ಬುಧವಾರ, ಆಗಸ್ಟ್ 17, 2022
28 °C
ಶೌಚಾಲಯದಲ್ಲಿ ಮೊಬೈಲ್ ಬಚ್ಚಿಟ್ಟು ಚಿತ್ರೀಕರಿಸುತ್ತಿದ್ದ ಆರೋಪಿ ಬಂಧನ * ಪ್ರಿಯಕರನಿಗಾಗಿ ಕೃತ್ಯ ಎಸಗುತ್ತಿದ್ದ ಯುವತಿ

ನರ್ಸ್‌ ಮೊಬೈಲ್‌ನಲ್ಲಿ ನಾಲ್ವರು ಯುವತಿಯರ ಅರೆನಗ್ನ ವಿಡಿಯೊ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾವು ವಾಸವಿದ್ದ ವಸತಿಗೃಹದ ಶೌಚಾಲಯದಲ್ಲಿ ಮೊಬೈಲ್‌ ಬಚ್ಚಿಟ್ಟು, ಅದರ ಕ್ಯಾಮೆರಾದಿಂದ ಸಹೋದ್ಯೋಗಿಗಳ ಅರೆನಗ್ನ ವಿಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಆರೋಪದಡಿ ನರ್ಸ್ ಅಶ್ವಿನಿ ಎಂಬುವರನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಅಶ್ವಿನಿ ಕೆಲಸ ಮಾಡುತ್ತಿದ್ದರು. ಅವರು ಉಳಿದುಕೊಳ್ಳಲು ಆಸ್ಪತ್ರೆಯವರು ವಸತಿಗೃಹದಲ್ಲಿ ಕೊಠಡಿ ನೀಡಿದ್ದರು. ಅವರ ಜೊತೆಯಲ್ಲಿ ಸಹೋದ್ಯೋಗಿಗಳು ಇದ್ದರು. ಅದೇ ಕೊಠಡಿ ಶೌಚಾಲಯದಲ್ಲಿ ಆರೋಪಿ, ಮೊಬೈಲ್‌ ಕ್ಯಾಮೆರಾ ಇಟ್ಟು ಕೃತ್ಯ ಎಸಗುತ್ತಿದ್ದರು’ ಎಂದು ವೈಟ್‌ಫೀಲ್ಡ್ ಉಪವಿಭಾಗದ ಡಿಸಿಪಿ ದೇವರಾಜ್ ಹೇಳಿದರು.

‘ನರ್ಸ್ ಅಶ್ವಿನಿ ಅವರಿಗೆ ಸ್ನೇಹಿತರೊಬ್ಬರು ಇದ್ದು, ಅವರಿಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಗೊತ್ತಾಗಿದೆ. ಅದೇ ಪ್ರಿಯಕರ, ಅಶ್ವಿನಿ ಅವರ ಜೊತೆ ಸಲುಗೆ ಹೊಂದಿದ್ದರು. ಸಹೋದ್ಯೋಗಿಗಳ ಅರೆನಗ್ನ ವಿಡಿಯೊಗಳನ್ನು ಚಿತ್ರೀಕರಿಸಿ ಕಳುಹಿಸುವಂತೆ ಹೇಳುತ್ತಿದ್ದರು. ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ವಿಡಿಯೊಗಳನ್ನು ಆರೋಪಿ, ಪ್ರಿಯಕರನಿಗೆ ಕಳುಹಿಸಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಪ್ರಿಯಕರ ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ಆಸ್ಪತ್ರೆ ತನಿಖೆಯಿಂದ ಬಹಿರಂಗ: ‘ಡಿ. 5ರಂದು ಸಂಜೆ ನರ್ಸ್‌ರೊಬ್ಬರು ಶೌಚಾಲಯಕ್ಕೆ ಹೋಗಿದ್ದರು. ಅವರಿಗೆ ಮೊಬೈಲ್‌ ಕ್ಯಾಮೆರಾ ಕಂಡಿತ್ತು. ಗಾಬರಿಗೊಂಡಿದ್ದ  ನರ್ಸ್. ವಸತಿಗೃಹದ ಮೇಲ್ವಿಚಾರಕರಿಗೆ ದೂರು ನೀಡಿದ್ದರು. ವಿಷಯ ತಿಳಿದ ಆಸ್ಪತ್ರೆ ಆಡಳಿತ ಮಂಡಳಿ, ಆಂತರಿಕ ತನಿಖೆ ನಡೆಸಿತ್ತು. ಅಶ್ವಿನಿ ಅವರೇ ಮೊಬೈಲ್ ಕ್ಯಾಮೆರಾ ಬಚ್ಚಿಟ್ಟು ಚಿತ್ರೀಕರಿಸಿದ್ದು ತನಿಖೆಯಿಂದ ಗೊತ್ತಾಗಿತ್ತು’ ಎಂದೂ ಪೊಲೀಸರು ಹೇಳಿದರು.

’ಆಂತರಿಕ ತನಿಖಾ ವರದಿ ಸಮೇತ ವಸತಿಗೃಹದ ಮೇಲ್ವಿಚಾರಕರು ಠಾಣೆಗೆ ದೂರು ನೀಡಿದ್ದರು. ಅಶ್ವಿನಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದೂ ತಿಳಿಸಿದರು.

ನಾಲ್ವರ ವಿಡಿಯೊ ಪತ್ತೆ

‘ಆರೋಪಿ ಮೊಬೈಲ್‌ ಪರಿಶೀಲನೆ ನಡೆಸಲಾಗಿದೆ. ನಾಲ್ವರು ಸಹೋದ್ಯೋಗಿಗಳ ಅರೆನಗ್ನ ವಿಡಿಯೊಗಳು ಮೊಬೈಲ್‌ನಲ್ಲಿ ಪತ್ತೆಯಾಗಿವೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಲಾಗಿದ್ದು, ಅದರ ವರದಿ ಬರಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಶೌಚಾಲಯದಲ್ಲಿ ಮೊಬೈಲ್‌ ಕ್ಯಾಮೆರಾ ಬಚ್ಚಿಟ್ಟು ಚಿತ್ರೀಕರಣ ಮಾಡುವಂತೆ ಪ್ರಿಯಕರ ಹೇಳಿದ್ದ. ಚಿತ್ರೀಕರಿಸಿದ್ದ ಎಲ್ಲ ವಿಡಿಯೊಗಳನ್ನು ಅವರಿಗೆ ಕಳುಹಿಸುತ್ತಿದ್ದೆ. ಅದನ್ನು ಅವರು ಯಾವ ಉದ್ದೇಶಕ್ಕೆ ಬಳಸುತ್ತಿದ್ದರು ಎಂಬುದು ನನಗೆ ಗೊತ್ತಿಲ್ಲ’ ಎಂದು ಆರೋಪಿ ಅಶ್ವಿನಿ ಹೇಳಿಕೆ ನೀಡಿರುವುಗಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು