ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ ಪ್ರವಾಸೋದ್ಯಮ ಹೂಡಿಕೆ ಸಮಾವೇಶ: ಸಚಿವ ಆನಂದ್‌ ಸಿಂಗ್‌

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌
Last Updated 27 ಸೆಪ್ಟೆಂಬರ್ 2021, 16:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಬಂಡವಾಳ ಆಕರ್ಷಿಸುವುದಕ್ಕಾಗಿ 2022ರ ಫೆಬ್ರುವರಿ 23ರಿಂದ 25ರವರೆಗೆ ಪ್ರವಾಸೋದ್ಯಮ ಹೂಡಿಕೆದಾರರ ಸಮ್ಮೇಳನ ಆಯೋಜಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಸೋಮವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಸಹಯೋಗದಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಕರ್ನಾಟಕ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಎಕ್ಸ್‌ಪೋ (ಕೈಟ್‌) ಆಯೋಜಿಸಲಾಗುವುದು. ಮೂರು ದಿನಗಳ ಕಾಲ ನಡೆಯುವ ಹೂಡಿಕೆದಾರರ ಸಮ್ಮೇಳನದಲ್ಲಿ ದೊಡ್ಡ ಮೊತ್ತದ ಹೂಡಿಕೆ ಒಪ್ಪಂದಗಳನ್ನು ನಿರೀಕ್ಷಿಸಲಾಗಿದೆ’ ಎಂದರು.

ಕೋವಿಡ್‌ನಿಂದಾಗಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವೂ ತೊಂದರೆಗೆ ಸಿಲುಕಿದೆ. ಸುಮಾರು ₹ 25,000 ಕೋಟಿಯಷ್ಟು ನಷ್ಟ ಉಂಟಾಗಿದೆ. ಈಗ ಈ ಕ್ಷೇತ್ರವನ್ನು ಸಮಸ್ಯೆಗಳಿಂದ ಹೊರತರುವ ಕೆಲಸ ಆಗಬೇಕಿದೆ. ಹೆಚ್ಚಿನ ಹೂಡಿಕೆ ಹರಿದುಬಂದರೆ ಬದಲಾವಣೆ ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ಹೂಡಿಕೆದಾರರ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ನೀತಿ 2020–2026ರ ಅಡಿಯಲ್ಲಿ ಹಲವು ರೀತಿಯ ಸಹಾಯಧನ, ಪ್ರೋತ್ಸಾಹಧನ ಮತ್ತು ರಿಯಾಯ್ತಿಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯಗಳಿಗಾಗಿ ₹ 500 ಕೋಟಿ ಅನುದಾನ ಮೀಸಲಿಡಲಾಗಿದೆ. ಪ್ರವಾಸೋದ್ಯಮ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಈ ಅವಕಾಶವನ್ನು ಜನರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಪ್ರವಾಸೋದ್ಯಮ ಕ್ಷೇತ್ರವು ಅಗಾಧವಾದ ಉದ್ಯೋಗ ಸೃಷ್ಟಿಯ ಅವಕಾಶಗಳನ್ನು ಹೊಂದಿದೆ. ಆದರೆ, ಕೋವಿಡ್‌ ಲಾಕ್‌ಡೌನ್‌ನಿಂದ ಈ ಕ್ಷೇತ್ರದಲ್ಲೂ ಉದ್ಯೋಗ ನಷ್ಟವಾಗಿದೆ. 2026ರ ವೇಳೆಗೆ ಈ ಕ್ಷೇತ್ರಕ್ಕೆ ₹ 5,000 ಕೋಟಿಯಷ್ಟು ಹೂಡಿಕೆ ನಿರೀಕ್ಷಿಸಲಾಗಿದೆ. ಇದರಿಂದ 10 ಲಕ್ಷಗಳಷ್ಟು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಆನಂದ್‌ ಸಿಂಗ್‌ ಹೇಳಿದರು.

ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಅಧ್ಯಕ್ಷ ಅಪ್ಪಣ್ಣ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ದಲಿಂಗ ಸ್ವಾಮಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಶಾರದಾ ಸಂಪತ್‌, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಅಧ್ಯಕ್ಷ ಶಾಮರಾಜು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧೂ ಬಿ. ರೂಪೇಶ್‌, ಜಂಗಲ್‌ ಲಾಡ್ಜಸ್‌ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಉಪಸ್ಥಿತರಿದ್ದರು.

ಚಿತ್ರೀಕರಣಕ್ಕೆ ಅನುಮತಿ ನೀಡಲು ಚಿಂತನೆ

ಪ್ರವಾಸಿ ತಾಣಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲು ಚಿಂತನೆ ನಡೆದಿದೆ. ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಅರಣ್ಯ ಇಲಾಖೆಗಳ ಅಧೀನದ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲು ಏಕ ಗವಾಕ್ಷಿ ವ್ಯವಸ್ಥೆ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

‘ಚಿತ್ರೀಕರಣಕ್ಕೆ ಅನುಮತಿ ನೀಡುವ ವಿಷಯದಲ್ಲಿ ಕೆಲವು ನಿರ್ಬಂಧಗಳಿವೆ. ಅವುಗಳನ್ನು ಸಡಿಲಿಕೆ ಮಾಡಲಾಗುವುದು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT