ಸೋಮವಾರ, ಆಗಸ್ಟ್ 15, 2022
20 °C

ಅಧಿಕಾರ ಹಿಡಿಯಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೆಟ್ಟಿಲು: ಸುರ್ಜೇವಾಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ ನಿಷ್ಠಾವಂತ ಕಾರ್ಯಕರ್ತರ ಪಡೆ ಕಟ್ಟಲು ಮತ್ತು ಆ ಮೂಲಕ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಗ್ರಾಮ ಪಂಚಾಯತಿ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅತ್ಯಂತ ಮುಖ್ಯವಾದುದು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷದ ಗುರುತಿನ ಮೇಲೆ ನಡೆಯುವ ಚುನಾವಣೆಯಲ್ಲ. ಆದರೂ, ಪಕ್ಷದ ಸಿದ್ಧಾಂತಗಳಿಗೆ ಗೌರವ ನೀಡುವವರನ್ನು ಆರಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಈ ಚುನಾವಣೆಯ ಬಳಿಕ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಎದುರಾಗಲಿದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಸಿದ್ದಾಂತಕ್ಕೆ ಬದ್ದರಾಗಿರುವವರನ್ನು ಗೆಲ್ಲಿಸಬೇಕು. ಗೆದ್ದವರು ಪಕ್ಷದ ಹಿರಿಯ ನಾಯಕರ ಜೊತೆ ಬೆರೆತು ಕಲಿಯುವಂತಾಗಬೇಕು’ ಎಂದರು.

‘ಜನಬೆಂಬಲವಿಲ್ಲದ ಅಸಮರ್ಥ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಜನಾದೇಶ ಧಿಕ್ಕರಿಸಿ ಭ್ರಷ್ಟಾಚಾರ, ಅಕ್ರಮದ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆ. ಈ ಸರ್ಕಾರ ಅಸ್ತಿತ್ವದಲ್ಲಿರುವಷ್ಟೂ ದಿನ, ಆದಷ್ಟು ಹಣ ಮಾಡುವುದಷ್ಟೇ ಯಡಿಯೂರಪ್ಪನವರ ಉದ್ದೇಶ. ಆದರೆ, ಈ ರೀತಿಯ ಅಸ್ಥಿರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ’ ಎಂದೂ ಸುರ್ಜೇವಾಲಾ ಅಭಿಪ್ರಾಯಪಟ್ಟರು.

"ಶೀಘ್ರದಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಲಿದ್ದು, ಸರ್ಕಾರ ತಾನಾಗಿಯೇ ಪತನವಾಗಲಿದೆ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ವೈಯಕ್ತಿಕ ಹಿತಾಸಕ್ತಿಗಳನ್ನು ಪಕ್ಕಕ್ಕಿಡಬೇಕು. ಇದು ಸಾಧ್ಯವಾದರೆ ಆರು ತಿಂಗಳಲ್ಲೇ ಅಧಿಕಾರಕ್ಕೆ ಬಂದು, ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಲು ಸಾಧ್ಯ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅನ್ನದಾತರ ಜೊತೆ ಕಾಂಗ್ರೆಸ್‌: ‘ಡಿ. 8ರಂದು ನಡೆಯಲಿರುವ ಭಾರತ್ ಬಂದ್‌ನಲ್ಲಿ ಅನ್ನದಾತರ ಜೊತೆಗೆ ಪಕ್ಷ ನಿಲ್ಲಲಿದೆ. ‘ಅನ್ನ ನೀಡುತ್ತಿರುವ ರೈತನ’ ಕೂಗು ಅಧಿಕಾರದ ದುರಹಂಕಾರದಲ್ಲಿ ತೇಲುತ್ತಿರುವ ಬಿಜೆಪಿ ಸರ್ಕಾರಕ್ಕೆ ಕೇಳುತ್ತಿಲ್ಲ. ದೇಶದಲ್ಲಿ ಮೋದಿಯ ಅಹಂಕಾರ ಮತ್ತು ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ದುರಾಡಳಿತದ ವಿರುದ್ದ ಕಾಂಗ್ರೆಸ್ ಕಂಕಣ ತೊಟ್ಟು ಹೋರಾಡಲಿದೆ’ ಎಂದೂ ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಸ್ಥಳೀಯ ಚುನಾವಣೆಗಳಲ್ಲಿ ಎಲ್ಲರೂ ಕೆಲಸ ಮಾಡಬೇಕು. ಕೆಲಸ ಮಾಡದಿದ್ದರೆ ಪದಾಧಿಕಾರಿಗಳಾಗಿ ಮುಂದುವರಿಸುವುದಿಲ್ಲ. ಈ ಬಗ್ಗೆ ಎಐಸಿಸಿಯಿಂದ ಸ್ಪಷ್ಟ ನಿರ್ದೇಶನ ಬಂದಿದೆ’ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು