ ಬೇಸತ್ತ ವ್ಯಕ್ತಿಯೊಬ್ಬರು ತನ್ನ ಸ್ನೇಹಿತನ ಆಟೊದಲ್ಲೇ ಅಮ್ಮನ ಶವ ಸಾಗಿಸಿದರು.

73 ವರ್ಷ ವಯಸ್ಸಿನ ಶಾರದಮ್ಮ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಸೋಮವಾರ ಬೆಳಿಗ್ಗೆ ಹಲಸೂರಿನಲ್ಲಿರುವ ಜೋಸೆಫ್‌ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ತಮ್ಮಲ್ಲಿ ಆಮ್ಲಜನಕ ಸೌಲಭ್ಯದ ಹಾಸಿಗೆ ಲಭ್ಯವಿಲ್ಲ ಎಂದು ಹೇಳಿದ್ದರಿಂದ ಶಿವಕುಮಾರ್‌ ಅವರು ತಾಯಿಯೊಂದಿಗೆ ತಕ್ಷಣವೇ ಸಿಎಂಎಚ್‌ ಆಸ್ಪತ್ರೆಯತ್ತ ಹೊರಟರು. ಆಸ್ಪತ್ರೆ ತಲುಪುವಷ್ಟರಲ್ಲೇ ಅಮ್ಮನ ಉಸಿರು ನಿಂತಿತ್ತು. ಪರೀಕ್ಷೆ ನಡೆಸಿದ ವೈದ್ಯರು, ಆಕೆ ಮೃತಪಟ್ಟಿರುವುದಾಗಿ ಹೇಳಿದರು.

ತಾಯಿಯ ಶವವನ್ನು ಮಂಡ್ಯದ ಮಳವಳ್ಳಿಯಲ್ಲಿರುವ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ನಿಶ್ಚಯಿಸಿದ್ದ ಶಿವಕುಮಾರ್‌, ಆಂಬುಲೆನ್ಸ್‌ಗಾಗಿ ಸತತವಾಗಿ 108 ಸಂಖ್ಯೆಗೆ ಕರೆಮಾಡಿದರು. ‘ನೀವು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ’ ಎಂಬ ಅಶರೀರವಾಣಿ ಕೇಳಿತೇ ಹೊರತು, ಸಂಪರ್ಕ ಸಾಧ್ಯವಾಗಲೇ ಇಲ್ಲ. ಹೀಗಾಗಿ ಆಟೊದಲ್ಲೇ ಶವ ಸಾಗಿಸಲು ಮುಂದಾದರು.

ನಾಯಂಡಹಳ್ಳಿ ಜಂಕ್ಷನ್‌ ಬಳಿ ಲಾಕ್‌ಡೌನ್‌ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರು ಆಟೊ ತಡೆದು ಪ್ರಶ್ನಿಸಿದಾಗ ಶಿವಕುಮಾರ್‌ ಅವರು ಸ್ವಗ್ರಾಮಕ್ಕೆ ತಾಯಿಯ ಶವ ಸಾಗಿಸುತ್ತಿದ್ದ ವಿಷಯ ತಿಳಿಸಿದರು.

ಪೊಲೀಸರ ಪ್ರಯತ್ನವೂ ಫಲಿಸಲಿಲ್ಲ: ಪೊಲೀಸರು ಕೂಡಲೇ 108 ಸಂಖ್ಯೆಗೆ ಕರೆ ಮಾಡಿದರು. ಹೀಗಿದ್ದರೂ ಸಂಪರ್ಕ ಸಾಧ್ಯವಾಗಲಿಲ್ಲ. ತಮಗೆ ಪರಿಚಯವಿದ್ದ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆಂಬುಲೆನ್ಸ್‌ ತರಿಸಲು ಪ್ರಯತ್ನಿಸಿದರು. ಅರ್ಧಗಂಟೆಯಾದರೂ ಆಂಬುಲೆನ್ಸ್‌ ಸಿಗಲಿಲ್ಲ. ಇದರಿಂದ ಅಸಹಾಯಕರಾದ ಅವರು ಆಟೊದಲ್ಲೇ ಶವ ಸಾಗಿಸಲು ಅನುಮತಿಕೊಟ್ಟರು.

‘ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅಮ್ಮ ನನ್ನ ಮನೆಯಲ್ಲೇ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿದರು. ಎರಡು ಆಸ್ಪತ್ರೆಗೆ ಅಲೆದರೂ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಶವ ತೆಗೆದುಕೊಂಡು ಹೋಗಲು ಆಂಬುಲೆನ್ಸ್‌ ಕೂಡ ಸಿಗಲಿಲ್ಲ’ ಎಂದು ಶಿವಕುಮಾರ್‌ ಬೇಸರ ವ್ಯಕ್ತ‍ಪಡಿಸಿದರು.

ಆಟೊ ಹಿಂಬದಿ ಆಸನದಲ್ಲಿ ಕುಳಿತಿದ್ದ ಶಿವಕುಮಾರ್‌ ತಾಯಿಯ ಶವವನ್ನು ಎಡಗೈಯಿಂದ ಬಿಗಿಯಾಗಿ ಅಪ್ಪಿ ಹಿಡಿದಿದ್ದ ದೃಶ್ಯ ಮನಕಲಕುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT