ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರ ನಾಳೆಯಿಂದಲೇ ‘ಹೌಸ್‌ಫುಲ್‌’

ಚಿತ್ರೋದ್ಯಮದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ
Last Updated 3 ಫೆಬ್ರುವರಿ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರೋದ್ಯಮದ ಒಕ್ಕೊರಲ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ, ಶುಕ್ರವಾರದಿಂದಲೇ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲು ಒಪ್ಪಿದೆ.

ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿ ಹೊರಡಿಸಿದ್ದ ತನ್ನ ಮೊದಲಿನ ಆದೇಶವನ್ನು ಕೇವಲ 24 ಗಂಟೆಗಳಲ್ಲಿ ವಾಪಸ್‌ ಪಡೆಯಲು ನಿರ್ಧರಿಸುವ ಮೂಲಕ ತೀವ್ರ ಮುಜುಗರವನ್ನೂ ಅನುಭವಿಸಿದೆ.

ಕೇಂದ್ರ ಸರ್ಕಾರವು ಚಿತ್ರಮಂದಿರಗಳಲ್ಲಿ ಫೆ. 1ರಿಂದಲೇ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಕೊಟ್ಟಿದೆ. ಆದರೆ, ರಾಜ್ಯದಲ್ಲಿ ಮೊದಲಿನ ನಿರ್ಬಂಧವನ್ನೇ ಮುಂದುವರಿಸಿ ಮಂಗಳವಾರ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು. ರಾಜ್ಯ ಸರ್ಕಾರದ ಈ ನಿಲುವಿನ ವಿರುದ್ಧ ಚಿತ್ರೋದ್ಯಮ ಸಿಡಿದುನಿಂತಿತು. ಉದ್ಯಮದ ಹಿರಿಯರು, ನಿರ್ಮಾಪಕರು, ಚಿತ್ರ ಪ್ರದರ್ಶಕರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಜತೆ ವಿಧಾನಸೌಧದಲ್ಲಿ ಬುಧವಾರ ಸಂಜೆ ಸಭೆ ನಡೆಸಿದ ಆರೋಗ್ಯ ಸಚಿವ ಕೆ.ಸುಧಾಕರ್‌, ಸರ್ಕಾರದ ನಿರ್ಣಯವನ್ನು ಪ್ರಕಟಿಸಿದರು.

‘ಶೇ 100ರಷ್ಟು ಆಸನ ಭರ್ತಿಗೆ ಕಲ್ಪಿಸಿರುವ ಅವಕಾಶವು ಸದ್ಯ ಪ್ರಾಯೋಗಿಕವಾಗಿ ನಾಲ್ಕು ವಾರಗಳವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿ ಒಂದುವೇಳೆ ಸೋಂಕು ಪ್ರಕರಣಗಳು ಹೆಚ್ಚಿದರೆ ನಿರ್ಣಯವನ್ನು ಮಾರ್ಪಾಡು ಮಾಡಬೇಕಾಗುವುದು. ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ ಈಗ ಕಠಿಣವಾದ ಮಾರ್ಗಸೂಚಿಯನ್ನೂ ಹೊರಡಿಸಲಾಗುವುದು. ಪ್ರೇಕ್ಷಕರು ಮತ್ತು ಚಿತ್ರಮಂದಿರಗಳ ಮಾಲೀಕರು ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಸರ್ಕಾರದ ಜೊತೆ ಕೈಜೋಡಿಸಬೇಕು’ ಎಂದೂ ಅವರು ಮನವಿ ಮಾಡಿದರು.

ನಿರ್ಬಂಧ ಮುಂದುವರಿಸಿದ ಕ್ರಮ ವಿರೋಧಿಸಿ ಬುಧವಾರ ಬೆಳಿಗ್ಗೆಯಿಂದಲೇ ಚಿತ್ರನಟರು ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದರು. ಕೆಎಫ್‌ಐ ಡಿಮಾಂಡ್ಸ್‌ ಫುಲ್‌ ಅಕ್ಯುಪೆನ್ಸಿ ಹ್ಯಾಷ್‌ಟ್ಯಾಗ್‌ನಲ್ಲಿ ಈ ಅಭಿಯಾನ ಟ್ರೆಂಡ್‌ ಆಗಿತ್ತು. ಎಲ್ಲರೂ ಈ ಟ್ವೀಟ್‌ಅನ್ನು ಸಚಿವ ಸುಧಾಕರ್ ಅವರ ಖಾತೆಗೂ ಟ್ಯಾಗ್‌ ಮಾಡಿದ್ದರು. ಪ್ರತಿರೋಧ ತೀವ್ರಗೊಳ್ಳುತ್ತಿದ್ದಂತೆ ಸಚಿವರು ಸಂಜೆ ಚಿತ್ರೋದ್ಯಮದ ಪ್ರಮುಖರ ತುರ್ತುಸಭೆ ನಡೆಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ನಿರ್ಮಾಪಕ ಸಾ.ರಾ. ಗೋವಿಂದು, ನಟ ಶಿವರಾಜ್‌ಕುಮಾರ್‌, ನಟಿ ತಾರಾ ಅನೂರಾಧ ಸಭೆಯಲ್ಲಿ ಪಾಲ್ಗೊಂಡಿದ್ದರು.

ಟ್ವೀಟ್‌ನಲ್ಲಿ ಹರಿದ ಆಕ್ರೋಶ:

‘ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ, ಬಸ್‌ನಲ್ಲೂ ಫುಲ್‌ರಶ್‌ ಹೀಗಿದ್ದರೂ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ 50 ನಿರ್ಬಂಧ?’ ಎಂಬ ಬರಹ ಹರಿದಾಡಿತ್ತು. ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅಲ್ಲಿನ ರಾಜ್ಯ ಸರ್ಕಾರಗಳು ಅನುಮತಿ ನೀಡಿವೆ. ಇಲ್ಲೇನು ಅಡ್ಡಿ? ಎಂಬುದು ಸಿನಿರಂಗದವರ ಪ್ರಶ್ನೆಯಾಗಿತ್ತು.

ಫೆ.19ರಂದು ಬಿಡುಗಡೆಗೆ ಸಿದ್ಧವಾಗಿರುವ ‘ಪೊಗರು’ ಚಿತ್ರದ ನಾಯಕ ಧ್ರುವ ಸರ್ಜಾ ಮಾಡಿರುವ ಈ ಟ್ವೀಟ್‌ ಅನ್ನು ಚಂದನವನದ ಬಹುತೇಕ ನಟರು ಮರು ಟ್ವೀಟ್‌ ಮಾಡಿ, ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದರು. ತಮ್ಮ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ್‌ ಹಾಗೂ ಸಚಿವ ಸುಧಾಕರ್‌ ಅವರನ್ನು ಸರ್ಜಾ ಟ್ಯಾಗ್‌ ಮಾಡಿದ್ದರು. ಜೊತೆಗೆ ಚಿತ್ರಮಂದಿರದಲ್ಲಿ ಶೇ 100 ಭರ್ತಿಗೆ ಅವಕಾಶ ನೀಡಬೇಕು ಎಂದು ಕನ್ನಡ ಚಿತ್ರೋದ್ಯಮ ಮನವಿ ಮಾಡುತ್ತದೆ ಎಂದೂ ಬರೆದಿದ್ದರು.

‘ಎಲ್ಲರಿಗೂ ನಾರ್ಮಲ್‌, ನಮಗೇಕೆ ಅಬ್‌ನಾರ್ಮಲ್‌’ ಎಂದು ಹಿರಿಯ ನಟ ಶಿವರಾಜ್‌ಕುಮಾರ್‌ ಪ್ರಶ್ನಿಸಿದ್ದರು. ‘ಖಾಸಗಿ ಸಮಾರಂಭಗಳು, ಪ್ರಾರ್ಥನಾ ಮಂದರಿಗಳು, ಸಾರ್ವಜನಿಕ ಸಾರಿಗೆ, ಮಾರುಕಟ್ಟೆ, ಪ್ರವಾಸಿ ತಾಣಗಳು ಎಲ್ಲವುಗಳಿಗೂ ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶ ನೀಡಿರುವ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಏಕೆ ಅವಕಾಶ ನೀಡಬಾರದು’ ಎಂದು ನಟ ಪುನೀತ್‌ ರಾಜ್‌ಕುಮಾರ್ ಟ್ವೀಟ್‌ ಮೂಲಕ ಕೇಳಿದ್ದರು.

‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ? ಊರೆಲ್ಲ ಜನಜಂಗುಳಿ ತುಂಬಿ ತುಳುಕಿರಲು ಥಿಯೇಟರ್‌ ಒಳಗೆ ಮಾತ್ರ ಕೊರೊನಾಗೆ ಅಂಜಿದೊಡೆಂತಯ್ಯ’ ಎಂದು ತಮ್ಮದೇ ಶೈಲಿಯಲ್ಲಿ ನಟ ಧನಂಜಯ್‌ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದರು. ‘ರಾಜ್ಯದಾದ್ಯಂತ ಹಲವರಿಗೆ ಸಿನಿಮಾ ಜೀವನಾಧಾರವಾಗಿದೆ’ ಎನ್ನುವುದನ್ನು ನಾವು ಮರೆಯುತ್ತಿದ್ದೇವೆಯೇ ಎಂದು ನಟ ರಕ್ಷಿತ್‌ ಶೆಟ್ಟಿ ಧ್ವನಿಗೂಡಿಸಿದ್ದರು. ನಟ ದುನಿಯಾ ವಿಜಯ್‌, ಚಿತ್ರ ನಿರ್ದೇಶಕ ಪ್ರಶಾಂತ್‌ ನೀಲ್‌ ಸೇರಿದಂತೆ ಹಲವರೂ ಈ ಕುರಿತು ಟ್ವೀಟ್‌ ಮಾಡಿದ್ದರು.

ಏನೇನು ನಿಯಮ?

ಮಾಸ್ಕ್ ಧರಿಸುವುದು, ಅಂತರವನ್ನು ಕಾಪಾಡಿಕೊಳ್ಳುವುದು (ಕನಿಷ್ಠ 1 ಮೀಟರ್), ಆಗಾಗ ಸ್ಯಾನಿಟೈಸರ್‌ ಬಳಕೆ, ಸೋಪು ಹಾಗೂ ನೀರಿನಿಂದ ಕೈಗಳನ್ನು ಶುಚಿಗೊಳಿಸುವುದು. ಥರ್ಮಲ್ ಸ್ಕ್ರೀನಿಂಗ್, ಜ್ವರ ಹಾಗೂ ಸೋಂಕಿನ ಲಕ್ಷಣಗಳು ಇರುವವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವುದು, ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರೆಸುವಂತೆ ಮಂಗಳವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಸೂಚಿಸಲಾಗಿತ್ತು. ಗುರುವಾರದ ಹೊಸ ಮಾರ್ಗಸೂಚಿಯಲ್ಲೂ ಈ ಅಂಶಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

‘ಮಾರ್ಗಸೂಚಿ ಪಾಲಿಸುತ್ತೇವೆ’

‘ಸರ್ಕಾರದ ನಿರ್ಧಾರ ಚಿತ್ರೋದ್ಯಮದ ಆತಂಕ ನಿವಾರಿಸಿದೆ. ಇನ್ನು ನಮ್ಮ ಜೊತೆ ನಾಯಕರು ಮತ್ತು ಪ್ರೇಕ್ಷಕರು ಸಹಕರಿಸಬೇಕು. ಯಾವುದೇ ಸಿನಿಮಾ ಸಂಬಂಧಿಸಿದಂತೆ ಸಂಭ್ರಮೋತ್ಸವ ಆಚರಿಸಬಾರದು ಎಂದು ಸರ್ಕಾರ ಹೇಳಿದೆ. ಅದನ್ನು ಪಾಲಿಸುವಂತೆ ಹಾಗೂ ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುವಂತೆ ನಾಯಕ ನಟರು ತಮ್ಮ ಅಭಿಮಾನಿಗಳಿಗೆ ಹೇಳಬೇಕು. ಈ ಕುರಿತು ಚರ್ಚಿಸಲು ಗುರುವಾರ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರ ಸಭೆ ಕರೆದಿದ್ದೇವೆ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌ ಹೇಳಿದರು.

ಮಾಸ್ಕ್‌ ಧರಿಸಿ ಬರುವುದು ಕಡ್ಡಾಯ. ಥಿಯೇಟರ್‌ಗಳಲ್ಲೂ ಮಾಸ್ಕ್‌ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದೇವೆ. ಆದರೆ, ಎಲ್ಲ ಪ್ರೇಕ್ಷಕರು ಮಾಸ್ಕ್‌ ಧರಿಸಿಯೇ ಬರುವುದರಿಂದ ಸಮಸ್ಯೆ ಎದುರಾಗಿಲ್ಲ’ ಎಂದು ಅವರು ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌ ಪ್ರತಿಕ್ರಿಯಿಸಿ, ‘ಒಂದೇ ವಿಷಯದ ಬೇಡಿಕೆಯಿಟ್ಟು ನಡೆದ ಸಭೆಯಲ್ಲಿ ಸರ್ಕಾರ ನಮಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಚಿತ್ರ ಪ್ರದರ್ಶಿಸಲು ಪ್ರದರ್ಶಕರು ಬದ್ಧರಿದ್ದಾರೆ. ಸಭೆಯಲ್ಲಿ ಒಳ್ಳೆಯ ನಿರ್ಧಾರ ಹೊರಬಂದಿದ್ದು ಇದನ್ನು ವಾಣಿಜ್ಯ ಮಂಡಳಿ ಸ್ವಾಗತಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT