ಸೋಮವಾರ, ಡಿಸೆಂಬರ್ 5, 2022
21 °C

ಪೊಲೀಸ್ ನೇಮಕ: ವಯೋಮಿತಿ ಸಡಿಲಿಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಪೊಲೀಸರ ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಹೇಳಿದರು.

ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೊಲೀಸರ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಮಾಡುವಂತೆ ಸಾಕಷ್ಟು ಒತ್ತಡಗಳು ಬಂದಿವೆ. ಪೊಲೀಸ್ ಇಲಾಖೆಯಲ್ಲಿ ಯುವ ಶಕ್ತಿ ಇರಬೇಕು ಎಂಬುದು ನನ್ನ ಆಶಯ. ಆದರೆ ಒತ್ತಡಗಳು ಹೆಚ್ಚಾಗುತ್ತಿವೆ’ ಎಂದರು.

ಒತ್ತಡಗಳು ಬಂದ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಒಂದು ತಿಂಗಳು ಕಾಲ ಮುಂದೂಡಲಾಗಿದೆ. ಎರಡು ವರ್ಷ ಸಡಿಲಿಕೆ ಮಾಡುವ ಆಲೋಚನೆ ಇದೆ. ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಚಿವರ ಕಾಲಿಗೆ: ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ನೂರಾರು ಯುವಕರು ಸಚಿವ ಆರಗ ಜ್ಞಾನೇಂದ್ರ ಕಾಲಿಗೆ ಬಿದ್ದು, ಕಣ್ಣೀರಿಟ್ಟು ವಯೋಮಿತಿ ಸಡಿಲಿಸುವಂತೆ ಕೇಳಿಕೊಂಡರು.

ಕೋವಿಡ್ ಹಾಗೂ ಇತರ ಕಾರಣಗಳಿಂದಾಗಿ ಪೊಲೀಸರ ನೇಮಕಾತಿ ನಡೆದಿಲ್ಲ. ಈಗ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿದ್ದು, ವಯೋಮಿತಿ ಸಡಿಲಿಸದಿದ್ದರೆ ಸಾಕಷ್ಟು ಮಂದಿಗೆ ಉದ್ಯೋಗ ಸಿಗುವುದಿಲ್ಲ. ಒಂದು ಬಾರಿಯಾದರೂ ಅವಕಾಶ ಮಾಡಿಕೊಡಬೇಕು ಎಂದು ಯುವಕ, ಯುವತಿಯರು ಪರಿಪರಿಯಾಗಿ ಬೇಡಿಕೊಂಡರು.

ಕನ್ನಡ ರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಸಚಿವರ ಬಳಿಗೆ ಹೋಗಲು ಮನವಿ ಹೊತ್ತು ಬಂದಿದ್ದವರನ್ನು ಬಿಡದೆ ಪೊಲೀಸರು ತಡೆದರು. ಮುನ್ನುಗ್ಗಲು ಯತ್ನಿಸಿದಾಗ ಲಾಠಿ ರುಚಿ ತೋರಿಸಿದರು. ಕೊನೆಗೂ ಹರಸಾಹಸ ಮಾಡಿ ಸಚಿವರನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು