ಸೋಮವಾರ, ಏಪ್ರಿಲ್ 12, 2021
26 °C
ಕೆಲವೆಡೆ ಮಾತ್ರ ಕೋವಿಡ್ ಮಾರ್ಗಸೂಚಿ ಪಾಲನೆ, ನೆಗೆಟಿವ್ ವರದಿ ಕಡ್ಡಾಯ ಬಗ್ಗೆ ಜನರಲ್ಲಿ ಗೊಂದಲ

ಕೋವಿಡ್‌: ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಇಲ್ಲ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ, ಮಂಗಳೂರು, ಚಿಕ್ಕೋಡಿ: ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್‌ ಹಾವಳಿ ಹೆಚ್ಚುತ್ತಿದ್ದರೂ, ಕಲಬುರ್ಗಿ ಮತ್ತು ಮಂಗಳೂರಿನ ತಲಪಾಡಿ ಗಡಿಯಲ್ಲಿ ಆರಂಭಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ.

‘ಮಹಾರಾಷ್ಟ್ರದ ಗಡಿ ಮೂಲಕ ರಾಜ್ಯ ಪ್ರವೇಶ ಮಾಡುವವರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ. ಶೇ 50ರಷ್ಟು ಮಂದಿ ಮಾತ್ರ ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ ತರುತ್ತಿದ್ದಾರೆ. ಅನಿವಾರ್ಯ ಕಾರಣಗಳಿದ್ದರೆ, ಮುಂಜಾಗ್ರತಾ ಕ್ರಮ ಕೈಗೊಂಡು ಒಳಗೆ ಬಿಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು.

‘ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಈ ವರೆಗೂ ಕೋವಿಡ್‌ ತಪಾಸಣೆ ಮಾಡುವ ಅನಿವಾರ್ಯ ಬಂದಿಲ್ಲ. ಯಾರಿಗಾದರೂ ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ತಪಾಸಣೆ ಮಾಡಿಸಲಾಗುತ್ತಿದೆ. ಜ್ವರದ ಲಕ್ಷಣಗಳಿದ್ದರೆ ಮರಳಿ ಕಳುಹಿಸಿ ಹೋಂ ಕ್ವಾರಂಟೈನ್‌ ಆಗಲು ಸೂಚಿಸಲಾಗುತ್ತಿದೆ. ಅದರ ವರದಿಯನ್ನು ಮಹಾರಾಷ್ಟ್ರಕ್ಕೆ ನೀಡಲಾಗುತ್ತಿದೆ. ವೈದ್ಯಕೀಯ ತುರ್ತು, ನ್ಯಾಯಾಲಯ ಕೆಲಸಗಳಿಗೆ ಬರುವವರನ್ನು ಸ್ಕ್ರೀನಿಂಗ್‌ ಮಾಡಿ, ಲಕ್ಷಣ ಇಲ್ಲದಿದ್ದರೆ ಬಿಡಲಾಗುತ್ತಿದೆ. ಅವರು ಮರಳಿ ಹೋಗುವವರೆಗೂ ಪೂರ್ಣ ವಿವರ ಕಲೆ ಹಾಕಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಆಳಂದ ತಾಲ್ಲೂಕಿನ ಖಜೂರಿ, ಹಿರೊಳ್ಳಿ, ನಿಂಬಾಳ ಮೂಲಕ ರಾಜ್ಯ ಪ್ರವೇಶಿಸುವವರ ಸಂಖ್ಯೆ ಯಥಾಪ್ರಕಾರ ಇದ್ದರೆ, ಅಫಜಲಪುರ ತಾಲ್ಲೂಕಿನ ಬಳೂರ್ಗಿ, ಮಣ್ಣೂರ, ಅರ್ಜುಣಗಿ  ಮಾರ್ಗದ ಮೂಲಕ ಬರುವವರ ಸಂಖ್ಯೆ ಕಡಿಮೆಯಾಗಿದೆ.

ಬೀದರ್‌ ವರದಿ: ಲಾತೂರ್‌ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರದ ಬಸ್‌ಗಳು ಶನಿವಾರ ಜಿಲ್ಲೆಗೆ ಬರಲಿಲ್ಲ. ಔರಾದ್‌ ಸಾರಿಗೆ ಘಟಕದ ಒಂದು ಬಸ್‌ ಲಾತೂರ್‌ಗೆ ಹೋಗಿ ಬಂದಿದೆ. ಬೆರಳೆಣಿಕೆಯಷ್ಟು ಮಾತ್ರ ಪ್ರಯಾಣಿಕರು ಇದ್ದರು.

ಮಂಗಳೂರು ವರದಿ: ತಲಪಾಡಿಯ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಸಾಧ್ಯವಾಗಿಲ್ಲ. ಎರಡೂ ಬದಿಯಲ್ಲಿ ವಾಹನಗಳು ಎಂದಿನಂತೆಯೇ ಸಂಚಾರ ನಡೆಸುತ್ತಿವೆ. ಕೋವಿಡ್ ನಿಯಂತ್ರಣಕ್ಕಾಗಿ ಕೇರಳ– ಕರ್ನಾಟಕ ಗಡಿಗಳಲ್ಲಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅದರಂತೆ 13 ರಸ್ತೆಗಳ ಪೈಕಿ, ನಾಲ್ಕು ಕಡೆಗಳಲ್ಲಿ ಮಾತ್ರ ರಾಜ್ಯ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಈ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿದ್ದು, ತಪಾಸಣೆ ಕೇಂದ್ರವನ್ನೂ ಆರಂಭಿಸಲಾಗಿದೆ. ತಲಪಾಡಿಯ ಕೇಂದ್ರದಲ್ಲಿ ಸೋಮವಾರದಿಂದ ಇಲ್ಲಿಯವರೆಗೆ ಒಟ್ಟು 2,216 ಮಂದಿಯ ತಪಾಸಣೆ ನಡೆಸಲಾಗಿದ್ದು, 10 ಮಂದಿಗೆ ಕೋವಿಡ್–19 ದೃಢವಾಗಿದೆ. ಇವರೆಲ್ಲರೂ ಮಂಗಳೂರಿನಲ್ಲಿ ವ್ಯಾಸಂಗ ಮಾಡುವವರಾಗಿದ್ದಾರೆ.

ಗೊಂದಲ: ನಗರಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ನೀಡಿದ ಹೇಳಿಕೆಯಿಂದ ನೆಗೆಟಿವ್ ವರದಿ ಕಡ್ಡಾಯವೋ ಇಲ್ಲವೋ ಎಂಬುದರ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದೆ.

‘ನಿತ್ಯ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಬೇಡ. ಕೇರಳದಿಂದ ಬಂದು ಇಲ್ಲಿಯೇ ವಾಸಿಸುವವರಿಗೆ ಮಾತ್ರ ಕಡ್ಡಾಯ ಮಾಡಬೇಕು. ನಿತ್ಯ ಓಡಾಡುವವರ ಮೇಲೆ ಆರೋಗ್ಯ ಸೇತು ಆ್ಯಪ್‌ ಮೂಲಕ ನಿಗಾ ವಹಿಸಬೇಕು. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದರು.

ಚಿಕ್ಕೋಡಿ ವರದಿ: ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿಯ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ. ಆರ್‌ಟಿಪಿಸಿಆರ್‌ ಪ್ರಮಾಣಪತ್ರ ಇಲ್ಲದವರಿಗೆ ರಾಜ್ಯ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ.

ಇಲ್ಲಿನ ಟೋಲ್‌ ಪ್ಲಾಜಾದಲ್ಲಿ ಥರ್ಮಲ್‌ ಸ್ಕ್ಯಾನರ್‌ ಅಳವಡಿಸಲಾಗಿದ್ದು, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆಗೆ ಸೂಚನೆ ನೀಡಲಾಗುತ್ತಿದೆ. 3–4 ದಿನಗಳಿಂದ ಆರ್‌ಟಿಪಿಸಿಆರ್ ತಪಾಸಣಾ ಪ್ರಮಾಣಪತ್ರವನ್ನೂ ಕಡ್ಡಾಯಗೊಳಿಸಲಾಗಿದೆ. ಗಡಿಗ್ರಾಮಗಳಿಂದ ಮಹಾರಾಷ್ಟ್ರದ ವಿವಿಧೆಡೆ ದುಡಿಯಲು ಹೋಗುವ ಕಾರ್ಮಿಕರಿಗೂ ಆರೋಗ್ಯ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ.

'ಕೊಗನೊಳ್ಳಿ ಟೋಲ್ ಪ್ಲಾಜಾದಲ್ಲಿನ ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಪ್ರಯಾಣಿಕರ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. 72 ಗಂಟೆಯೊಳಗಾಗಿ ತಪಾಸಣೆ ಮಾಡಿಕೊಂಡಿರುವ ಆರ್‌ಟಿಪಿಸಿಆರ್ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ರಾಜ್ಯದೊಳಗೆ ಪ್ರವೇಶ ನೀಡಲಾಗುತ್ತಿದೆ.ಸರ್ಕಾರಿ ಬಸ್‍ಗಳಲ್ಲಿ ಟಿಕೆಟ್ ಬುಕ್ ಮಾಡುವ ಮುನ್ನವೇ ಪ್ರಯಾಣಿಕರ ಕೋವಿಡ್ ತಪಾಸಣೆ ಪ್ರಮಾಣ ಪತ್ರ ಪರಿಶೀಲಿಸುವಂತೆ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ' ಎಂದು ಚಿಕ್ಕೋಡಿಯ ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್‌. ಗಡೇದ ಹೇಳಿದರು.

ಮೈಸೂರು, ಕೊಡಗು ಗಡಿಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ

ಮೈಸೂರು: ಮೈಸೂರು ಹಾಗೂ ಕೊಡಗು ಜಿಲ್ಲೆಯ ಗಡಿಯಲ್ಲಿ ಕಟ್ಟಿನಿಟ್ಟಿನ ನಿರ್ಬಂಧ ಮುಂದುವರಿದಿದೆ. ಚಾಮರಾಜನಗರ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾತ್ರ ನಡೆಸಲಾಗುತ್ತಿದೆ.

ಎಚ್‌.ಡಿ. ಕೋಟೆ ತಾಲ್ಲೂಕಿನ ಬಾವಲಿ ಚೆಕ್‌ಪೋಸ್ಟ್‌ನಲ್ಲಿ, ಆರ್‌ಟಿಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಇದ್ದಲ್ಲಿ ಮಾತ್ರ ಕೇರಳದಿಂದ ಬರುತ್ತಿರುವವರಿಗೆ ಪ್ರವೇಶ ನೀಡಲಾಗುತ್ತಿದೆ. ವರದಿ ಇಲ್ಲದವರ ಗಂಟಲುದ್ರವ ಮಾದರಿಯನ್ನು ತೆಗೆದುಕೊಂಡು, ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.

ಮೂರು ದಿನಗಳಿಂದ 190 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ, ಆರ್‌ಟಿಪಿಸಿಆರ್‌ ಪರೀಕ್ಷೆಗೆ ಕಳುಹಿಸಿ ಅವರ ಮೊಬೈಲ್‌ ಸಂಖ್ಯೆಯನ್ನು ದಾಖಲಿಸಿಕೊಂಡು ಕಳುಹಿಸಲಾಗಿದೆ. ಕೋವಿಡ್ ಪಾಸಿಟಿವ್‌ ಇದ್ದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಗಂಟಲುದ್ರವವನ್ನು ನೀಡಲು ಒಪ್ಪದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಹೀಗಾಗಿ, ನಿತ್ಯ ಇಲ್ಲಿ ಜನರು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇದೆ’ ಎಂದು ಬಾವಲಿ ಗ್ರಾಮಸ್ಥರೊಬ್ಬರು ತಿಳಿಸಿದರು.

‘ಇಲ್ಲಿ ನಿತ್ಯ ಸುಮಾರು 200 ವಾಹನಗಳು ಸಂಚರಿಸುತ್ತವೆ. ಆರ್‌ಟಿಪಿಸಿಆರ್‌ ವರದಿ ನೆಗೆಟಿವ್ ಇದ್ದವರಿಗೆ ಮಾತ್ರ ಪ್ರವೇಶ ನೀಡಬೇಕು ಎಂಬ ಲಿಖಿತ ಆದೇಶ ಬಂದಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕೊಡಗು ಜಿಲ್ಲೆಯ ಕರಿಕೆ, ಮಾಕುಟ್ಟ ಗಡಿಯಲ್ಲಿ, ಕೋವಿಡ್‌ ನೆಗೆಟಿವ್‌ ವರದಿಯಿದ್ದರಷ್ಟೇ ಪ್ರವೇಶ ನೀಡಲಾಗುತ್ತಿದೆ. ಕುಟ್ಟ ಗಡಿಯಲ್ಲಿ ಮಾತ್ರ ಗಂಟಲು ದ್ರವ ಸಂಗ್ರಹಿಸಿ ರ್‍ಯಾಪಿಡ್‌ ಆಂಟಿಜನ್‌ ಕಿಟ್‌ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು