ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ರಿಂದ ತುಂಗಭದ್ರಾ ಪುಷ್ಕರ: ಮಂತ್ರಾಲಯ ಶ್ರೀ

Last Updated 5 ನವೆಂಬರ್ 2020, 11:44 IST
ಅಕ್ಷರ ಗಾತ್ರ

ರಾಯಚೂರು: ‘ನವೆಂಬರ್‌ 20 ರಿಂದ ಡಿಸೆಂಬರ್‌ 1 ರವರೆಗೂ ತುಂಗಭದ್ರಾ ನದಿ ಪುಷ್ಕರ ಮೇಳ ನಡೆಯಲಿದ್ದು, ಇದಕ್ಕಾಗಿ ಮಂತ್ರಾಲಯದಲ್ಲಿ ಭಕ್ತರ ಅನುಕೂಲಕ್ಕಾಗಿ ಸ್ನಾನಘಟ್ಟಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಮಠದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಮಕರ ರಾಶಿಯಲ್ಲಿ ಗುರುಗ್ರಹ (ಬೃಹಸ್ಪತಿ) ಪ್ರವೇಶಿಸಿದಾಗ ತುಂಗಭದ್ರಾ ನದಿ ಪುಷ್ಕರ ಪುಣ್ಯಕಾಲ ಶುರುವಾಗುತ್ತದೆ. ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೂ 25 ಸಾವಿರ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಎಲ್ಲರಿಗೂ ಅನ್ನಪ್ರಸಾದ, ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಭಕ್ತರು ತಂಗುವುದಕ್ಕೆ ಮಠದ ವಸತಿಗೃಹಗಳನ್ನು ಸಿದ್ಧಗೊಳಿಸಲಾಗಿದೆ’ ಎಂದು ತಿಳಿಸಿದರು.

‘ಕೊರೊನಾ ಮಹಾಮಾರಿ ಇರುವುದರಿಂದ ಭಕ್ತರು ಭೀತಿಗೊಳಗಾಗುವ ಅಗತ್ಯವಿಲ್ಲ; ಆದರೆ ವೈಯಕ್ತಿಕ ಎಚ್ಚರಿಕೆ ಅಗತ್ಯ. ಮಾಸ್ಕ್‌ ಧರಿಸುವುದು, ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಜೇಷನ್‌ ಕಡ್ಡಾಯ. ನದಿಪಾತ್ರದ ಜನದಟ್ಟಣೆ ನಿಯಂತ್ರಿಸುವ ಕೆಲಸವನ್ನು ಆಂಧ್ರಪ್ರದೇಶ ಪೊಲೀಸರು ಮಾಡಲಿದ್ದಾರೆ. ಮಠದ ಪ್ರಾಂಗಣದಲ್ಲಿ ಭಕ್ತರದಟ್ಟಣೆ, ಸ್ಯಾನಿಟೈಜೇಷನ್‌ ವ್ಯವಸ್ಥೆಯನ್ನು ಮಠದಿಂದ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ಮಠಕ್ಕೆ ₹67 ಕೋಟಿ ಆದಾಯ ನಷ್ಟವಾಗಿದೆ. ಈಚೆಗೆ ಮತ್ತೆ ಮಠಕ್ಕೆ ಭಕ್ತರಿಂದ ದೇಣಿಗೆ ಹರಿದು ಬರುತ್ತಿದೆ. ಮಠವು ಭಕ್ತರಿಂದ ಭಕ್ತರಿಗಾಗಿ ಇರುವುದರಿಂದ ಸರ್ಕಾರಗಳಿಂದ ಆರ್ಥಿಕ ನೆರವು ಕೇಳುವುದಿಲ್ಲ. ಆಂಧ್ರಪ್ರದೇಶ ಸರ್ಕಾರದ ನಿರ್ದೇಶನದಂತೆ ಮಠದ ಉದ್ಯೋಗಿಗಳ ವೇತನದಲ್ಲಿ ಶೇ 30 ರವರೆಗೂ ಕಡಿತಗೊಳಿಸಲಾಗಿತ್ತು. ಅಕ್ಟೋಬರ್‌ನಿಂದ ವೇತನ ಏರಿಕೆ ಮಾಡಿದ್ದು, ಬಾಕಿವೇತನ ಕೂಡಾ ನೀಡಲಾಗುವುದು. ‘ಡಿ’ ದರ್ಜೆಯ 600 ಸಿಬ್ಬಂದಿ ವೇತನ ಕಡಿತಗೊಳಿಸಿಲ್ಲ. ಈ ತಿಂಗಳಿಂದ ಶೇ 35 ರವರೆಗೂ ವೇತನ ಹೆಚ್ಚಿಸಲಾಗುತ್ತಿದೆ’ ಎಂದು ತಿಳಿಸಿದರು.

ಶಾಲೆ ಆರಂಭಿಸಬೇಡಿ: ‘ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಸಿದರೂ ಪಾಲನೆ ಕಷ್ಟ. ಪೂರ್ಣಪ್ರಮಾಣದ ಜಾಗೃತಿ ಬರುವುದಿಲ್ಲ. ಶಾಲೆಗೆ ಒಮ್ಮೆಲೆ ಕಳುಹಿಸಿದಾಗ, ನೂಕುನುಗ್ಗಲು ಉಂಟಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೊರೊನಾ ಮಹಾಮಾರಿ ಇನ್ನೂ ತೊಲಗಿಲ್ಲ. ಹೀಗಾಗಿ ಸದ್ಯಕ್ಕೆ ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರದವರು ಮುಂದಕ್ಕೆ ಹಾಕುವುದು ಒಳಿತು ಎನ್ನುವುದು ನನ್ನ ಅಭಿಪ್ರಾಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT