ಭಾನುವಾರ, ಏಪ್ರಿಲ್ 18, 2021
23 °C

ಸಾರಿಗೆ ನೌಕರರ ಪ್ರತಿಭಟನೆ: 6ನೇ ವೇತನ ಆಯೋಗದ ವರದಿ ಜಾರಿ ಇಲ್ಲ -ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ನೀಡಲು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಮುತ್ನಾಳದಲ್ಲಿ ಕೇದಾರೇಶ್ವರ ಶಾಖಾ ಮಠಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಆ ನೌಕರರ 9 ಬೇಡಿಕೆಗಳಲ್ಲಿ ಎಂಟನ್ನು ಈಡೇರಿಸಿದ್ದೇವೆ. ಕೋವಿಡ್‌ ಆರ್ಥಿಕ ಸಂಕಷ್ಟದಲ್ಲೂ ಸಂಬಳ ನೀಡಿದ್ದೇವೆ. ವೇತನಕ್ಕಾಗಿಯೇ ₹ 1,200 ಕೋಟಿಯನ್ನು ಸಾರಿಗೆ ಇಲಾಖೆಗೆ ಕೊಟ್ಟಿದ್ದೇವೆ. ಇಷ್ಟಾದ ಮೇಲೂ ಹಟ ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಹಟ ಬಿಡಿ’ ಎಂದು ಕೋರಿದರು.

‘ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಖಾಸಗಿ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ. ಆ ನೌಕರರು ಮುಷ್ಕರ ವಾಪಸ್ ಪಡೆದು ಚರ್ಚೆಗೆ ಬರಲಿ’ ಎಂದರು.

‘ಶೇ 8ರಷ್ಟು ವೇತನ ಹೆಚ್ಚಳಕ್ಕೆ ಯೋಜಿಸಿದ್ದು, ಅದನ್ನು ಕೊಡುತ್ತೇವೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ವಾಪಸ್ ಪಡೆಯುತ್ತಾರೆಯೇ ಕಾದು ನೋಡುತ್ತೇವೆ. ದುರುದ್ದೇಶ ಮತ್ತು ಉದ್ದೇಶಪೂರ್ವಕವಾಗಿ ಮುಷ್ಕರ ನಡೆಸುತ್ತಿದ್ದಾರೆ. ಇದು ಸರಿಯಲ್ಲ’ ಎಂದರು.

‘ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಹಣದ ಹೊಳೆ ಹರಿಸುತ್ತಿದ್ದಾರೆ’ ಎಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಸೋಲು ನಿಶ್ಚಯ ಆಗಿರುವುದರಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಕಾರು ತಪಾಸಣೆ: ಉಪ ಚುನಾವಣೆ ಪ್ರಚಾರಕ್ಕೆ ಬಂದ ಅವರು ಪ್ರಯಾಣಿಸುತ್ತಿದ್ದ ಕಾರನ್ನು ತಾಲ್ಲೂಕಿನ ಹಿರೇಬಾಗೇವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು