ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಗೆ ಒಪ್ಪದ ಸಾರಿಗೆ ನೌಕರರು: 21ರಿಂದ ಮುಷ್ಕರ

Last Updated 16 ಮಾರ್ಚ್ 2023, 23:49 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ವೇತನವನ್ನು ಶೇ 15ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಇದಕ್ಕೆ ಸಹಮತ ವ್ಯಕ್ತಪಡಿಸದ ಸಾರಿಗೆ ನೌಕರರ ಸಂಘಟನೆಗಳು ಮಾರ್ಚ್ 21ರಿಂದ ಮುಷ್ಕರ ಆರಂಭಿಸಲು ನಿರ್ಧರಿಸಿವೆ.

ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ನಾಲ್ಕೂ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯವ್ಯ ಕರ್ನಾಟಕ ಸಾರಿಗೆ) ವ್ಯವಸ್ಥಾಪಕ ನಿರ್ದೇಶಕರು ಬುಧವಾರ ಸಭೆ ನಡೆಸಿದ್ದರು. ಶೇ 14ರಷ್ಟು ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಸಂಘಟನೆಗಳ ಮುಖಂಡರು ಒಪ್ಪದಿದ್ದರಿಂದ ಸಂಧಾನ ಮುರಿದುಬಿದ್ದಿತ್ತು.

ಗುರುವಾರ ಬೆಳಿಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಶೇ 15ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಆದೇಶವನ್ನು ಗುರುವಾರವೇ ಹೊರಡಿಸಲಾಗುವುದು’ ಎಂದು ತಿಳಿಸಿದರು.

ಮುಖ್ಯಮಂತ್ರಿ ಅಥವಾ ಸಾರಿಗೆ ಸಚಿವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಲಿದೆ ಎಂದು ನಿರೀಕ್ಷಿಸಿದ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ.

‘ಮೂಲ ವೇತನದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಅದು ಸಾಧ್ಯವಾಗದಿದ್ದರೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು. ನಮ್ಮ ಬೇಡಿಕೆಗಳನ್ನು ಪರಿಗಣಿಸದೆ ಸರ್ಕಾರ ಏಕಪಕ್ಷೀಯವಾಗಿ ಶೇ 15ರಷ್ಟು ವೇತನ ಹೆಚ್ಚಳದ ನಿರ್ಧಾರ ಕೈಗೊಂಡಿದ್ದು, ಅದನ್ನು ನಾವು ಒಪ್ಪುವುದಿಲ್ಲ. ಮಾರ್ಚ್‌ 21ರಿಂದ ಮುಷ್ಕರ ಆರಂಭಿಸುವ ನಿರ್ಧಾರ ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಷ್ಕರ ಸಿದ್ಧತಾ ಸಮಾವೇಶ ಇಂದು: ‘ಮುಖ್ಯಮಂತ್ರಿ ಅವರು ಸಂಧಾನಕ್ಕೆ ಆಹ್ವಾನಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಏಕಪಕ್ಷೀಯವಾಗಿ ಶೇ 15ರಷ್ಟು ವೇತನ ಹೆಚ್ಚಳ ಘೋಷಣೆ ಮಾಡಿದ್ದಾರೆ. ಇದು ನೌಕರರ ಸಂಘಟನೆಗಳಿಗೆ ಸರ್ಕಾರ ಮಾಡಿದ ಅವಮಾನ’ ಎಂದು ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತಸುಬ್ಬರಾವ್ ಹೇಳಿದರು.

‘ಮೂಲ ವೇತನಕ್ಕೆ ಡಿ.ಎ ವಿಲೀನಗೊಳಿಸಿ ಪರಿಷ್ಕೃತ ವೇತನ ನೀಡಬೇಕು. ಬಳಿಕ ಆ ಮೂಲ ವೇತನದಲ್ಲಿ ಶೇ 25ರಷ್ಟನ್ನು ಹೆಚ್ಚಳ ಮಾಡುವ ಒಪ್ಪಂದ ಆಗಬೇಕು. ಬಾಟಾ ಸೇರಿ ಇತರ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು. ವಜಾಗೊಂಡ ನೌಕರರನ್ನು ಬೇಷರತ್ತಾಗಿ ಮರು ನೇಮಕ ಮಾಡಿಕೊಳ್ಳಬೇಕು. ಮುಷ್ಕರ ಸಂದರ್ಭದಲ್ಲಿ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇವುಗಳ ಬಗ್ಗೆ ಯಾವುದೇ ಚರ್ಚೆ ಮಾಡದೆ ಸರ್ಕಾರ ಕೈಗೊಳ್ಳುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಮುಷ್ಕರ ನಡೆಸುವ ನಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ರೂಪುರೇಷೆ ಸಿದ್ಧಪಡಿಸಲು ಶುಕ್ರವಾರ ಮಧ್ಯಾಹ್ನ ಸಿದ್ಧತಾ ಸಮಾವೇಶ ಕೂಡ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT