ಶನಿವಾರ, ಆಗಸ್ಟ್ 20, 2022
21 °C

ಕತ್ತು ಹಿಡಿದು ಎಳೆದಾಡಿದ್ದು ಕಾಂಗ್ರೆಸ್‌ ಸಂಸ್ಕೃತಿ ತೋರಿಸುತ್ತದೆ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಉಪ ಸಭಾಪತಿ ಅವರನ್ನು ಕತ್ತು ಹಿಡಿದು ಎಳೆದಾಡಿದ್ದು ದೇಶದಲ್ಲೇ ಮೊದಲು. ಇದು ಕಾಂಗ್ರೆಸ್‌ನವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಾಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್‌ನವರು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಬೆಂಬಲ ಇಲ್ಲದ ಮೇಲೆ, ಬಹುಮತ ಇಲ್ಲದ ಮೇಲೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಕಾಂಗ್ರೆಸ್‌ನವರ ಕರ್ತವ್ಯ. ಕಾನೂನಿನ ಚೌಕಟ್ಟಿನ ಪ್ರಕಾರ ಒಂದು ಬಾರಿ ನಿಮ್ಮ ಮೇಲೆ ಅವಿಶ್ವಾಸ ನಿರ್ಣಯ ಆದ ಬಳಿಕ ನಿಮಗೆ ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹತೆಯಿಲ್ಲ. ಇದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ’ ಎಂದರು.

‘ಸುಪ್ರೀಂಕೋರ್ಟ್ನಲ್ಲಿ ಈ ಬಗ್ಗೆ ಅನೇಕ ತೀರ್ಪಿಗಳು ಬಂದಿವೆ. ಪೀಠದಲ್ಲಿ ಉಪಸಭಾಪತಿ ಅವರನ್ನು ಕೂರಿಸುವುದಾಗಿ ಸೋಮವಾರವೇ ಬಹಿರಂಗವಾಗಿ ಹೇಳಿದ್ದೇವೆ. ಅವಿಶ್ವಾಸ ನಿರ್ಣಯ ಮಂಡನೆ ಆದ ಮೇಲೆ ಉಪಸಭಾಪತಿ ಅವರೇ ಮುಂದುವರೆಯುತ್ತಾರೆ. ಬೆಲ್ ಆದ ಮೇಲೆ ಬಂದರು ಎಂಬುದೆಲ್ಲ ಮುಖ್ಯವಲ್ಲ. ಬಹುಮತ ಇಲ್ಲ ಅನ್ನುವುದೇ ಮುಖ್ಯ. ಕಾಂಗ್ರೆಸ್‌ನವರು ಸಭಾಪತಿ ಅವರಿಗೆ ಹೇಳಿ ರಾಜೀನಾಮೆ ಬಿಸಾಕಲು ಹೇಳಿ’ ಎಂದೂ ಕಿಡಿಕಾರಿದರು.

‘ರಾಜ್ಯಪಾಲರ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಜೆಡಿಎಸ್ ಬಿಜೆಪಿಯ ಪರಿಷತ್ ಸದಸ್ಯರು ಮನವಿ ಕೊಡುತ್ತಾರೆ. ಇಲ್ಲಿ ನಡೆದ ಪ್ರತಿಯೊಂದು ಘಟನೆಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಲಿದ್ದಾರೆ’ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು