ಬುಧವಾರ, ಸೆಪ್ಟೆಂಬರ್ 23, 2020
26 °C
ನಿತ್ಯ ಹರಿದು ಬರುತ್ತಿದೆ 8 ಟಿಎಂಸಿ ನೀರು

ತುಂಗಭದ್ರೆಗೆ 1 ಲಕ್ಷ ಕ್ಯುಸೆಕ್‌ ನೀರು, ಒಂದೇ ದಿನ ಮೂರುವರೆ ಅಡಿ ನೀರು ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕವಾಗಿದ್ದು, ಕಳೆದ 24 ಗಂಟೆಗಳಲ್ಲಿ ಜಲಾಶಯಕ್ಕೆ ಮೂರುವರೆ ಅಡಿ ನೀರು ಹರಿದು ಬಂದಿದೆ.

ಎರಡು ದಿನಗಳಿಂದ ನಿತ್ಯ ಸರಾಸರಿ ಎಂಟು ಟಿಎಂಸಿ ಅಡಿ ನೀರು ಜಲಾಶಯಕ್ಕೆ ಬರುತ್ತಿದೆ. 1,633 ಅಡಿ (133 ಟಿಎಂಸಿ ) ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ 1,618.60 ಅಡಿ (54.52 ಟಿಎಂಸಿ) ನೀರಿನ ಸಂಗ್ರಹವಿದೆ.  1,01,002 ಕ್ಯುಸೆಕ್‌ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. 8,629 ಕ್ಯುಸೆಕ್‌ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ.

ಶುಕ್ರವಾರ 1,615.35 ಅಡಿ (46.56 ಟಿಎಂಸಿ ಅಡಿ) ನೀರಿನ ಸಂಗ್ರಹವಿದ್ದರೆ, 81,218 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಗುರುವಾರ 17,858 ಕ್ಯುಸೆಕ್‌ನಷ್ಟು ಒಳಹರಿವು ಇತ್ತು.

‘ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಅಪಾರ ಮಳೆಯಾಗುತ್ತಿದೆ. ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅದಕ್ಕೆ ಅಪಾರ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದೆ. ದಿನೇ ದಿನೇ ಒಳಹರಿವು ಹೆಚ್ಚಾಗಲು ಇದೇ ಮುಖ್ಯ ಕಾರಣ.

ಬರುವ ದಿನಗಳಲ್ಲಿ ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿದೆ. ಈಗಿನಷ್ಟೇ ನಿತ್ಯ ನೀರು ಹರಿದು ಬಂದರೆ ಇನ್ನೊಂದು ವಾರದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಬಹುದು. ಆಗ ನದಿಗೆ ನೀರು ಹರಿಸಬೇಕಾಗಬಹುದು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ: ತುಂಗಾ ಜಲಾಶಯದಿಂದ ಅಪಾರ ನೀರು ಹರಿಸುತ್ತಿರುವ ಕಾರಣ ತುಂಗಭದ್ರಾ ನದಿಯಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ನದಿಗೆ ಹೊಂದಿಕೊಂಡಿರುವ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯ ಗ್ರಾಮಗಳಿಗೆ ತಹಶೀಲ್ದಾರ್‌ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

‘ಒಂದುವೇಳೆ ನದಿಯಲ್ಲಿ ನೀರಿನ ಹರಿವು ಇನ್ನಷ್ಟು ಹೆಚ್ಚಾದರೆ ಬೇರೆಡೆ ಸ್ಥಳಾಂತರಿಸಬೇಕಾಗುತ್ತದೆ. ಗ್ರಾಮಸ್ಥರು ಸಹಕಾರ ಕೊಡಬೇಕು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈತರು, ಕುರಿಗಾಹಿಗಳು ಜಾನುವಾರುಗಳನ್ನು ನದಿ ಪಾತ್ರಗಳಲ್ಲಿ ಮೇಯಿಸಲು ಕೊಂಡೊಯ್ಯದಂತೆ ತಿಳಿಸಿದ್ದಾರೆ.

ಯಾವುದೇ ಕ್ಷಣ ನೀರು

ತುಂಗಭದ್ರಾ ಜಲಾಶಯಕ್ಕೂ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಹಂಪಿ, ಕಂಪ್ಲಿ, ಸಿರುಗುಪ್ಪದ ನದಿ ಪಾತ್ರದ ಜನ ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ.

ಮಲೆನಾಡ ವಾತಾವರಣ

ವಾರದಿಂದ ಬಿಟ್ಟು ಬಿಟ್ಟು ಸತತವಾಗಿ ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ಗಣಿನಗರಿಯಲ್ಲಿ ಮಲೆನಾಡ ವಾತಾವರಣ ಸೃಷ್ಟಿಯಾಗಿದೆ. ಬೆಳಿಗ್ಗೆಯಿಂದ ಸಂಜೆ ವರೆಗೆ ಕಾರ್ಮೋಡ ಇರುತ್ತಿದೆ. ಸೂರ್ಯನ ದರ್ಶನ ಅಪರೂಪವಾಗಿದೆ.

ಗಣಿಗಾರಿಕೆಯಿಂದ ಕೆಂಪಾಗಿದ್ದ ಹೊಸಪೇಟೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಹಸಿರಿಗೆ ತಿರುಗಿವೆ. ಎಲ್ಲೆಡೆ ಹಸಿರಿನ ಹೊದಿಕೆ ನಿರ್ಮಾಣವಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು